ಲಾರ್ಡ್ಸ್‌ನಲ್ಲಿ ನಡೆದಿರುವ ಏಕದಿನ ಪಂದ್ಯಗಳಲ್ಲಿ ಹೆಚ್ಚು ಗೆದ್ದವರು ಯಾರು? ಗರಿಷ್ಠ, ಕನಿಷ್ಠ ರನ್ ಯಾರದ್ದು?

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ ಮೊದಲನೆಯದಾಗಿ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 2-1 ಅಂತರದ ಭರ್ಜರಿ ಜಯ ಸಾಧಿಸಿದ್ದು ಇದೀಗ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಕಣ್ಣಿಟ್ಟಿದೆ.
ಇತ್ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ನಿನ್ನೆ ( ಜುಲೈ 12 ) ನಡೆದ ಪ್ರಥಮ ಪಂದ್ಯದ ಮೂಲಕ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸುವುದರ ಮೂಲಕ ಏಕದಿನ ಸರಣಿಯಲ್ಲಿ ಗೆಲುವಿನ ಖಾತೆ ತೆರೆದು 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪ್ರಥಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 110 ರನ್‌ಗಳಿಗೆ ಆಲ್ ಔಟ್ ಆಗಿ ಟೀಮ್ ಇಂಡಿಯಾಗೆ 111 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 114 ರನ್ ಕಲೆಹಾಕಿ ಇದೀಗ ದ್ವಿತೀಯ ಏಕದಿನ ಪಂದ್ಯದಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.
1814ರಲ್ಲಿ ನಿರ್ಮಾಣವಾದ ಈ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ 1972ರ ಆಗಸ್ಟ್ 26ರಂದು ಏಕದಿನ ಪಂದ್ಯ ಆಯೋಜನೆಯಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಟ್ಟು 67 ಏಕದಿನ ಪಂದ್ಯಗಳು ನಡೆದಿದ್ದು, ಈ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ, ಈ ಕ್ರೀಡಾಂಗಣದಲ್ಲಿ ದಾಖಲೆಯಾದ ಅತಿ ಹೆಚ್ಚು ರನ್ ಮತ್ತು ಅತಿ ಕಡಿಮೆ ರನ್ ಎಷ್ಟು ಹಾಗೂ ಯಾವ ಆಟಗಾರ ಈ ಕ್ರೀಡಾಂಗಣದಲ್ಲಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದಿದ್ದಾರೆ ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ ಓದಿ.

ನಡೆದಿರುವ ಏಕದಿನ ಪಂದ್ಯಗಳಲ್ಲಿ ಯಾರು ಎಷ್ಟು ಗೆದ್ದಿದ್ದಾರೆ?
ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ಒಟ್ಟು 67 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ಜರುಗಿದ್ದು, ಆತಿಥೇಯ ಇಂಗ್ಲೆಂಡ್ 25 ಪಂದ್ಯಗಳಲ್ಲಿ ಜಯ ಸಾಧಿಸಿದೆ, ಪ್ರವಾಸಿ ತಂಡಗಳು 27 ಪಂದ್ಯಗಳಲ್ಲಿ ಗೆದ್ದಿವೆ ಹಾಗೂ ಇಂಗ್ಲೆಂಡೇತರ ತಂಡಗಳ ನಡುವೆ 11 ಪಂದ್ಯಗಳು ಜರುಗಿವೆ. ಇನ್ನುಳಿದಂತೆ ಈ ಕ್ರೀಡಾಂಗಣದಲ್ಲಿ 2 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿದ್ದರೆ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಮುಕ್ತಾಯಗೊಂಡಿದೆ.

ಕ್ರೀಡಾಂಗಣದಲ್ಲಿ ದಾಖಲಾದ ಅತ್ಯಧಿಕ ರನ್ ಮತ್ತು ಕಡಿಮೆ ರನ್
ಗರಿಷ್ಠ ರನ್: 1975ರ ಜೂನ್ 7ರಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದಿದ್ದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 334 ರನ್ ಕಲೆಹಾಕಿತ್ತು ಹಾಗೂ ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಲಾರ್ಡ್ಸ್ ಕ್ರೀಡಾಂಗಣದಲ್ಲಿ ದಾಖಲಾದ ತಂಡದ ಗರಿಷ್ಠ ರನ್ ಆಗಿದೆ.
ಕನಿಷ್ಠ ರನ್: 2013ರ ಜುಲೈ 13ರಂದು ನಡೆದಿದ್ದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 107 ರನ್‌ಗಳಿಗೆ ಆಲ್ ಔಟ್ ಆಗಿತ್ತು ಹಾಗೂ ಇದು ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತೀ ಕಡಿಮೆ ತಂಡದ ಮೊತ್ತವಾಗಿದೆ.

ಲಾರ್ಡ್ಸ್ ಅಂಗಳದಲ್ಲಿ ಅತಿ ಹೆಚ್ಚು ರನ್ ಮತ್ತು ವಿಕೆಟ್ ಗಳಿಸಿದ ಸಕ್ರಿಯ ಆಟಗಾರರು
ಲಾರ್ಡ್ಸ್ ಕ್ರಿಕೆಟ್ ಅಂಗಳದಲ್ಲಿ ಸಕ್ರಿಯರಾಗಿರುವ ಆಟಗಾರರ ಪೈಕಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರ ಜೋ ರೂಟ್. ಲಾರ್ಡ್ಸ್ ಕ್ರೀಡಾಂಗಣದಲ್ಲಿ 8 ಏಕದಿನ ಪಂದ್ಯಗಳನ್ನಾಡಿರುವ ಜೋ ರೂಟ್ 2 ಅರ್ಧ ಶತಕ ಮತ್ತು 1 ಶತಕವನ್ನೊಳಗೊಂಡಂತೆ 365 ರನ್ ಕಲೆಹಾಕಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಸಕ್ರಿಯ ಬೌಲರ್ ಎಂದರೆ ಜೇಮ್ಸ್ ಆ್ಯಂಡರ್ಸನ್. ಜಿಮ್ಮಿ ಈ ಕ್ರೀಡಾಂಗಣದಲ್ಲಿ ಒಟ್ಟು 16 ಏಕದಿನ ಪಂದ್ಯಗಳನ್ನಾಡಿ 19 ವಿಕೆಟ್ ಪಡೆದಿದ್ದಾರೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವೈಯಕ್ತಿಕ ಏಕದಿನ ರನ್ ಗಳಿಸಿರುವ ದಾಖಲೆ ವೆಸ್ಟ್ ಇಂಡೀಸ್ ತಂಡದ ಸರ್ ವಿವಿಯನ್ ರಿಚರ್ಡ್ಸ್ ಹೆಸರಿನಲ್ಲಿದೆ. 1973ರ ಜೂನ್ 23ರಂದು ಇಂಗ್ಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರಿಚರ್ಡ್ಸ್ 157 ಎಸೆತಗಳಲ್ಲಿ ಅಜೇಯ 138 ರನ್ ದಾಖಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications