IND vs ENG: 1 ರನ್ ಗಳಿಸಿ ಕಳಪೆಯಾದ ಕೊಹ್ಲಿ 3ನೇ ಟಿ20ಯಿಂದ ಔಟ್? ಕೊಹ್ಲಿ ಕೊಟ್ಟ ಉತ್ತರವಿದು

ಸದ್ಯ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಸೀಮಿತ ಓವರ್ ಸರಣಿಗಳಲ್ಲಿ ಆಂಗ್ಲರ ವಿರುದ್ಧ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಆಯೋಜನೆಯಾಗಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಈಗಾಗಲೇ ಮೊದಲೆರಡು ಪಂದ್ಯಗಳು ಮುಗಿದಿದ್ದು, ಈ ಎರಡೂ ಪಂದ್ಯಗಳಲ್ಲಿಯೂ ಸಹ ಟೀಮ್ ಇಂಡಿಯಾ ಜಯ ಸಾಧಿಸುವುದರ ಮೂಲಕ 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡು ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಸೌತಾಂಪ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಅಂಗಳದಲ್ಲಿ ಜುಲೈ 7ರಂದು ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಬರೋಬ್ಬರಿ 50 ರನ್‌ಗಳಿಂದ ಗೆಲುವನ್ನು ಕಂಡು ಐದನೇ ಟೆಸ್ಟ್ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿದ್ದ ಟೀಮ್ ಇಂಡಿಯಾ ನಿನ್ನೆ ( ಜುಲೈ 9 ) ಎಡ್ಜ್ ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ 49 ರನ್‌ಗಳ ಜಯ ಸಾಧಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಹಾಗೂ ಇಂದು ( ಜುಲೈ 10 ) ನಾಟಿಂಗ್ ಹ್ಯಾಮ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರನೇ ಟಿ ಟ್ವೆಂಟಿ ಪಂದ್ಯವನ್ನೂ ಗೆದ್ದು ವೈಟ್ ವಾಶ್ ಬಳಿಯುವ ತವಕದಲ್ಲಿದೆ.
ಹೀಗೆ ಒಂದೆಡೆ ಟೀಮ್ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಆಂಗ್ಲರಿಗೆ ಮಣ್ಣು ಮುಕ್ಕಿಸಿ ಗೆಲುವಿನ ನಾಗಾಲೋಟದಲ್ಲಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲೂ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ ಪ್ರಥಮ ಟಿ ಟ್ವೆಂಟಿ ಪಂದ್ಯದಿಂದ ವಿಶ್ರಾಂತಿಗೆಂದು ಹೊರಗುಳಿದು ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದರು. ಆದರೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಗಳಿಸಿದ್ದು ಕೇವಲ 1 ರನ್. ಹೀಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಫ್ಲಾಪ್ ಆಗಿದ್ದು, ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ತಂಡದಿಂದ ಕೈಬಿಡಲಾಗುತ್ತದೆ ಎಂಬ ಟೀಕೆಗಳು ಹರಿದಾಡುತ್ತಿವೆ. ಕೊಹ್ಲಿ ತಂಡದಿಂದ ಹೊರಬೀಳ್ತಾರಾ ಎಂಬ ಆತಂಕ ಅವರ ಅಭಿಮಾನಿಗಳಲ್ಲಿ ಶುರುವಾಗಿದೆ. ಈ ಎಲ್ಲಾ ಟೀಕೆ ಮತ್ತು ಆತಂಕಕ್ಕೆ ಸ್ವತಃ ವಿರಾಟ್ ಕೊಹ್ಲಿ ಅವರೇ ಈ ಕೆಳಕಂಡಂತೆ ಉತ್ತರಿಸಿದ್ದಾರೆ.
Nottingham Next. 🇮🇳💪 pic.twitter.com/z1Y7tkD9UA
— Virat Kohli (imVkohli) July 9, 2022
ಟ್ವೀಟ್ ಮೂಲಕ ಟೀಕೆಗಳಿಗೆ ತೆರೆ ಎಳೆದ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ ತಮ್ಮ ತಂಡದೊಂದಿಗಿನ ಚಿತ್ರವನ್ನು ಹಂಚಿಕೊಂಡು 'ನೆಕ್ಸ್ಟ್ ನಾಟಿಂಗ್‍ಹ್ಯಾಮ್' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿಯೂ ತಾವು ಕಣಕ್ಕಿಳಿಯುವ ಸೂಚನೆಯನ್ನು ವಿರಾಟ್ ಕೊಹ್ಲಿ ಬಿಟ್ಟುಕೊಟ್ಟಿದ್ದಾರೆ ಹಾಗೂ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಕೊಹ್ಲಿಗೆ ಅವಕಾಶ ಸಿಗುವುದಿಲ್ಲ ಎನ್ನುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.

ಸ್ವಲ್ಪ ರನ್ ಗಳಿಸಿ ಎಂದ ನೆಟ್ಟಿಗರು
ಕೊಹ್ಲಿ ಹಂಚಿಕೊಂಡ ಈ ಫೋಟೋಗೆ ಕಾಮೆಂಟ್ ಮಾಡಿರುವ ನೆಟ್ಟಿಗರ ಪೈಕಿ ಹಲವರು ರನ್ ಗಳಿಸಿ ಎಂದು ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದಾರೆ. ಇನ್ನೂ ಕೆಲವರು ಈ ಪಂದ್ಯದಲ್ಲಾದರೂ ರನ್ ಗಳಿಸಿ ಎಂದು ಕೊಹ್ಲಿಯ ಕಾಲನ್ನು ಎಳೆದಿದ್ದಾರೆ.

ಹೂಡಾ ಬದಲು ಕೊಹ್ಲಿ ಆಡಿದ್ದಕ್ಕೆ ಆಕ್ರೋಶ
ಇನ್ನು ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದು 17 ಎಸೆತಗಳಲ್ಲಿ 33 ರನ್ ಬಾರಿಸಿದ್ದ ದೀಪಕ್ ಹೂಡಾರನ್ನು ದ್ವಿತೀಯ ಟಿ ಟ್ವೆಂಟಿ ಪಂದ್ಯದಿಂದ ಕೈಬಿಟ್ಟು ವಿರಾಟ್ ಕೊಹ್ಲಿಗೆ ಸ್ಥಾನ ನೀಡಲಾಗಿತ್ತು. ಆದರೆ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಉತ್ತಮ ಪ್ರದರ್ಶನ ನೀಡುತ್ತಿದ್ದ ಹೂಡಾರನ್ನು ಕೈಬಿಟ್ಟು ಕಳಪೆ ಪ್ರದರ್ಶನ ನೀಡುವ ವಿರಾಟ್ ಕೊಹ್ಲಿಗೆ ಯಾಕೆ ಅವಕಾಶ ನೀಡಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಗರಂ ಆಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ದೀಪಕ್ ಹೂಡಾರನ್ನು ಕಡ್ಡಾಯವಾಗಿ ಕಣಕ್ಕಿಳಿಸಿ ಎಂಬ ಕೂಗು ಕೇಳಿ ಬರುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications