Ind vs Eng: 2ನೇ ಟಿ20 ಪಂದ್ಯದಲ್ಲಿಯೂ ಭಾರತ ಅಬ್ಬರ: ಪಂದ್ಯ ಗೆಲ್ಲಲು ಕಾರಣ ಈ 4 ಅಂಶಗಳು!

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ಅಮೋಘ ಪ್ರದರ್ಶನ ನೀಡಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿಯಿದ್ದು ಭಾನುವಾರ ಈ ಪಂದ್ಯ ಆಯೋಜನೆಯಾಗಲಿದೆ.
ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ 50 ರನ್‌ಗಳ ಅಂತರದ ಗೆಲುವು ಸಾಧಿಸಿದ್ದ ಈ ಪಂದ್ಯದಲ್ಲಿ 49 ರನ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎರಡು ಪಂದ್ಯಗಳಲ್ಲಿಯೂ ಅಮೋಘ ಪ್ರದರ್ಶನ ನೀಡುವ ಮೂಲಕ ಅರ್ಹವಾಗಿಯೇ ಸರಣಿ ಗೆದ್ದುಕೊಂಡಿದೆ. ಇದೀಗ ಭಾರತದ ಕಣ್ಣು ಸರಣಿಯನ್ನು ವೈಟ್‌ವಾಶ್ ಮಾಡುವತ್ತ ನೆಟ್ಟಿದೆ. ಟೆಸ್ಟ್ ಸರಣಿ ಅಂತಿಮ ಪಂದ್ಯದಲ್ಲಿ ಸೋತ ನೋವನ್ನು ಭಾರತ ಚುಟುಕು ಸರಣಿಯಲ್ಲಿ ತೀರಿಸಿಕೊಂಡಿದೆ.
ಭಾರತ ಎರಡನೇ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ಆತಿಥೇಯ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಈ ಗೆಲುವಿಗೆ ಕಾರಣವಾದ ಪ್ರಮುಖ ನಾಲ್ಕು ಸಂಗತಿಗಳು ಯಾವುದು? ಇಲ್ಲಿದೆ ಮಾಹಿತಿ

ಪವರ್‌ಪ್ಲೇನ ಅದ್ಭುತ ಬಳಕೆ
ಕಳೆದ ವಿಶ್ವಕಪ್‌ನಲ್ಲಿ ಭಾರತ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದು ಪವರ್‌ಪ್ಲೇಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿಫಲವಾಗಿದ್ದು. ಈ ವಿಚಾರವನ್ನು ಭಾರತ ವಿಶ್ವಕಪ್ ಮುಕ್ತಾಯದ ಬಳಿಕ ಗಂಭೀರವಾಗಿ ಪರಿಗಣಿಸಿತ್ತು. ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿಯೂ ಭಾರತ ತಂಡ ಪವರ್‌ಪ್ಲೇಯನ್ನು ಉತ್ತಮವಾಗಿ ಬಳಸಿಕೊಂಡಿದೆ. ಎರಡನೇ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ರಿಷಬ್ ಪಂತ್ ಸ್ಪೋಟಕ ಆರಂಭವನ್ನು ನೀಡಿದರು. ನಾಯಕ ರೋಹಿತ್ 20 ಎಸೆತಗಳಲ್ಲಿ 31 ರನ್ ಬಾರಿಸಿ ಮಿಂಚಿದರೆ ಪಂತ್ 15 ಎಸೆತಗಳಲ್ಲಿ 26 ರನ್ ಸಿಡಿಸಿದರು. ಈ ಜೊಡಿ ಮೊದಲ ವಿಕೆಟ್‌ಗೆ ಕೇವಲ 4.5 ಓವರ್‌ಗಳಲ್ಲಿ 49 ರನ್‌ಗಳ ಜೊತೆಯಾಟ ನೀಡಿತು.

ರವೀಂದ್ರ ಜಡೇಜಾ ಬೊಂಬಾಟ್ ಬ್ಯಾಟಿಂಗ್
ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನಿಡಿ ಟೀಕೆಗೆ ಗುರಿಯಾಗಿದ್ದ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಲಯವನ್ನು ಕಂಡುಕೊಂಡಿದ್ದರು. ಇದೀಗ ಚುಟುಕು ಮಾದರಿಯಲ್ಲಿಯೂ ಈ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ. ಉತ್ತಮ ಆರಂಭದ ಬಳಿಕ ಕುಸಿತ ಕಂಡ ಭಾರತದ ಪರವಾಗಿ ಬ್ಯಾಟಿಂಗ್ ನಡೆಸಿದ ಜಡ್ಡು ತಂಡಕ್ಕೆ ಆಸರೆಯಾದರು. 29 ಎಸೆತಗಳಲ್ಲಿ 46 ರನ್‌ಗಳಿಸುವ ಮೂಲಕ ಜಡೇಜಾ ಭಾರತದ ಮೊತ್ತ 170ಕ್ಕೆ ತಲುಪಲು ಕಾರಣವಾದರು. ಜಡೇಜಾ ಅವರ ಈ ಬ್ಯಾಟಿಂಗ್ ಪ್ರದರ್ಶನ ಭಾರತಕ್ಕೆ ದೊಡ್ಡ ಬಲ ನೀಡಿತು.

ಮುಂದುವರಿದ ಭುವಿ ಮ್ಯಾಜಿಕ್
ಇನ್ನು ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಅದ್ಭುತ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ. ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆಯುವ ಮೂಲಕ ಆತಿಥೆಯರಿಗೆ ಮೊದಲ ಆಘಾತ ನೀಡಿದರು. ಜೇಸನ್ ರಾಯ್ ಶೂನ್ಯ ಸುತ್ತಿ ಫೆವಿಲಿಯನ್‌ಗೆ ಸೇರಿಕೊಂಡರು. ನಂತರ ತಮ್ಮ ಮುಂದಿನ ಓವರ್‌ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ವಿಕೆಟ್‌ಅನ್ನು ಕುಡ ಭುವನೇಶ್ವರ್ ಕುಮಾರ್ ಕೆಡವಿವಲ್ಲಿ ಯಶಸ್ವಿಯಾದರು. ಈ ಮೂಲಕ ಪವರ್‌ಪ್ಲೇನಲ್ಲಿ ಎದುರಾಳಿಗೆ ಆಘಾತ ನೀಡುವುದನ್ನು ಮುಂದುವರಿಸಿದ್ದಾರೆ.

ಬೂಮ್ರಾ-ಚಹಲ್ ಮೋಡಿ
ಇನ್ನು ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಕೂಡ ವಿಕೆಟ್ ಬೇಟೆಯಾಡುವುದನ್ನು ಮುಂದುವರಿಸಿರುವುದು ಭಾರತಕ್ಕೆ ಸಂತಸದ ಸಂಗತಿ. ಅಪಾಯಕಾರಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟನ್ ವಿಕೆಟ್ ಪಡೆಯುವ ಮೂಲಕ ಬೂಮ್ರಾ ಪವರ್‌ಪ್ಲೇನಲ್ಲಿ ಮೂರನೇ ಯಶಸ್ಸು ತಂದುಕೊಟ್ಟರು. ನಂತರ ಯುವ ಆಟಗಾರ ಸ್ಯಾಮ್ ಕರನ್ ಕೂಡ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಇನ್ನು ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೂಡ ಎರಡು ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ಡೇವಿಡ್ ಮಲನ್ ಹಾಗೂ ಹ್ಯಾರಿ ಬ್ರೂಕ್ ಚಾಹಲ್‌ಗೆ ವಿಕೆಟ್ ಒಪ್ಪಿಸಿದರು.
ಇತ್ತಂಡಗಳ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್
ಇಂಗ್ಲೆಂಡ್: ಜೇಸನ್ ರಾಯ್, ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕುರಾನ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ರಿಚರ್ಡ್ ಗ್ಲೀಸನ್, ಮ್ಯಾಥ್ಯೂ ಪಾರ್ಕಿನ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications