ಓವಲ್ ಜಯದ ಮೂಲಕ ದೊಡ್ಡ ದಾಖಲೆ ಬರೆದ ಕೊಹ್ಲಿ; ಬೆಸ್ಟ್ ಕ್ಯಾಪ್ಟನ್ ಎನ್ನಲು ಇದಕ್ಕಿಂತ ಇನ್ನೇನು ಬೇಕು?

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ 4 ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 2-1 ಮುನ್ನಡೆಯನ್ನು ಸಾಧಿಸಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಮಳೆಯ ಕಾರಣದಿಂದಾಗಿ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು, ನಂತರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್‌ಗಳ ಅಮೋಘ ಗೆಲುವನ್ನು ಸಾಧಿಸಿತ್ತು, ಲೀಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಮ್ ಇಂಡಿಯಾದ ವಿರುದ್ಧ 76 ರನ್‌ಗಳ ಸರಣಿ ಗೆಲುವನ್ನು ಸಾಧಿಸಿತು ಹಾಗೂ ಇತ್ತೀಚೆಗಷ್ಟೇ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 157 ರನ್‌ಗಳ ಗೆಲುವನ್ನು ಸಾಧಿಸಿದೆ.
ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವೆ ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಮೊದಲ 3 ಪಂದ್ಯಗಳು ಮುಗಿದ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದ್ದವು. ಹೀಗಾಗಿ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ದೊಡ್ಡ ಮಟ್ಟದ ಕುತೂಹಲ ಹುಟ್ಟಿಕೊಂಡಿತ್ತು. ಬರೋಬ್ಬರಿ 50 ವರ್ಷಗಳ ನಂತರ ಯಾರೂ ಊಹಿಸಿರದ ರೀತಿಯಲ್ಲಿ ವಿರಾಟ್ ಕೊಹ್ಲಿ ಪಡೆ ಓವಲ್ ಕ್ರೀಡಾಂಗಣದಲ್ಲಿ ಗೆದ್ದು ಬೀಗಿತು.
ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ವಿರಾಟ್ ಕೊಹ್ಲಿ ಪಡೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದು ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್‌ಗಳ ಅಲ್ಪ ಮೊತ್ತವನ್ನು ಕಲೆ ಹಾಕಿತು. ಅತ್ತ ಇಂಗ್ಲೆಂಡ್ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ 290 ರನ್ ಗಳಿಸಿ ಮೊದಲನೇ ಇನ್ನಿಂಗ್ಸ್ ಬಳಿಕ 99 ರನ್‌ಗಳ ಮುನ್ನಡೆಯನ್ನು ಸಾಧಿಸಿತು. ಇನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ ಮಂಕಾಗಿದ್ದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 466 ರನ್ ಕಲೆ ಹಾಕುವುದರ ಮೂಲಕ ಇಂಗ್ಲೆಂಡ್ ತಂಡಕ್ಕೆ 368 ರನ್‌ಗಳ ಗುರಿಯನ್ನು ನೀಡಿತು. ಹೀಗೆ ಭಾರತ ನೀಡಿದ 368 ರನ್‌ಗಳ ಗುರಿಯನ್ನು ಬೆನ್ನತ್ತಲು ಪ್ರಯತ್ನಿಸಿದ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 157 ರನ್‌ಗಳ ಗೆಲುವನ್ನು ದಾಖಲಿಸಿ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಿದೆ.
ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ತನ್ನದೇ ಆದ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಹೌದು ಭಾರತ ತಂಡದ ಓರ್ವ ನಾಯಕನಾಗಿ ಇಂಗ್ಲೆಂಡ್ ನೆಲದಲ್ಲಿ ಭಾರತದ ಬೇರೆ ಯಾವುದೇ ನಾಯಕ ಕೂಡ ಮಾಡಲಾಗದ ದಾಖಲೆಗಳನ್ನು ವಿರಾಟ್ ಕೊಹ್ಲಿ ಈ ಪಂದ್ಯದ ಮೂಲಕ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ ನಿರ್ಮಿಸಿರುವ ಆ ಸಾರ್ವಕಾಲಿಕ ದಾಖಲೆಗಳ ವಿವರ ಮುಂದಿದೆ ನೋಡಿ..

ಇಂಗ್ಲೆಂಡ್ ನೆಲದಲ್ಲಿ 3 ಟೆಸ್ಟ್ ಪಂದ್ಯಗಳನ್ನು ಗೆದ್ದ ಚೊಚ್ಚಲ ಏಷ್ಯಾ ನಾಯಕ
ಹೌದು ಓವಲ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಜಯ ಸಾಧಿಸುವುದರ ಮೂಲಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಏಷ್ಯಾ ಖಂಡದ ಮೊದಲ ಕ್ರಿಕೆಟ್ ನಾಯಕ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದುವರೆಗೂ ಇಂಗ್ಲೆಂಡ್ ನೆಲದಲ್ಲಿ ನಡೆದಿರುವ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದೆ. ಇನ್ನುಳಿದಂತೆ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಕಪಿಲ್ ದೇವ್ ನಾಯಕತ್ವದಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

50 ವರ್ಷಗಳ ಬಳಿಕ ಓವಲ್ ಗೆಲುವು!
ಓವಲ್ ಕ್ರೀಡಾಂಗಣದಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಕೊನೆಯದಾಗಿ ಗೆದ್ದದ್ದು 1971ರಲ್ಲಿ. ಹೌದು, ಓವಲ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಮೊಟ್ಟಮೊದಲ ಬಾರಿಗೆ ಮತ್ತು ಕೊನೆಯದಾಗಿ ಟೆಸ್ಟ್ ಪಂದ್ಯವನ್ನು ಗೆದ್ದದ್ದು 1971ರಲ್ಲಿ. ಇದಾದ ಬಳಿಕ ಓವಲ್ ಕ್ರೀಡಾಂಗಣದಲ್ಲಿ ನಡೆದ ಹಲವಾರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭಾಗವಹಿಸಿದರೂ ಸಹ ಯಾವುದೇ ಪಂದ್ಯದಲ್ಲಿಯೂ ಜಯವನ್ನು ಸಾಧಿಸಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ 50 ವರ್ಷಗಳ ನಂತರ ಓವಲ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಗೆಲ್ಲುವಂತೆ ಮಾಡಿದೆ. ಇದುವರೆಗೂ ಓವಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟು 14 ಬಾರಿ ಮುಖಾಮುಖಿಯಾಗಿದ್ದು ಇಂಗ್ಲೆಂಡ್ 5 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಭಾರತ 2 ಪಂದ್ಯಗಳಲ್ಲಿ (1971 ಮತ್ತು 2021) ಮಾತ್ರ ಜಯ ಸಾಧಿಸಿದೆ ಹಾಗೂ ಇನ್ನುಳಿದ 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಓವಲ್ ಕ್ರೀಡಾಂಗಣದ ಈ ಗೆಲುವಿನ ಮೂಲಕ ವಿರಾಟ್ ಕೊಹ್ಲಿ 50 ವರ್ಷಗಳ ಬಳಿಕ ಓವಲ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸಿದ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

2007ರ ನಂತರ ಇಂಗ್ಲೆಂಡ್ ನೆಲದಲ್ಲಿ ಟ್ರೋಫಿಯನ್ನು ಬಿಟ್ಟುಕೊಡದ ಭಾರತದ ನಾಯಕ
2007ರ ನಂತರ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಎಲ್ಲಾ ಸರಣಿಯಲ್ಲಿಯೂ ಸಹ ಟೀಮ್ ಇಂಡಿಯಾ ಟ್ರೋಫಿಯನ್ನು ಸೋತು ತವರಿಗೆ ವಾಪಸ್ ಆಗಿತ್ತು. ಆದರೆ ಈ ಬಾರಿ ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಸರಣಿ ಸೋಲಿನಿಂದ ದೂರ ಸರಿದಿದೆ. ಹೀಗಾಗಿ ಐದನೇ ಪಂದ್ಯವನ್ನು ಸಹ ಟೀಮ್ ಇಂಡಿಯಾ ಗೆದ್ದರೆ ಟ್ರೋಫಿ ಭಾರತದ ಪಾಲಾಗಲಿದೆ ಅಥವಾ ಇಂಗ್ಲೆಂಡ್ ಜಯಗಳಿಸಿದರೆ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆ. ಈ ಕಾರಣದಿಂದಾಗಿ 2007ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟ್ರೋಫಿಯನ್ನು ಸೋಲದೇ ಉಳಿಸಿಕೊಳ್ಳುತ್ತಿರುವ ಮೊದಲ ಭಾರತದ ನಾಯಕ ಎಂಬ ಕೀರ್ತಿಗೂ ಸಹ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications