ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಬಾರಿಸಿದ ಒಂದು ಶತಕದಿಂದ ನಿರ್ಮಾಣವಾದ ದಾಖಲೆಗಳು ಅಷ್ಟಿಷ್ಟಲ್ಲ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅತ್ಯದ್ಬುತ ಆರಂಭವನ್ನು ಮಾಡಿದರು. ರೋಹಿತ್ ಶರ್ಮಾ ಜವಾಬ್ದಾರಿಯುತ ಆಟವನ್ನು ಆಡುವುದರ ಮೂಲಕ 83 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ ಕೆಎಲ್ ರಾಹುಲ್ ಮೊದಲ ದಿನದಾಟದಂತ್ಯಕ್ಕೆ 248 ಎಸೆತಗಳಲ್ಲಿ ಅಜೇಯ 127 ರನ್ ಗಳಿಸುವುದರ ಮೂಲಕ ಅತ್ಯದ್ಭುತ ಪ್ರದರ್ಶನವನ್ನು ನೀಡಿ ಮಿಂಚಿದ್ದಾರೆ.
ಮೊದಲನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ದಿನ ಅಕ್ಷರಶಃ ಮೇಲುಗೈ ಸಾಧಿಸಿದೆ. ಅದರಲ್ಲಿಯೂ ಕೆಎಲ್ ರಾಹುಲ್ ಆಡಿದ ಶತಕದಾಟ ಟೀಮ್ ಇಂಡಿಯಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು ಎಂದರೆ ತಪ್ಪಾಗಲಾರದು. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಮಿಂಚಿದ್ದ ಕೆಎಲ್ ರಾಹುಲ್ 84 ರನ್ ಗಳಿಸಿ ಶತಕ ವಂಚಿತರಾಗಿದ್ದರು. ಆದರೆ ಇದೀಗ ಲಾರ್ಡ್ಸ್ ಅಂಗಳದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸುವುದರ ಮೂಲಕ ಕೆಎಲ್ ರಾಹುಲ್ ತಮ್ಮ ಟೆಸ್ಟ್ ಕ್ರಿಕೆಟ್‌ನ ಆರನೇ ಶತಕವನ್ನು ಪೂರೈಸಿಕೊಂಡಿದ್ದಾರೆ.
ಹೀಗೆ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯದ್ಭುತ ಶತಕ ಬಾರಿಸಿ ಮಿಂಚಿರುವ ಕೆಎಲ್ ರಾಹುಲ್ ಹಲವಾರು ದಾಖಲೆ ಮತ್ತು ಮೈಲಿಗಲ್ಲುಗಳನ್ನು ಸೃಷ್ಟಿಸಿದ್ದಾರೆ. ಹೀಗೆ ತಮ್ಮ ಆರನೇ ಟೆಸ್ಟ್ ಶತಕದ ಮೂಲಕ ಕೆಎಲ್ ರಾಹುಲ್ ನಿರ್ಮಿಸಿರುವ ವಿವಿಧ ದಾಖಲೆಗಳ ವಿವರ ಈ ಕೆಳಕಂಡಂತಿದೆ ನೋಡಿ.

ಎಂ ಎಸ್ ಧೋನಿ ಮತ್ತು ಮನ್ಸೂರ್ ಅಲಿಖಾನ್ ಪಟೌಡಿ ಶತಕಗಳನ್ನು ಸರಿದೂಗಿಸಿದ ಕೆಎಲ್ ರಾಹುಲ್
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ವೃತ್ತಿ ಜೀವನದ ಆರನೇ ಟೆಸ್ಟ್ ಶತಕ ಬಾರಿಸಿದ ಕೆಎಲ್ ರಾಹುಲ್ ಭಾರತದ ಮಾಜಿ ನಾಯಕರುಗಳಾದ ಎಂ ಎಸ್ ಧೋನಿ ಮತ್ತು ಮನ್ಸೂರ್ ಅಲಿಖಾನ್ ಪಟೌಡಿ ಟೆಸ್ಟ್ ಶತಕಗಳನ್ನು ಸರಿದೂಗಿಸಿದ್ದಾರೆ. ಭಾರತದ ಮಾಜಿ ನಾಯಕರಾದ ಎಂ ಎಸ್ ಧೋನಿ ಮತ್ತು ಮನ್ಸೂರ್ ಅಲಿಖಾನ್ ಪಟೌಡಿ ಕೂಡ ಟೆಸ್ಟ್ ಜೀವನದಲ್ಲಿ ಒಟ್ಟು ತಲಾ 6 ಶತಕಗಳನ್ನು ಸಿಡಿಸಿದ್ದರು. ಇದೀಗ ಕೆಎಲ್ ರಾಹುಲ್ ಕೂಡ ತಮ್ಮ ಆರನೇ ಟೆಸ್ಟ್ ಶತಕವನ್ನು ಸಿಡಿಸಿದ್ದು ಎಂ ಎಸ್ ಧೋನಿ ಮತ್ತು ಮನ್ಸೂರ್ ಅಲಿಖಾನ್ ಪಟೌಡಿ ಜೀವಮಾನ ಟೆಸ್ಟ್ ಶತಕಗಳ ಮೈಲುಗಲ್ಲನ್ನು ಸರಿದೂಗಿಸಿದ್ದಾರೆ.

ಲಾರ್ಡ್ಸ್‌ನಲ್ಲಿ ಇಬ್ಬರ ಜೊತೆ ಶತಕದ ಜತೆಯಾಟವಾಡಿದ ಮೊದಲ ಭಾರತೀಯ ಕ್ರಿಕೆಟಿಗ!
ಕೆಎಲ್ ರಾಹುಲ್ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂಲಕ ವಿಭಿನ್ನವಾದ ಸಾಧನೆಯೊಂದನ್ನು ಮಾಡಿದ್ದಾರೆ. ಮೊದಲಿಗೆ ರೋಹಿತ್ ಶರ್ಮಾ ಜೊತೆ ಆಟವನ್ನಾಡಿದ ಕೆಎಲ್ ರಾಹುಲ್ ಮೊದಲ ವಿಕೆಟ್‍ಗೆ 126 ರನ್ ಜತೆಯಾಟವಾಡಿದರು. ನಂತರ ಮೂರನೇ ವಿಕೆಟ್‍ಗೆ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ಕೆಎಲ್ ರಾಹುಲ್ 117 ರನ್‌ಗಳ ಜತೆ ಆಟವನ್ನು ಆಡುವುದರ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 2 ಶತಕಗಳ ಜೊತೆಯಾಟವಾಡಿದ ಏಕೈಕ ಭಾರತೀಯ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಪರ ಅತಿಹೆಚ್ಚು ಒವರ್‌ಸೀಸ್ ಶತಕ ಬಾರಿಸಿದ ಎರಡನೇ ಆರಂಭಿಕ ಆಟಗಾರ!
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವುದರ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್‌ನ ಆರನೇ ಶತಕವನ್ನು ಪೂರೈಸಿದ ಕೆಎಲ್ ರಾಹುಲ್ ನಾಲ್ಕನೇ ಒವರ್‌ಸೀಸ್ ಶತಕವನ್ನು ಕೂಡ ಪೂರೈಸಿದರು. ಇದುವರೆಗೂ ಒಟ್ಟು 4 ಒವರ್‌ಸೀಸ್ ಶತಕಗಳನ್ನು ಬಾರಿಸಿರುವ ಕೆಎಲ್ ರಾಹುಲ್ ಅತಿ ಹೆಚ್ಚು ಒವರ್‌ಸೀಸ್ ಶತಕ ಬಾರಿಸಿರುವ ಭಾರತೀಯ ಆರಂಭಿಕ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ಪರ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅತಿಹೆಚ್ಚು ಒವರ್‌ಸೀಸ್ ಶತಕಗಳನ್ನು ಬಾರಿಸಿದ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಗವಾಸ್ಕರ್ ಒಟ್ಟು 15 ಒವರ್‌ಸೀಸ್ ಶತಕಗಳನ್ನು ಬಾರಿಸಿದ್ದಾರೆ.

ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದ ಹತ್ತನೇ ಭಾರತೀಯ!
ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇದುವರೆಗೂ ಕೇವಲ ಒಂಬತ್ತು ಭಾರತೀಯ ಕ್ರಿಕೆಟಿಗರು ಮಾತ್ರ ಶತಕವನ್ನು ಸಿಡಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಬಾರಿಸುವುದರ ಮೂಲಕ ಕೆಎಲ್ ರಾಹುಲ್ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ಹತ್ತನೇ ಭಾರತೀಯ ಕ್ರಿಕೆಟಿಗ ಎಂಬ ಮೈಲಿಗಲ್ಲನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸಿರುವ ಮೂರನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಈ ಹಿಂದೆ ಲಾರ್ಡ್ಸ್ ಅಂಗಳದಲ್ಲಿ ಭಾರತದ ಆರಂಭಿಕ ಆಟಗಾರರಾಗಿದ್ದ ವಿನೂ ಮಂಕಡ್ ಮತ್ತು ರವಿಶಾಸ್ತ್ರಿ ಶತಕಗಳನ್ನು ಬಾರಿಸಿದ್ದರು, ಈ ಇಬ್ಬರ ಬಳಿಕ ಇದೀಗ ಕೆಎಲ್ ರಾಹುಲ್ ಲಾರ್ಡ್ಸ್ ಅಂಗಳದಲ್ಲಿ ಆರಂಭಿಕ ಆಟಗಾರನಾಗಿ ಶತಕ ಬಾರಿಸಿದ್ದು ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸಿದ ಭಾರತದ ಮೂರನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ.
ಸದ್ಯ ಸೆಂಚುರಿ ಬಾರಿಸಿ ಮಿಂಚಿರುವ ಕೆಎಲ್ ರಾಹುಲ್ ಎರಡನೇ ದಿನದಾಟವನ್ನು ಆರಂಭಿಸಲಿದ್ದು, ಕೆಎಲ್ ರಾಹುಲ್ ಇನ್ನಿಂಗ್ಸ್ ಯಾವ ಮಟ್ಟಕ್ಕೆ ಹೋಗಿ ತಲುಪಲಿದೆ ಮತ್ತು ಮತ್ತೆ ಯಾವ ದಾಖಲೆಗಳನ್ನು ನಿರ್ಮಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications