ಮೊಹಮ್ಮದ್ ಶಮಿಯನ್ನು ಹೊಗಳಲು ಹೋಗಿ ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಸೆಹ್ವಾಗ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು ಆದರೆ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ 151 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದೆ. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲಾ ಔಟ್ ಆಗಿ ತಂಡ ಸಂಕಷ್ಟದಲ್ಲಿದ್ದಾಗ ಮೊಹಮ್ಮದ್ ಶಮಿ ಮತ್ತು ಜಸ್ ಪ್ರೀತ್ ಬುಮ್ರಾ 89 ರನ್‌ಗಳ ಜತೆಯಾಟವಾಡುವ ಮೂಲಕ ಟೀಮ್ ಇಂಡಿಯಾವನ್ನು ಸೋಲಿನ ಸುಳಿಯಿಂದ ಪಾರುಮಾಡಿದರು.
ಹೀಗೆ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮೊಹಮ್ಮದ್ ಶಮಿ ಬ್ಯಾಟಿಂಗ್ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ 'ಮೊಹಮ್ಮದ್ ಶಮಿ ಬಾರಿಸಿದ ಕವರ್ ಡ್ರೈವ್ ಶಾಟ್ ನೋಡಿ, ವಿರಾಟ್ ಕೊಹ್ಲಿಗೂ ಸಹ ಈ ರೀತಿಯ ನಿಖರವಾದ ಕವರ್ ಡ್ರೈವ್ ಬಾರಿಸುವುದು ಅಸಾಧ್ಯ' ಎಂದು ಹೇಳಿಕೆ ನೀಡುವುದರ ಮೂಲಕ ಇದೀಗ ವಿವಾದ ಸೃಷ್ಟಿಸಿದ್ದಾರೆ. ಭಾರತದ ಕವರ್ ಡ್ರೈವ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ತಾವು ಹೊಡೆಯುವ ಕವರ್ ಡ್ರೈವ್ ಹೊಡೆತಕ್ಕೆ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಮೊಹಮ್ಮದ್ ಶಮಿ ಬ್ಯಾಟಿಂಗ್ ಶೈಲಿಗೆ ವಿರಾಟ್ ಕೊಹ್ಲಿಯನ್ನು ಹೋಲಿಸಿ ಕೆಳಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಮೊಹಮ್ಮದ್ ಶಮಿ ಕವರ್ ಡ್ರೈವ್ ಬಗ್ಗೆ ವಿರೇಂದ್ರ ಸೆಹ್ವಾಗ್ ಹೇಳಿದ್ದಿಷ್ಟು
'ಮೊಹಮ್ಮದ್ ಶಮಿ ಬಾರಿಸಿದ ಕವರ್ ಡ್ರೈವ್ ನೋಡಿ, ವಿರಾಟ್ ಕೊಹ್ಲಿಯೂ ಸಹ ಈ ರೀತಿಯ ಕವರ್ ಡ್ರೈವ್ ಬಾರಿಸಲು ಆಗುವುದಿಲ್ಲ. ಮೊಹಮ್ಮದ್ ಶಮಿ ಮತ್ತು ಜಸ್ ಪ್ರೀತ್ ಬುಮ್ರಾ ಅತ್ಯುತ್ತಮ ಜೊತೆಯಾಟವನ್ನು ಆಡಿದರು. ಇಂಗ್ಲೆಂಡ್ ತಂಡದ ಬೌಲರ್‌ಗಳಿಗೆ ವಿಕೆಟ್ ತೆಗೆಯುವ ಅವಕಾಶವನ್ನು ನೀಡದೇ ಬ್ಯಾಟಿಂಗ್ ಮಾಡಿದ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯ ಬ್ಯಾಟಿಂಗ್ ವೈಖರಿ ನಿಖರವಾಗಿತ್ತು, ಎಸೆತಗಳನ್ನು ಎದುರಿಸುತ್ತಿದ್ದ ವಿಧಾನ ನಿಖರವಾಗಿತ್ತು, ಅವರಿಬ್ಬರ ಸಂಪೂರ್ಣ ಆಟವೇ ನಿಖರವಾಗಿತ್ತು' ಎಂದು ಮೊಹಮ್ಮದ್ ಶಮಿ ಮತ್ತು ಜಸ್ ಪ್ರೀತ್ ಬುಮ್ರಾ ಕುರಿತು ವಿರೇಂದ್ರ ಸೆಹ್ವಾಗ್ ಹೊಗಳಿಕೆಯ ಮಾತುಗಳನ್ನಾಡಿದರು.

ವಿರಾಟ್ ಕೊಹ್ಲಿ ಕವರ್ ಡ್ರೈವ್ ಸ್ಪೆಸಲಿಸ್ಟ್ ಎಂಬುದು ಎಲ್ಲರಿಗೂ ಗೊತ್ತು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲ ತಿಂಗಳುಗಳಿಂದ ಕಳಪೆ ಪ್ರದರ್ಶನ ನೀಡುತ್ತಿರಬಹುದು. ಹಾಗೆಂದ ಮಾತ್ರಕ್ಕೆ ವಿರಾಟ್ ಕೊಹ್ಲಿ ಈ ಹಿಂದೆ ಬಾರಿಸಿದ ದೊಡ್ಡ ದೊಡ್ಡ ಹೊಡೆತಗಳು, ಅತ್ಯದ್ಭುತವಾದ ಕವರ್ ಡ್ರೈವ್ ಹೊಡೆತಗಳು ಹಾಗೂ ನೀಡಿದ ಅತ್ಯುತ್ತಮ ಪ್ರದರ್ಶನಗಳನ್ನು ಮರೆಯಬಾರದು. ಟೀಮ್ ಇಂಡಿಯಾ ತಂಡಕ್ಕೆ ಸಾಕಷ್ಟು ಗೆಲುವುಗಳನ್ನು ತಂದು ಕೊಟ್ಟಿರುವ ಹಾಗೂ ಭಾರತದ ಆಟಗಾರನಾಗಿ ವಿಶ್ವದಲ್ಲಿಯೇ ಹಲವಾರು ಮೈಲಿಗಲ್ಲುಗಳನ್ನು ನೆಟ್ಟಿರುವ ವಿರಾಟ್ ಕೊಹ್ಲಿಯನ್ನು ಈ ರೀತಿಯಾಗಿ ಹೋಲಿಕೆ ಮಾಡಿ ಅವಮಾನಿಸುವುದು ಸರಿಯಲ್ಲ ಎಂದು ಸೆಹ್ವಾಗ್ ಹೇಳಿಕೆ ವಿರುದ್ಧ ಕೊಹ್ಲಿ ಅಭಿಮಾನಿಗಳು ಕಿಡಿಕಾರಿದ್ದಾರೆ.

ಬುಮ್ರಾ ಮತ್ತು ಶಮಿಯನ್ನು ದ್ರಾವಿಡ್ ಮತ್ತು ಲಕ್ಷ್ಮಣ್ ಜೊತೆ ಹೋಲಿಸಿದ ಸೆಹ್ವಾಗ್!
ಇಂಗ್ಲೆಂಡ್ ವಿರುದ್ಧ ಮೊಹಮ್ಮದ್ ಶಮಿ ಮತ್ತು ಜಸ್ ಪ್ರೀತ್ ಬುಮ್ರಾ ಜತೆಯಾಟವನ್ನು ಪ್ರಶಂಸಿಸಿದ ವಿರೇಂದ್ರ ಸೆಹ್ವಾಗ್ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಜತೆಯಾಟವನ್ನು ನೋಡಿದರೆ 2001ರಲ್ಲಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಆಡಿದ್ದ 376 ರನ್ ಜತೆಯಾಟ ನೆನಪಿಗೆ ಬರುತ್ತದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications