ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ 39 ವರ್ಷಗಳಿಂದ ಯಾರೂ ಮುಟ್ಟದ ದಾಖಲೆಯನ್ನು ಮಾಡಿದ ಸಿರಾಜ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಲಾರ್ಡ್ಸ್ ಅಂಗಳದಲ್ಲಿ 151 ರನ್‌ಗಳಿಂದ ಸೋಲಿಸಿದೆ. ಅಷ್ಟೆ ಅಲ್ಲದೆ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ 39 ವರ್ಷಗಳ ಹಳೆಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಭರ್ಜರಿ ಶತಕದ ನೆರವಿನಿಂದ 364 ರನ್ ಗಳಿಸಿತು ಹಾಗೂ ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್‌ನಲ್ಲಿ 391 ರನ್ ಗಳಿಸಿ 27 ರನ್ ಅಲ್ಪ ಮುನ್ನಡೆಯನ್ನು ಕಾಯ್ದುಕೊಂಡಿತು. ಹೀಗೆ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಎರಡೂ ತಂಡಗಳು ಸಹ ಪೈಪೋಟಿಯ ರನ್ ಕಲೆಹಾಕಿದವು. ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಐದನೇ ದಿನದಾಟದ ಆರಂಭವನ್ನು ಟೀಮ್ ಇಂಡಿಯಾ ಪರ ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ಮಾಡಿದರು. ಆದರೆ ಐದನೇ ದಿನದಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಪಂತ್ ಮತ್ತು ಇಶಾಂತ್ ಶರ್ಮಾ ಇಬ್ಬರೂ ಸಹ ಪೆವಿಲಿಯನ್ ಸೇರಿಕೊಂಡರು.
ತದನಂತರ ಒಂಬತ್ತನೇ ವಿಕೆಟ್‍ಗೆ ಜೊತೆಯಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಬಿಡಿಸಲಾಗದ 89 ರನ್‌ಗಳ ಜೊತೆಯಾಟವನ್ನು ಆಡಿದರು. ಮೊಹಮ್ಮದ್ ಶಮಿ ಅಜೇಯ 56 ಮತ್ತು ಜಸ್ ಪ್ರೀತ್ ಬುಮ್ರಾ ಅಜೇಯ 34 ರನ್ ಬಾರಿಸಿದ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 298 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 271 ರನ್‌ಗಳ ಗುರಿಯನ್ನು ನೀಡಿತು. ಆದರೆ ಮೊದಲನೇ ಇನ್ನಿಂಗ್ಸ್‌ನಲ್ಲಿ 391 ರನ್ ಬಾರಿಸಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಲಿದ್ದು ಪಂದ್ಯ ಡ್ರಾ ಆಗುವ ಸಂಭವ ಹೆಚ್ಚಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಭಾರತದ ಬೌಲರ್‌ಗಳ ಸತತ ಆಕ್ರಮಣದಿಂದ ನಲುಗಿ ಹೋದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು 120 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಇಂಗ್ಲೆಂಡ್ ಐತಿಹಾಸಿಕ ಹಿನ್ನೆಲೆಯಿರುವ, ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವಂತಹ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ 151 ರನ್‌ಗಳ ಸೋಲನ್ನು ಕಂಡಿದೆ. ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಆಂಗ್ಲರ ಪ್ರಮುಖ 4 ವಿಕೆಟ್‍ಗಳನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಪಡೆದ ಮೊಹಮ್ಮದ್ ಸಿರಾಜ್ ಲಾರ್ಡ್ಸ್ ಅಂಗಳದಲ್ಲಿ ಭಾರತೀಯರ ಪರ ನೂತನ ದಾಖಲೆಯನ್ನು ಮಾಡಿದ್ದಾರೆ. ಹೌದು ಲಾರ್ಡ್ಸ್ ಅಂಗಳದಲ್ಲಿ ಮೊಹಮ್ಮದ್ ಸಿರಾಜ್ ಸರಿದೂಗಿಸಿಕೊಂಡಿರುವ 39 ವರ್ಷಗಳ ಹಳೆಯ ದಾಖಲೆ ವಿವರ ಈ ಕೆಳಕಂಡಂತಿದೆ ಓದಿ..

39 ವರ್ಷಗಳ ಹಳೆಯ ದಾಖಲೆ ಸರಿದೂಗಿಸಿದ ಸಿರಾಜ್
ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಒಟ್ಟು 8 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಮೊದಲನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಮೊಹಮ್ಮದ್ ಸಿರಾಜ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ 4 ವಿಕೆಟ್‍ಗಳನ್ನು ಪಡೆದು ಮಿಂಚಿದ್ದಾರೆ. ಹೀಗಾಗಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಈ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ 1982ರಲ್ಲಿ ಕಪಿಲ್ ದೇವ್ ಮಾಡಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಹೌದು ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದ ಇಬ್ಬರು ಭಾರತೀಯರು ಎಂಬ ದಾಖಲೆ ಕಪಿಲ್ ದೇವ್ ಮತ್ತು ಮೊಹಮ್ಮದ್ ಸಿರಾಜ್ ಹೆಸರಿನಲ್ಲಿದೆ. 1982ರಲ್ಲಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಕಪಿಲ್ ದೇವ್ 8 ವಿಕೆಟ್ ಪಡೆದಿದ್ದರು, ಇದಾದ ಬಳಿಕ ಬೇರೆ ಯಾವುದೇ ಭಾರತೀಯ ಬೌಲರ್ ಕೂಡ ಲಾರ್ಡ್ಸ್ ಅಂಗಳದಲ್ಲಿ 8 ವಿಕೆಟ್ ಪಡೆದ ಸಾಧನೆಯನ್ನು ಮಾಡಿರಲಿಲ್ಲ. ಆದರೆ ಇದೀಗ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಲಾರ್ಡ್ಸ್‌ನಲ್ಲಿ 8 ವಿಕೆಟ್ ಪಡೆದಿರುವ ಮೊಹಮ್ಮದ್ ಸಿರಾಜ್ 39 ವರ್ಷಗಳ ಹಳೆಯ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ.

ಗಬ್ಬಾ ಟೆಸ್ಟ್ ನೆನಪಿಸಿದ ಸಿರಾಜ್
ಈ ಹಿಂದೆ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಗಬ್ಬಾ ಟೆಸ್ಟ್ ಎಷ್ಟರಮಟ್ಟಿಗೆ ಕುತೂಹಲ ಮತ್ತು ಮಹತ್ವವನ್ನು ಹುಟ್ಟುಹಾಕಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಆಸ್ಟ್ರೇಲಿಯಾ ಆಟಗಾರರು ಎಸೆದಿದ್ದ ಸವಾಲಿನ ಪಂದ್ಯವಾಗಿದ್ದ ಗಬ್ಬಾದಲ್ಲಿ ನಡೆದ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವುದರ ಮೂಲಕ ಆ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನೇ ಮೊಹಮ್ಮದ್ ಸಿರಾಜ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ನಡೆದ ಪಂದ್ಯದಲ್ಲಿಯೂ ತೋರಿಸಿದ್ದು, ಕ್ರಿಕೆಟ್ ವೀಕ್ಷಕರಿಗೆ ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಟೆಸ್ಟ್ ಪಂದ್ಯವನ್ನು ಮೊಹಮ್ಮದ್ ಸಿರಾಜ್ ನೆನಪಿಸಿದ್ದಾರೆ.

ಕಾಲೆಳೆದವರಿಗೆ ಉತ್ತರ ನೀಡಿದ ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್ ಕ್ರಿಕೆಟ್ ಜರ್ನಿ ಆರಂಭಿಸಿದಾಗ ಕೆಲ ನೆಟ್ಟಿಗರು ಮತ್ತು ಕ್ರಿಕೆಟ್ ಪಂಡಿತರು ಯಾವ ರೀತಿ ಕಾಲೆಳೆದರು ಮತ್ತು ಎಷ್ಟರ ಮಟ್ಟಿಗೆ ಟೀಕೆಗಳನ್ನು ಸಿರಾಜ್ ವಿರುದ್ಧ ಮಾಡಿದರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲಿಯೂ ಐಪಿಎಲ್ ವೇಳೆ ಮೊಹಮ್ಮದ್ ಸಿರಾಜ್ ತಮ್ಮ ಕೆಟ್ಟ ಬೌಲಿಂಗ್ ಪ್ರದರ್ಶನದಿಂದ ಸಾಕಷ್ಟು ಬಾರಿ ಟೀಕೆಗಳಿಗೆ ಒಳಗಾಗಿದ್ದರು. ನಿರಂತರವಾಗಿ ಮೊಹಮ್ಮದ್ ಸಿರಾಜ್ ಪ್ರದರ್ಶನವನ್ನು ಕಾಲೆಳೆಯುತ್ತಿದ್ದವರಿಗೆ ಮೊಹಮ್ಮದ್ ಸಿರಾಜ್ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಅತ್ಯದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಉತ್ತರ ನೀಡಿದ್ದಾರೆ. ತಮ್ಮ ಸಾಮರ್ಥ್ಯವನ್ನು ಅಳೆಯುತ್ತಿದ್ದವರಿಗೆ ತಮ್ಮ ಬೌಲಿಂಗ್‌ನ ನಿಜವಾದ ಸಾಮರ್ಥ್ಯವೇನು ಎಂಬುದನ್ನು ಮನವರಿಕೆ ಮಾಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications