ಶುಕ್ರವಾರ, ಆಗಸ್ಟ್ 18ರಂದು ಡಬ್ಲಿನ್‌ನ ದಿ ವಿಲೇಜ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯ ನಡೆಯಲಿದ್ದು, ಪ್ರವಾಸಿ ಭಾರತ ಮತ್ತು ಆತಿಥೇಯ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಬೆನ್ನು ನೋವಿನ ಕಾರಣ ಸುದೀರ್ಘ ವಿಶ್ರಾಂತಿಯ ನಂತರ ಭಾರತ ತಂಡಕ್ಕೆ ಪುನರಾಗಮನ ಮಾಡುತ್ತಿರುವ ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್ ವಿರುದ್ಧ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 2023ರ ಏಷ್ಯಾ ಕಪ್ ಹಾಗೂ 2023ರ ವಿಶ್ವಕಪ್‌ಗೆ ಮುನ್ನ ಫಿಟ್‌ನೆಸ್ ಖಚಿತಪಡಿಸಿಕೊಳ್ಳಲಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರು ಭಾರತ ತಂಡಕ್ಕೆ ಮರಳಲು ವೇದಿಕೆ ಸಿದ್ಧವಾಗಿದ್ದು, 326 ದಿನಗಳ ಅಂತರದ ನಂತರ ಪ್ರಮುಖ ವೇಗಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದ್ದಾರೆ.
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತವನ್ನು ಮುನ್ನಡೆಸುವ ಮೂಲಕ, ಜಸ್ಪ್ರೀತ್ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಮುನ್ನಡೆಸಿದ 11ನೇ ಆಟಗಾರನಾಗಲಿದ್ದಾರೆ.
ಇದೇ ವೇಳೆ ಶುಕ್ರವಾರದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸುತ್ತಿದ್ದಂತೆ, ಜಸ್ಪ್ರೀತ್ ಬುಮ್ರಾ ಅವರು ಡೆತ್ ಓವರ್‌ಗಳಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯನಾಗಲಿದ್ದಾರೆ.
ಪ್ರಸ್ತುತ, ಭುವನೇಶ್ವರ್ ಕುಮಾರ್ ಅವರು ಟಿ20 ಕ್ರಿಕೆಟ್‌ನ ಡೆತ್ ಓವರ್‌ನಲ್ಲಿ (16ರಿಂದ 20 ಓವರ್‌ಗಳು) ಭಾರತದ ಪರ 36 ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಡೆತ್ ಓವರ್‌ಗಳಲ್ಲಿ ಇದುವರೆಗೆ 35 ಟಿ20 ವಿಕೆಟ್‌ಗಳನ್ನು ಪಡೆದಿರುವ ಜಸ್ಪ್ರೀತ್ ಬುಮ್ರಾ ಅವರು ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಮೀರಿಸಲು ಕೇವಲ 2 ವಿಕೆಟ್‌ಗಳ ಅಗತ್ಯವಿದೆ.
ಒಟ್ಟಾರೆ ಟಿ20 ವಿಕೆಟ್‌ಗಳನ್ನು ಪಡೆದಿರುವ ಭಾರತೀಯ ವೇಗಿಗಳ ಪಟ್ಟಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಲು ಜಸ್ಪ್ರೀತ್ ಬುಮ್ರಾ ಎದುರು ನೋಡುತ್ತಿದ್ದಾರೆ. ಅವರು ಪ್ರಸ್ತುತ 70 ವಿಕೆಟ್‌ಗಳನ್ನು ಕಬಳಿಸಿದ್ದರೆ, ಹಾರ್ದಿಕ್ ಪಾಂಡ್ಯ 73 ವಿಕೆಟ್‌ಗಳನ್ನು ಪಡೆದಿದ್ದಾರೆ.
ಭಾರತೀಯ ವೇಗದ ಬೌಲರ್‌ಗಳಲ್ಲಿ 90 ವಿಕೆಟ್‌ಗಳನ್ನು ಹೊಂದಿರುವ ಭುವನೇಶ್ವರ್ ಕುಮಾರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಯುಜ್ವೇಂದ್ರ ಚಹಾಲ್ ಅಗ್ರಸ್ಥಾನದಲ್ಲಿದ್ದಾರೆ.
ಜನವರಿ 2016ರಲ್ಲಿ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ ನಂತರ, ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಅತ್ಯುತ್ತಮ ವೇಗದ ಬೌಲರ್ ಆಗಿದ್ದಾರೆ. 2016ರಿಂದ ಎಲ್ಲಾ ಬೌಲರ್‌ಗಳ ಪೈಕಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಂತರದ ಸ್ಥಾನದಲ್ಲಿದ್ದಾರೆ.
ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಭಾರತದ ಬೌಲರ್‌ಗಳಲ್ಲಿ ಪ್ರಸ್ತುತ ಎಲ್ಲಾ ಸ್ವರೂಪಗಳಲ್ಲಿ ಅಗ್ರ ಹಾಗೂ ನಿರ್ಣಾಯಕ ಬೌಲರ್ ಆಗಿದ್ದಾರೆ. ಏಕದಿನ ವಿಶ್ವಕಪ್ ತಂಡದ ಆಯ್ಕೆಯ ದೃಷ್ಟಿಕೋನದಿಂದ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ಪ್ರದರ್ಶನವು ನಿರ್ಣಾಯಕವಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾನುವಾರ, ಆಗಸ್ಟ್ 20ರಂದು ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಆಗಸ್ಟ್ 18ರಂದು ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಪ್ರದರ್ಶನದೊಂದಿಗೆ ಅತ್ಯುತ್ತಮ ಕಾರ್ಯ ನಿರ್ವಹಿಸಿದರೆ, ಅವರು ಸ್ವತಃ ಏಷ್ಯಾ ಕಪ್‌ಗೆ ಟಿಕೆಟ್ ಪಡೆಯಲಿದ್ದಾರೆ.