ಈ ಬಾರಿ ಭಾರತ ಪ್ರವಾಸದಲ್ಲಿ ಶತಾಯ ಗತಾಯ ಟೆಸ್ಟ್ ಸರಣಿಯನ್ನು ಗೆಲ್ಲಲೇ ಬೇಕು ಎಂದು ಇಂಗ್ಲೆಂಡ್ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ತನ್ನ ಬತ್ತಳಿಕೆಯಲ್ಲಿ ಒಂದೊಂದೆ ಬಾಣವನ್ನು ಬಿಡುತ್ತಿದೆ. ಇತ್ತೀಚಿಗೆ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೇರ್‌ಸ್ಟೋ ಭಾರತದಲ್ಲಿ ಪಿಚ್‌ಗಳ ಬಗ್ಗೆ ಮಾತನಾಡಿದ್ದರು. ಈಗ ಇಂಗ್ಲೆಂಡ್ ಬೋರ್ಡ್ ಭಾರತೀಯ ಆಟಗಾರನಿಗೆ ಮಹತ್ವದ ಜವಾಬ್ದಾರಿ ನೀಡಿದೆ.
ಭಾರತದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಗೆ ಇಂಗ್ಲೆಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಸುಮಾರು 9 ದಿನಗಳ ಕಾಲ ಅವರನ್ನು ಕೋಚಿಂಗ್ ಸ್ಟಾಫ್‌ನಲ್ಲಿ ಸೇರಿಸಲಾಗಿದೆ. ಕಾರ್ತಿಕ್ ಅವರನ್ನು ಇಂಗ್ಲೆಂಡ್ ಲಯನ್ಸ್ ತಂಡದ ಬ್ಯಾಟಿಂಗ್ ಸಲಹೆಗಾರರನ್ನಾಗಿ ಮಾಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಟೆಸ್ಟ್ ಸರಣಿ ಆಡಲು ಭಾರತ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಪಂದ್ಯ ನಡೆಯಬೇಕಿದೆ. ಈ ಅವಧಿಯಲ್ಲಿ ಕಾರ್ತಿಕ್ ಇಂಗ್ಲೆಂಡ್ ಆಟಗಾರರಿಗೆ ಬ್ಯಾಟಿಂಗ್ ನಲ್ಲಿ ನೆರವಾಗಲಿದ್ದಾರೆ.

ಕ್ರಿಕ್‌ಇನ್ಫೋದ ಸುದ್ದಿಯ ಪ್ರಕಾರ, ಕಾರ್ತಿಕ್ ಅವರನ್ನು ಇಂಗ್ಲೆಂಡ್ ಲಯನ್ಸ್‌ನ ಬ್ಯಾಟಿಂಗ್ ಸಲಹೆಗಾರರನ್ನಾಗಿ ಮಾಡಲಾಗಿದೆ. ಅವರು ಭಾರತದ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮಾಡಲು ಇಂಗ್ಲೆಂಡ್ ಆಟಗಾರರಿಗೆ ಸಹಾಯ ನೆರವಾಗುತ್ತಾರೆ. ಅಹಮದಾಬಾದ್‌ನಲ್ಲಿ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಪಂದ್ಯ ನಡೆಯಲಿದೆ. ಕಾರ್ತಿಕ್ ತಂಡದ ಮುಖ್ಯ ಕೋಚ್ ನೀಲ್ ಕಿಲ್ಲೆನ್, ಸಹಾಯಕರಾದ ರಿಚರ್ಡ್ ಡಾಸನ್ ಮತ್ತು ಕಾರ್ಲ್ ಹಾಪ್ಕಿನ್ಸನ್ ಅವರೊಂದಿಗೆ ಕೆಲಸ ಮಾಡುತ್ತಾರೆ. ಭಾರತದ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಕಾರ್ತಿಕ್ ಇಂಗ್ಲೆಂಡ್ ಆಟಗಾರರಿಗೆ ಸಲಹೆಗಳನ್ನು ನೀಡಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದರ ಮೊದಲ ಪಂದ್ಯ ಜನವರಿ 25 ರಿಂದ ಹೈದರಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈ ಸರಣಿಯ ಐದನೇ ಮತ್ತು ಕೊನೆಯ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಜನವರಿ 12 ರಿಂದ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಮೂರು ಅನಧಿಕೃತ ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಮೂರು ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಜನವರಿ 17 ರಿಂದ ಆರಂಭವಾಗಲಿದೆ. ಕೊನೆಯ ಪಂದ್ಯ ಫೆಬ್ರವರಿ 1 ರಂದು ನಡೆಯಲಿದೆ. ಇದಕ್ಕೂ ಮುನ್ನ ಜನವರಿ 12ರಿಂದ ಅಭ್ಯಾಸ ಪಂದ್ಯ ನಡೆಯಲಿದೆ.

ಇಂಗ್ಲೆಂಡ್ ಲಯನ್ಸ್ ತಂಡ: ಜೋಶ್ ಬೊಹಾನನ್ (ನಾಯಕ), ಕೇಸಿ ಆಲ್ಡ್ರಿಡ್ಜ್, ಬ್ರೇಡನ್ ಕಾರ್ಸೆ, ಜ್ಯಾಕ್ ಕಾರ್ಸನ್, ಜೇಮ್ಸ್ ಕೋಲ್ಸ್, ಮ್ಯಾಟ್ ಫಿಶರ್, ಕೀಟನ್ ಜೆನ್ನಿಂಗ್ಸ್, ಟಾಮ್ ಲಾಸ್, ಅಲೆಕ್ಸ್ ಲೀಸ್, ಡ್ಯಾನ್ ಮೌಸ್ಲಿ, ಕ್ಯಾಲಮ್ ಪಾರ್ಕಿನ್ಸನ್, ಮ್ಯಾಟ್ ಪಾಟ್ಸ್, ಆಲಿ ಪ್ರೈಸ್, ಜೇಮ್ಸ್ ರೆವ್, ಓಲ್ಲಿ ರಾಬಿನ್ಸನ್