IND vs ENG 3rd ODI: ರಿಷಭ್ ಪಂತ್ ಚೊಚ್ಚಲ ಶತಕ; ಇಂಗ್ಲೆಂಡ್‌ಗೆ ಮುಖಭಂಗ; ಭಾರತಕ್ಕೆ ಸರಣಿ ಜಯ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ಆಲ್‌ರೌಂಡ್ ಆಟದಿಂದ ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸರಣಿ ವಶಪಡಿಸಿಕೊಂಡಿದೆ. ತವರಿನಲ್ಲಿ ಭಾರತದೆದುರು ಮಂಡಿಯೂರಿದ ಇಂಗ್ಲೆಂಡ್ ತಂಡ 2-1 ಅಂತರದಿಂದ ಸರಣಿ ಸೋತಿದೆ.
ಮ್ಯಾಂಚೆಸ್ಟರ್‌ನಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಎಲ್ಲ ವಿಭಾಗಗಳಲ್ಲಿ ಮೇಲುಗೈ ಸಾಧಿಸಿತು. ಪ್ರವಾಸಿ ತಂಡದ ಪರವಾಗಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಪ್ರದರ್ಶನ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಅಮೋಘ ಚೊಚ್ಚಲ ಏಕದಿನ ಶತಕದ ನೆರವಿನಿಂದ 260 ರನ್‌ಗಳನ್ನು ಚೇಸ್ ಮಾಡಿ ಗೆದ್ದಿತು.
260 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ 42.1 ಓವರ್‌ಗಳಲ್ಲಿ 261 ರನ್ ಗಳಿಸಿ 5 ವಿಕೆಟ್ ಮತ್ತು 47 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಭಾರತ ಪರವಾಗಿ ಹಾರ್ದಿಕ್ ಪಾಂಡ್ಯ (71) ಮತ್ತು ರಿಷಭ್ ಪಂತ್ ಅಜೇಯ (125) ಅವರ ಐದನೇ ಜೊತೆಯಾಟದಲ್ಲಿ 133 ರನ್ ಪೇರಿಸಿದ್ದು, ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಜುಗಲ್‍ಬಂದಿ
ಭಾರತ ತಂಡ 260 ರನ್‌ಗಳ ಗುರಿಯನ್ನು ಬೆನ್ನತ್ತಿದಾಗ ಆರಂಭದಲ್ಲಿಯೇ ಶಿಖರ್ ಧವನ್(1) ವಿಕೆಟ್ ಕಳೆದುಕೊಂಡಿತು. ನಂತರ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ನಾಯಕ ರೋಹಿತ್ ಶರ್ಮಾ (17) ಟೋಪ್ಲೆ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು. ಇನ್ನು ವಿರಾಟ್ ಕೊಹ್ಲಿ (17) ಆರಂಭದಲ್ಲಿ ಉತ್ತಮವಾಗಿ ಕಂಡುಬಂದರೂ, ನಂತರ ಆಟಕ್ಕೆ ಹೊಂದುಕೊಳ್ಳುತ್ತಿರುವಾಗಲೇ ನಿರಾಸೆ ಮೂಡಿಸಿದರು.
ಕೊಹ್ಲಿ ಔಟಾದ ಬಳಿಕ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್(28 ಎಸೆತಗಳಲ್ಲಿ 16 ರನ್) ಹೆಚ್ಚು ಸ್ಕೋರ್ ಮಾಡದೇ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಜುಗಲ್‍ಬಂದಿ ಇಂಗ್ಲೆಂಡ್ ತಂಡದ ಸರಣಿ ಗಲುವಿಗೆ ಕಂಟಕವಾದರು. ಭರ್ಜರಿ ಶತಕ ಬಾರಿಸಿ ಗೆಲುವಿನ ರೂವಾರಿಯಾದ ರಿಷಭ್ ಪಂತ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಕಳೆದ ಪಂದ್ಯದ ಹೀರೋ ರೀಸ್ ಟೋಪ್ಲೆ 7 ಓವರ್‌ಗಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಕ್ರೇಗ್ ಓವರ್‌ಟನ್ ಮತ್ತು ಬ್ರೈಡನ್ ಕಾರ್ಸೆ ತಲಾ ಒಂದೊಂದು ವಿಕೆಟ್ ಪಡೆದರು. ಉಳಿದ ಬೌಲರ್‌ಗಳು ಭಾರತ ಬ್ಯಾಟಿಂಗ್ ಶಕ್ತಿ ನಿಯಂತ್ರಿಸಲಾಗಲಿಲ್ಲ.

259 ರನ್ ಮಾತ್ರ ಗಳಿಸಲು ಸಾಧ್ಯವಾಯಿತು
ಮಧ್ಯಮ ಕ್ರಮಾಂಕದಲ್ಲಿ ನಾಯಕ ಜೋಸ್ ಬಟ್ಲರ್ ಹಾಗೂ ಕೆಳ ಕ್ರಮಾಂಕದಲ್ಲಿ ಓವರ್ಟನ್ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಇಂಗ್ಲೆಂಡ್ ತಂಡ 259 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.
ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕ ಜೇಸನ್ ರಾಯ್ ಹೊರತುಪಡಿಸಿ ಉಳಿದವರು ಮಿಂಚಲು ವಿಫಲರಾದರು. ಪ್ರಮುಖ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತದ ಕೊಡುಗೆಯನ್ನು ನೀಡಲು ಸಂಪೂರ್ಣವಾಗಿ ವಿಫಲವಾದರು. 74 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ಬಟ್ಲರ್ (60) ಮತ್ತು ಮೋಯಿನ್ ಅಲಿ (34) ಆಸರೆಯಾದರು.

ಇಂಗ್ಲೆಂಡ್‌ಗೆ ಹಾರ್ದಿಕ್ ಪಾಂಡ್ಯ ಆಘಾತ
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದ್ದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಅವರು ಪ್ರಮುಖ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರದಂತೆ ನೋಡಿಕೊಂಡರು. ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಜೇಸನ್ ರಾಯ್ ಅವರನ್ನು 41 ರನ್‌ಗ ಳಿಸಿದ್ದಾಗ ಔಟ್ ಮಾಡಿದ ಪಾಂಡ್ಯ, ನಂತರ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ವಿಕೆಟ್ ಕೂಡ ಪಡೆದರು.
ಹಾರ್ದಿಕ್ ಪಾಂಡ್ಯಗೂ ಮೊದಲು ಇಂಗ್ಲೆಂಡ್‌ನ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದು ಮೊಹಮ್ಮದ್ ಸಿರಾಜ್. ಆರಂಭಿಕ ದಾಂಡಿಗ ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ ಅವರನ್ನು ಸೊನ್ನೆಗೆ ಔಟ್ ಮಾಡಿದರು. ಅನಂತರ ಹಾರ್ದಿಕ್ ಪಾಂಡ್ಯ 4 ವಿಕೆಟ್ ಪಡೆದು ಮಿಂಚಿದರೆ, ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 3 ವಿಕೆಟ್ ಪಡೆದರು.

ಇಂಗ್ಲೆಂಡ್‌ಗೆ ಆಸರೆಯಾಯ್ತು ಬಟ್ಲರ್- ಅಲಿ ಜೊತೆಯಾಟ
ಇನ್ನು ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿಯೂ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗದಂತೆ ಕಾಪಾಡಿದ್ದು ಮಧ್ಯಮ ಕ್ರಮಾಂಕದ ಆಟಗಾರರು. ಅದರಲ್ಲೂ ಮೊಯೀನ್ ಅಲಿ ಹಾಗೂ ನಾಯಕ ಜೋಸ್ ಬಟ್ಲರ್. ಈ ಇಬ್ಬರು ಆಟಗಾರರು ಸೇರಿ ಅರ್ಧ ಶತಕದ ಜೊತೆಯಾಟ ನೀಡುವ ಮೂಲಕ ಇಂಗ್ಲೆಂಡ್ ತಂಡವನ್ನು ರಕ್ಷಿಸಿದರು. ಮೊಯೀನ್ ಅಲಿ 34 ರನ್‌ಗಳ ಕೊಡುಗೆ ನೀಡಿದರೆ ಜೋಸ್ ಬಟ್ಲರ್ 60 ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications