'ಮೈದಾನ ನಿನ್ನ ಮನೆಯಲ್ಲ'; ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ಕಿತ್ತಾಟದ ವಿಡಿಯೋ ಬಹಿರಂಗ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ 2 ಟೆಸ್ಟ್ ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು, ಆದರೆ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ತಮ್ಮ ಗೆಲುವಿನ ಖಾತೆಯನ್ನು ತೆರೆದಿದೆ.
ಹೀಗೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಮೈದಾನದಲ್ಲಿಯೇ ಪರಸ್ಪರ ವಾಕ್ಸಮರ ನಡೆಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ಪಂದ್ಯದ ವೇಳೆ ಮಾತಿನ ಚಕಮಕಿ ನಡೆದಿದ್ದು ಜೇಮ್ಸ್ ಆ್ಯಂಡರ್ಸನ್ ವಿರುದ್ಧ ವಿರಾಟ್ ಕೊಹ್ಲಿ ನಿಂದನಾತ್ಮಕ ಪದಗಳನ್ನು ಬಳಸಿರುವುದು ಸ್ಟಂಪ್ ಮೈಕ್ ಮೂಲಕ ತಿಳಿದುಬಂದಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 17 ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಜೇಮ್ಸ್ ಆ್ಯಂಡರ್ಸನ್ ಜತೆಗೆ ನಾನ್ ಸ್ಟ್ರೈಕ್ ಕೊನೆಯಲ್ಲಿದ್ದ ವಿರಾಟ್ ಕೊಹ್ಲಿ ವಾಕ್ಸಮರ ನಡೆಸಿದರು. ಜೇಮ್ಸ್ ಆ್ಯಂಡರ್ಸನ್ ಕುರಿತು ಮೈದಾನದಲ್ಲಿಯೇ ಕಿಡಿಕಾರಿದ ವಿರಾಟ್ ಕೊಹ್ಲಿ 'ನನ್ನನ್ನು ಪದೇ ಪದೇ ಕೆಣಕುತ್ತಿದ್ದೀರಿ, ಜಸ್ ಪ್ರೀತ್ ಬುಮ್ರಾ ರೀತಿ ಕೆಣಕಲು ಪ್ರಯತ್ನಿಸುತ್ತಿದ್ದೀರಾ' ಎಂದು ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ಕಾಲನ್ನು ಎಳೆದರು. ಇನ್ನೂ ಪದೇಪದೇ ಪಿಚ್ ಮೇಲೆ ಓಡಾಡುತ್ತಿದ್ದ ಆ್ಯಂಡರ್ಸನ್ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ ವಿರಾಟ್ ಕೊಹ್ಲಿ 'ಲಾರ್ಡ್ಸ್ ಮೈದಾನ ನಿಮ್ಮ ಮನೆಯ ಹಿತ್ತಲಲ್ಲ' ಎಂದು ಅವಾಚ್ಯ ಪದವೊಂದನ್ನು ಉಪಯೋಗಿಸಿ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಹರಿಹಾಯ್ದರು. ಅಷ್ಟೇ ಅಲ್ಲದೆ ಪಿಚ್ ಮೇಲೆ ಪದೇ ಪದೇ ಓಡಾಡಿದ್ದಕ್ಕೆ ಹೆಚ್ಚು ವಯಸ್ಸಾದ ಕಾರಣಕ್ಕೆ ಹೀಗೆಲ್ಲ ನಡೆದುಕೊಳ್ಳುತ್ತಿದ್ದೀರಿ ಎಂದು ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಮತ್ತೊಮ್ಮೆ ವಿರಾಟ್ ಕೊಹ್ಲಿ ಕಿಡಿಕಾರಿದ ವಿಡಿಯೋ ಮುಂದೆ ಇದೆ ನೋಡಿ.
ಹೀಗೆ ತನ್ನ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ ವಿರುದ್ಧ ತಿರುಗಿಬಿದ್ದ ಜೇಮ್ಸ್ ಆ್ಯಂಡರ್ಸನ್ ಪ್ರತ್ಯುತ್ತರವಾಗಿ ವಾಗ್ದಾಳಿಯನ್ನು ನಡೆಸಿದರು. ಆದರೆ ಜೇಮ್ಸ್ ಆ್ಯಂಡರ್ಸನ್ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಮುಂದಿನ ವಾಕ್ಸಮರದ ಆಡಿಯೋ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿಲ್ಲ.
ಹೀಗೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವಿವಿಧ ಆಟಗಾರರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಈ ಕುರಿತು ಪಂದ್ಯ ಮುಗಿದ ನಂತರ ಪ್ರತಿಕ್ರಿಯಿಸಿರುವ ಕೆಎಲ್ ರಾಹುಲ್ 'ನೀವು ನಮ್ಮ ತಂಡದ ಒಬ್ಬ ಆಟಗಾರನನ್ನು ಕೆಣಕಿದರೆ ನಮ್ಮ ತಂಡದ ಎಲ್ಲಾ ಆಟಗಾರರೂ ನಿಮ್ಮ ವಿರುದ್ಧ ತಿರುಗಿ ಬೀಳುತ್ತೇವೆ' ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು. ಅತ್ತ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಕೂಡ ಭಾರತ ಮತ್ತು ಇಂಗ್ಲೆಂಡ್ ಆಟಗಾರರ ನಡುವಿನ ವಾಕ್ಸಮರದ ಕುರಿತು ಮಾತನಾಡಿದ್ದು ಭಾರತೀಯ ಆಟಗಾರರನ್ನು ಸುಮ್ಮನೆ ಕೆಣಕಬೇಡಿ ಎಂದು ಇಂಗ್ಲೆಂಡ್ ಆಟಗಾರರಿಗೆ ಸಲಹೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications