
ಸುಖಾಸುಮ್ಮನೆ ರಿವ್ಯೂ ಬಳಸುವುದು ಅನಗತ್ಯ
ಸರಿಯಾಗಿ ಔಟ್ ಅಥವಾ ನಾಟೌಟ್ ಎಂಬ ಖಚಿತತೆಯಿಲ್ಲದೆ ಸುಖಾಸುಮ್ಮನೆ ರಿವ್ಯೂಗಳನ್ನು ಬಳಸುವುದು ಅನಗತ್ಯ ಎಂದು ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ರಿವ್ಯೂ ಬಳಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಔಟ್ ಆಗಿದೆ ಎಂಬುದು ಖಚಿತವಾಗಿ ಗೊತ್ತಿದ್ದರೆ ಮಾತ್ರ ರಿವ್ಯೂ ಬಳಸಲಿ, ಅದನ್ನು ಬಿಟ್ಟು ಸರಿಯಾದ ಮಾಹಿತಿಯಿಲ್ಲದೆ ಸುಖಾಸುಮ್ಮನೆ ರಿವ್ಯೂಗಳನ್ನು ಬಳಸಿ ವ್ಯರ್ಥ ಮಾಡಬಾರದು ಎಂದು ವಿವಿಎಸ್ ಲಕ್ಷ್ಮಣ್ ಕಿಡಿಕಾರಿದ್ದಾರೆ.

ಈ ರೀತಿ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ಆ್ಯಶಸ್ ಸೋತಿತ್ತು!
2019ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಕೊನೆಯ ಪಂದ್ಯದಲ್ಲಿಯೂ ಸಹ ಆಸ್ಟ್ರೇಲಿಯಾ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ವಿರುದ್ಧ ಸೋತಿದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ ಹೇಳಿ ಎಂದು ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೂಡ ವ್ಯರ್ಥವಾಗಿ ರಿವ್ಯೂಗಳನ್ನು ಕಳೆದುಕೊಂಡಿತ್ತು. ಕೊನೆಯದಾಗಿ ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ಬೆನ್ ಸ್ಟೋಕ್ಸ್ ಔಟ್ ಆದಾಗ ಆಸ್ಟ್ರೇಲಿಯಾ ತನ್ನ ಬಳಿ ಯಾವುದೇ ರೀತಿಯ ಇಲ್ಲದ ಕಾರಣ ರಿವ್ಯೂ ಬಳಸಲಾಗದೆ ಕೊನೆಗೆ ಪಂದ್ಯವನ್ನು ಸೋಲಬೇಕಾಯಿತು, ಇದೇ ರೀತಿ ಟೀಮ್ ಇಂಡಿಯಾ ಕೂಡ ರಿವ್ಯೂಗಳನ್ನು ವ್ಯರ್ಥವಾಗಿ ಬಳಸುತ್ತಿದ್ದರೆ ಮುಂದೆ ಸಮಸ್ಯೆಗಳಾಗಬಹುದು ಎಂದು ವಿವಿಎಸ್ ಲಕ್ಷ್ಮಣ್ ಎಚ್ಚರಿಸಿದ್ದಾರೆ.

ರಿವ್ಯೂಗಳಲ್ಲಿ ಗೊಂದಲಗಳಿರಬಾರದು
ಇನ್ನೂ ಮುಂದುವರೆದು ಕೊಹ್ಲಿ ರಿವ್ಯೂ ತೆಗೆದುಕೊಂಡಿದ್ದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ರಿವ್ಯೂ ತೆಗೆದುಕೊಳ್ಳುವಾಗ ಯಾವುದೇ ಗೊಂದಲಕ್ಕೆ ಒಳಗಾಗಬಾರದು, ಅದರಲ್ಲಿಯೂ ಬೌಲರ್ ಮೇಲಿನ ಕನಿಕರದಿಂದ ಯಾವುದೇ ಕಾರಣಕ್ಕೂ ರಿವ್ಯೂ ಬಳಸಬಾರದು ಎಂದು ಹೇಳಿಕೆ ನೀಡಿದ್ದಾರೆ. ಬೌಲರ್ ಪ್ರಕಾರ ಆತ ಮಾಡುವ ಎಸೆತ ಸರಿಯಾಗಿಯೇ ಇರುತ್ತದೆ ಹೀಗಾಗಿ ಆತ ರಿವ್ಯೂ ತೆಗೆದುಕೊಳ್ಳಲು ಪ್ರೇರೇಪಿಸುತ್ತಾನೆ, ಅದೇ ಸಮಯದಲ್ಲಿ ಮತ್ತಿತರ ಆಟಗಾರರು ಬಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶುರು ಮಾಡುತ್ತಾರೆ ಹೀಗಾಗಿಯೇ ರಿವ್ಯೂಗಳ ಬಗ್ಗೆ ಗೊಂದಲ ಉಂಟಾಗಿ ಸರಿಯಾದ ನಿರ್ಣಯ ತೆಗೆದುಕೊಳ್ಳಲಾಗುವುದಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ತೆಗೆದುಕೊಂಡಿರುವ ಈ ರಿವ್ಯೂ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ವಿರಾಟ್ ಕೊಹ್ಲಿ ಸತತವಾಗಿ ಪಂದ್ಯಗಳಲ್ಲಿ ಟಾಸ್ ಸೋಲುವುದು ಮಾತ್ರವಲ್ಲದೇ ರಿವ್ಯೂಗಳನ್ನು ದುರುಪಯೋಗಪಡಿಸಿಕೊಳ್ಳುವುದರಲ್ಲೂ ಸಹ ಅಗ್ರಸ್ಥಾನಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ವಿರಾಟ್ ಕೊಹ್ಲಿ ತೆಗೆದುಕೊಂಡ ಈ ತಪ್ಪಾದ ರಿವ್ಯೂ ಕುರಿತು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಕೂಡ ಮಾತನಾಡಿದ್ದು ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ಕೆಟ್ಟ ರಿವ್ಯೂಗಳನ್ನು ಮನವಿ ಮಾಡುವುದನ್ನು ನೋಡಿದರೆ ತಡೆಯಲಾರದಷ್ಟು ನಗು ಬರುತ್ತದೆ ಎಂದು ಕಾಲೆಳೆದಿದ್ದಾರೆ. ಯಾವುದೋ ದೊಡ್ಡ ಸರ್ಕಾರವನ್ನು ರಾಜಕಾರಣಿಗಳು ಕಟ್ಟುವ ಹಾಗೆ ಗುಂಪು ಕಟ್ಟಿ ನಿರ್ಣಯವನ್ನು ತೆಗೆದುಕೊಂಡು ರಿವ್ಯೂವನ್ನು ಭಾರತೀಯರು ಸೋತರು ಎಂದು ಮೈಕಲ್ ವಾನ್ ಟೀಮ್ ಇಂಡಿಯಾದ ಕೆಟ್ಟ ರಿವ್ಯೂ ಮನವಿಯನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ರಿವ್ಯೂಗಳನ್ನು ಸರಿಯಾಗಿ ಬಳಸಿಕೊಂಡ ತಂಡವನ್ನು ಸರಣಿಯಲ್ಲಿ ವಿಜೇತರನ್ನಾಗಿ ಘೋಷಿಸಿದರೆ ಖಂಡಿತವಾಗಿಯೂ ಇಂಗ್ಲೆಂಡ್ ತಂಡ ಟ್ರೋಫಿಯನ್ನು ಗೆಲ್ಲಲಿದೆ ಮತ್ತು ಭಾರತ ತಂಡ ಹೀನಾಯವಾಗಿ ಸೋಲಲಿದೆ ಎಂದು ಕೂಡ ಮೈಕಲ್ ವಾನ್ ಟೀಕಿಸಿದ್ದಾರೆ.


Click it and Unblock the Notifications












