ಸಮಸ್ಯೆಯ ಸುಳಿಯಲ್ಲಿ ಭಾರತ!; ಈ ಆಟಗಾರರ ಮೇಲೆ ನಿಂತಿದೆ ಎರಡನೇ ಟೆಸ್ಟ್ ಫಲಿತಾಂಶ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಕೊನೆಯ ದಿನ ದೊಡ್ಡ ಮಟ್ಟದ ಕುತೂಹಲವನ್ನು ಸೃಷ್ಟಿಸಿಬಿಟ್ಟಿದೆ. ಮೊದಲನೇ ಇನ್ನಿಂಗ್ಸ್‌ನಿಂದಲೂ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸಮಬಲದ ಹೋರಾಟಗಳನ್ನು ನಡೆಸಿದ್ದು ಅಂತಿಮ ದಿನದಂದು ಯಾವ ತಂಡ ಗೆಲ್ಲಲಿದೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಕೊಹ್ಲಿ ಪಡೆ ಮೊದಲನೇ ಇನ್ನಿಂಗ್ಸ್‌ನಲ್ಲಿ 364 ರನ್ ಕಲೆಹಾಕಿತು. ಅತ್ತ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ 391 ರನ್ ಗಳಿಸಿ 27 ರನ್‌ಗಳ ಅಲ್ಪ ಮೊತ್ತದ ಮುನ್ನಡೆಯನ್ನು ಕಾಯ್ದುಕೊಂಡಿತು. ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಪೈಪೋಟಿಯ ಹಣಾಹಣಿಯನ್ನು ನಡೆಸಿದ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸಮಬಲ ಸಾಧಿಸಿದವು ಎಂದೇ ಹೇಳಬಹುದು.
ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ಗಿಂತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಬೇಕಾದ ಅನಿವಾರ್ಯತೆ ಇತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿದ್ದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ದೊಡ್ಡ ಮೊತ್ತ ಕಲೆಹಾಕಲಾಗದೇ ಪೆವಿಲಿಯನ್ ಸೇರಿಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮ 21 ಮತ್ತು ಕೆಎಲ್ ರಾಹುಲ್ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು, ಪೂಜಾರಾ 45 ರನ್ ಬಾರಿಸಿದರೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು, ಎಂದಿನಂತೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವ ನಾಯಕ ವಿರಾಟ್ ಕೊಹ್ಲಿ 20 ರನ್ ಕಲೆಹಾಕಿ ಮತ್ತೆ ನಿರಾಸೆ ಮೂಡಿಸಿದರು ಮತ್ತು ಕಳೆದ ಪಂದ್ಯಗಳಲ್ಲಿ ಮಂಕಾಗಿದ್ದ ಅಜಿಂಕ್ಯ ರಹಾನೆ 61 ರನ್ ಬಾರಿಸಿ ಅರ್ಧಶತಕ ಸಿಡಿಸಿದರು. ಸದ್ಯ ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ 181 ರನ್ ಗಳಿಸಿದೆ, ರಿಷಭ್ ಪಂತ್ 14 ಮತ್ತು ಇಶಾಂತ್ ಶರ್ಮಾ 4 ರನ್ ಕಲೆ ಹಾಕಿದ್ದು ಐದನೇ ದಿನದಾಟ ಆರಂಭಿಸಲು ಕಾಯುತ್ತಿದ್ದಾರೆ.
ಹೀಗೆ ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಕಲೆಹಾಕಿದ ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಹೆಚ್ಚು ರನ್ ಬಾರಿಸಿದ್ದು ಕಳೆದ ಪಂದ್ಯಗಳಲ್ಲಿ ಮಂಕಾಗಿದ್ದ ಅಜಿಂಕ್ಯ ರಹಾನೆ (61) ಮತ್ತು ಚೇತೇಶ್ವರ್ ಪೂಜಾರ (45). ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಆಟವನ್ನಾಡಿದರೂ ಸಹ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿದೆ ಎಂಬ ಅಪವಾದಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಹಾಗೂ ಎರಡನೇ ಟೆಸ್ಟ್ ಪಂದ್ಯ ಕೆಲ ಆಟಗಾರರ ಮೇಲೆ ಅವಲಂಬಿತವಾಗಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಬೇಕಿದೆ!
ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಜವಾಬ್ದಾರಿಯುತ ಆಟದ ನೆರವಿನಿಂದ ಕೊಂಚ ಉತ್ತಮ ಸ್ಥಿತಿಯನ್ನು ತಲುಪಿರುವ ಟೀಮ್ ಇಂಡಿಯಾ ಪರ ಇದೀಗ ಬ್ಯಾಟ್ಸ್‌ಮನ್ ಎಂದು ಉಳಿದುಕೊಂಡಿರುವುದು ಕೇವಲ ರಿಷಭ್ ಪಂತ್ ಮಾತ್ರ! ಹೀಗಾಗಿ ರಿಷಭ್ ಪಂತ್ ಸದ್ಯ ಏಕಾಂಗಿ ಹೋರಾಟ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಟೀಮ್ ಇಂಡಿಯಾ ತಂಡದ ಬೌಲರ್‌ಗಳು ರಿಷಭ್ ಪಂತ್‌ಗೆ ಸಾಥ್ ನೀಡುತ್ತಾರಾ ಅಥವಾ ಬೇಗ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಅಶ್ವಿನ್ ಅನುಪಸ್ಥಿತಿ ಈಗ ತಲೆದೋರಿದೆ!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್ ಕಲೆ ಹಾಕಿರುವ ಟೀಮ್ ಇಂಡಿಯಾಗೆ ಸದ್ಯ ರವಿಚಂದ್ರನ್ ಅನುಪಸ್ಥಿತಿ ಸಮಸ್ಯೆಯಾಗಿ ಕಾಡಲಾರಂಭಿಸಿದೆ ಎಂದರೆ ತಪ್ಪಾಗಲಾರದು. ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡಾ ಕೈಕೊಟ್ಟಿದ್ದು ಇದೀಗ ರಿಷಭ್ ಪಂತ್ ಜೊತೆ ನಿಂತು ಹೋರಾಟ ನಡೆಸುವ ಆಟಗಾರರು ಯಾರೂ ಇಲ್ಲ. ಹೀಗಾಗಿ ರವಿಚಂದ್ರನ್ ಅಶ್ವಿನ್ ಏನಾದರೂ ತಂಡದಲ್ಲಿ ಇದ್ದಿದ್ದರೆ ಇನ್ನೊಂದಷ್ಟು ಓವರ್‌ಗಳ ಕಾಲ ಇಂಗ್ಲೆಂಡ್ ಬೌಲರ್‌ಗಳಿಗೆ ಒತ್ತಡ ಹೇರಿ ರನ್ ಕಲೆ ಹಾಕಬಹುದಿತ್ತು ಮತ್ತು ಬೌಲಿಂಗ್‌ನಲ್ಲೂ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಬಹುದಿತ್ತು.

ಬೌಲರ್‌ಗಳ ಮೇಲೆ ಅವಲಂಬಿತವಾಗಿದೆ ಎರಡನೇ ಟೆಸ್ಟ್!
ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 6 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿದ್ದು ಇನ್ನುಳಿದ ಆಟಗಾರರ ಪೈಕಿ ರಿಷಭ್ ಪಂತ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಬ್ಯಾಟ್ಸ್‌ಮನ್ ಅಲ್ಲ. ಹೀಗಾಗಿ ಸದ್ಯ ಭಾರತ ಉತ್ತಮ ರನ್ ಕಲೆ ಹಾಕಬೇಕೆಂದರೆ ಬೌಲರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಲೇಬೇಕಿದೆ. ಅಷ್ಟೇ ಅಲ್ಲದೆ ಭಾರತ ನೀಡುವ ಗುರಿಯನ್ನು ಬೆನ್ನತ್ತುವ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಜವಾಬ್ದಾರಿಯೂ ಸಹ ಇದೀಗ ಭಾರತೀಯ ಬೌಲರ್‌ಗಳ ಮೇಲಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯ ಇದೀಗ ಸಂಪೂರ್ಣವಾಗಿ ಭಾರತೀಯ ಬೌಲರ್‌ಗಳ ಮೇಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications