IND vs IRE 2nd T20: ಭಾರತ ತಂಡದ ಆಲ್‌ರೌಂಡ್ ಪ್ರದರ್ಶನ; ಐರ್ಲೆಂಡ್ ವಿರುದ್ಧ ಸರಣಿ ಗೆಲುವು
ಭಾನುವಾರ, ಆಗಸ್ಟ್ 20ರಂದು ಡಬ್ಲಿನ್‌ನ ದಿ ವಿಲೇಜ್‌ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ತಂಡದ ವಿರುದ್ಧ ಪ್ರವಾಸಿ ಭಾರತ ತಂಡ 33 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಇದೇ ವೇಳೆ ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತೀಯ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರುತುರಾಜ್ ಗಾಯಕ್ವಾಡ್ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಭಾರತ ನೀಡಿದ್ದ 186 ರನ್‌ಗಳ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ಆಂಡ್ರ್ಯೂ ಬಾಲ್ಬಿರ್ನಿ ಅವರ ಸ್ಫೋಟಕ ಆರ್ಧಶತಕದ ಹೊರತಾಗಿಯೂ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 33 ರನ್‌ಗಳ ಸೋಲು ಕಂಡಿತು.
ಭಾರತ ತಂಡದ ಪರ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ 11 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 18 ರನ್ ಗಳಿಸಿ ಔಟಾದರೆ, ರುತುರಾಜ್ ಗಾಯಕ್ವಾಡ್ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 58 ರನ್ ಬಾರಿಸಿದರು.

ತಿಲಕ್ ವರ್ಮಾ 1 ರನ್ ಗಳಿಸಿ ಮತ್ತೊಮ್ಮೆ ವಿಫಲರಾದರೆ, ಸಂಜು ಸ್ಯಾಮ್ಸನ್ 26 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 40 ರನ್ ಗಳಿಸಿದರು. ಗಾಯಕ್ವಾಡ್ ಮತ್ತು ಸ್ಯಾಮ್ಸನ್ 3ನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿದರು.
ಇನ್ನು ಯುವ ಸೆನ್ಸೆಷನ್ ರಿಂಕು ಸಿಂಗ್ 21 ಎಸೆಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಮೇತ ಬಿರುಸಿನ 38 ರನ್ ಗಳಿಸಿದರು. ಶಿವಂ ದುಬೆ 16 ಎಸೆತಗಳಲ್ಲಿ 2 ಸಿಕ್ಸರ್ ಸಹಾಯದಿಂದ ಅಜೇಯ 22 ರನ್ ಗಳಿಸಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ರಿಂಕು ಸಿಂಗ್ ಮತ್ತು ಶಿವಂ ದುಬೆ ಜೋಡಿ 5 ವಿಕೆಟ್‌ಗೆ 55 ರನ್‌ಗಳ ಜೊತೆಯಾಟ ನೀಡಿದ್ದು ಪಂದ್ಯದ ತಿರುವಾಗಿತ್ತು.
ಇನ್ನು ಬೌಲಿಂಗ್‌ನಲ್ಲಿ ಐರ್ಲೆಂಡ್ ತಂಡದ ಪರ ಬ್ಯಾರಿ ಮೆಕಾರ್ಥಿ 4 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರೆ, ಮಾರ್ಕ್ ಅಡೇರ್ ಮತ್ತು ಬೆಂಜಮಿನ್ ವೈಟ್ ತಲಾ ಒಂದೊಂದು ವಿಕೆಟ್ ಪಡೆದರು. ಜೋಶುವಾ ಲಿಟಲ್ 4 ಓವರ್‌ಗಳಲ್ಲಿ 48 ರನ್ ನೀಡಿ ದುಬಾರಿಯಾದರು.
ಇನ್ನು 186 ರನ್‌ಗಳ ಚೇಸ್ ಮಾಡಿದ ಐರ್ಲೆಂಡ್ ತಂಡ ಮೂರನೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಪಾಲ್ ಸ್ಟಿರ್ಲಿಂಗ್ ಮತ್ತು ಲೋರ್ಕನ್ ಟಕರ್ ಸೊನ್ನೆಗೆ ಸುತ್ತಿದರು ಹಾಗೂ ಇಬ್ಬರೂ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು.
ಇನ್ನೊಬ್ಬ ಆರಂಭಿಕ ಆಂಡ್ರ್ಯೂ ಬಾಲ್ಬಿರ್ನಿ 51 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 72 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಉಳಿದಂತೆ ಹ್ಯಾರಿ ಟೆಕ್ಟರ್ 7 ರನ್, ಕರ್ಟಿಸ್ ಕ್ಯಾಂಫರ್ 18 ರನ್, ಜಾರ್ಜ್ ಡಾಕ್ರೆಲ್ 13 ರನ್ ಗಳಿಸಿದರೆ, ಮಾರ್ಕ್ ಅಡೇರ್ 23 ರನ್ ಬಾರಿಸಿದರು.
ಪ್ರವಾಸಿ ಭಾರತ ತಂಡದ ಬಿಗುವಿನ ಬೌಲಿಂಗ್ ಎದುರು ಐರ್ಲೆಂಡ್ ಬ್ಯಾಟರ್‌ಗಳು ಮಂಕಾದರು ಮತ್ತು ತಂಡದ ಗೆಲುವಿಗೆ ಅಗತ್ಯ ಕಾಣಿಕೆ ನೀಡಲು ವಿಫಲರಾದರು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ 4 ಓವರ್‌ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇನ್ನು ಸ್ಪಿನ್ನರ್ ರವಿ ಬಿಷ್ಣೋಯ್ 4 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಅರ್ಶ್‌ದೀಪ್ ಸಿಂಗ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.
ಭಾರತ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಿಂಕು ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಬುಧವಾರ, ಆಗಸ್ಟ್ 23ರಂದು ಇದೇ ಮೈದಾನದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications