ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆಗಸ್ಟ್ 12ರ ಬುಧವಾರದಂದು ಆರಂಭವಾದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ 3 ದಿನಗಳು ಮುಗಿದಿದ್ದು ಎರಡೂ ತಂಡಗಳು ಸಹ ತಮ್ಮ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್ ಮುಗಿಸಿವೆ.
ಟಾಸ್ ಸೋತು ಭಾರತ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಬಿಟ್ಟುಕೊಟ್ಟ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗೆ ಈ ಪಂದ್ಯದಲ್ಲಿಯೂ ಟಾಸ್ ಸೋತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು. ಹೀಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್ ಗಳಿಸಿತು. ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಬಂದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅತ್ಯುತ್ತಮ ಆರಂಭವನ್ನು ಮಾಡಿದರು.
ರೋಹಿತ್ ಶರ್ಮಾ ಮೊದಲನೇ ಇನ್ನಿಂಗ್ಸ್‌ನಲ್ಲಿ 83 ರನ್ ಬಾರಿಸಿ ಮಿಂಚಿದರೆ ಇತ್ತ ಕೆಎಲ್ ರಾಹುಲ್ ಲಾರ್ಡ್ಸ್ ಅಂಗಳದಲ್ಲಿ 129 ರನ್‌ಗಳ ಅಮೋಘ ಶತಕವನ್ನು ಸಿಡಿಸಿ ಅಬ್ಬರಿಸಿದರು. ಇನ್ನುಳಿದಂತೆ ವಿರಾಟ್ ಕೊಹ್ಲಿ 42, ರವೀಂದ್ರ ಜಡೇಜಾ 40 ಮತ್ತು ರಿಷಭ್ ಪಂತ್ 37 ರನ್ ಬಾರಿಸಿದ್ದು ಬಿಟ್ಟರೆ ಭಾರತದ ಬೇರೆ ಯಾವುದೇ ಆಟಗಾರ ಕೂಡ ಎರಡಂಕಿ ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಈ ರೀತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಕೆಲ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಮತ್ತೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನ
ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧ ಪ್ರಸ್ತುತ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿಯೂ ತಮ್ಮ ಕಳಪೆ ಪ್ರದರ್ಶನವನ್ನು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರು ಆಟಗಾರರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ಇಬ್ಬರು ಆಟಗಾರರಿಗೆ ಸಾಲು ಸಾಲು ಅವಕಾಶಗಳು ನೀಡುವುದರ ಬದಲು ಯುವ ಆಟಗಾರರಿಗೆ ಆದರೂ ಅವಕಾಶವನ್ನು ಕೊಡಿ ಎಂದು ನೆಟ್ಟಿಗರು ಅಪೇಕ್ಷಿಸಿದ್ದರು.

ಲಾರ್ಡ್ಸ್‌ನಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ
ಇದೀಗ ನೆಟ್ಟಿಗರ ಈ ಬೇಡಿಕೆಗೆ ತೃಪ್ತಿ ನೀಡುವಂತಹ ಫೋಟೋವೊಂದನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದು ಯುವ ಆಟಗಾರರಾದ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಕ್ವಾರಂಟೈನ್ ಮುಗಿಸಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಕಾಣಿಸಿಕೊಂಡಿದ್ದಾರೆ. 'ಹಲೋ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್, ಲಾರ್ಡ್ಸ್ ಕ್ರೀಡಾಂಗಣಕ್ಕೆ ಸುಸ್ವಾಗತ' ಎಂದು ಬರೆದುಕೊಳ್ಳುವುದರ ಮೂಲಕ ಬಿಸಿಸಿಐ ಈ ಇಬ್ಬರು ನೂತನ ಆಟಗಾರರಿಗೆ ಸ್ವಾಗತವನ್ನು ಕೋರಿದೆ.

ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ
ಹೀಗೆ ಲಾರ್ಡ್ಸ್ ಕ್ರೀಡಾಂಗಣಕ್ಕೆ ಪ್ರವೇಶಿಸಿರುವ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಶೀಘ್ರದಲ್ಲಿಯೇ ಅಭ್ಯಾಸಗಳನ್ನು ಆರಂಭಿಸಲಿದ್ದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಬದಲು ಈ ಇಬ್ಬರೂ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು. ಇನ್ನು ನೆಟ್ಟಿಗರು ಈಗಾಗಲೇ ಬಿಸಿಸಿಐ ಮಾಡಿರುವ ಈ ಟ್ವೀಟ್ ಕುರಿತು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು ಸತತವಾಗಿ ವಿಫಲರಾಗುತ್ತಿರುವ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಗೆ ವ್ಯರ್ಥವಾಗಿ ಅವಕಾಶಗಳನ್ನು ನೀಡುವುದರ ಬದಲು ಈ ಇಬ್ಬರಿಗೆ ಅವಕಾಶಗಳನ್ನು ನೀಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications