IND Vs NZ 2nd ODI: ತಂಡಕ್ಕೆ ಮರಳಲು ಸಿದ್ಧವಾದ ವೇಗಿ, 2ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ, ಪಿಚ್ ವರದಿ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 12 ರನ್‌ಗಳ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ, 2ನೇ ಪಂದ್ಯವನ್ನಾಡಲು ಸಿದ್ಧವಾಗುತ್ತಿದೆ. ಜನವರಿ 21ರಂದು, ಶನಿವಾರ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2ನೇ ಏಕದಿನ ಪಂದ್ಯ ನಡೆಯಲಿದೆ.
ಸರಣಿಯ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ ಟೀಂ ಇಂಡಿಯಾ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಗೆಲುವಿನ ಅವಕಾಶವನ್ನು ಕೈಚೆಲ್ಲಿರುವ ಕಿವೀಸ್ ಪಡೆ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಿಕೊಳ್ಳಲು ಹವಣಿಸುತ್ತಿದೆ.
ಮೊದಲನೇ ಪಂದ್ಯದಲ್ಲಿ ತಾನು ಮಾಡಿದ ತಪ್ಪುಗಳನ್ನು ತಿದ್ದಿಕೊಂಡರೆ ಮಾತ್ರ ಟೀಂ ಇಂಡಿಯಾಗೆ ಎರಡನೇ ಏಕದಿನ ಪಂದ್ಯ ಗೆಲ್ಲುವುದು ಸುಲಭವಾಗಲಿದೆ. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಭಾರತ ತಂಡ ಸಾಕಷ್ಟು ಸುಧಾರಣೆಯಾಗಬೇಕಿದೆ. ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಹೊರತುಪಡಿಸಿ ಮತ್ಯಾರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ.
ಹಿರಿಯ ವೇಗಿ ಮೊಹಮ್ಮದ್ ಶಮಿ ವಿಕೆಟ್ ಪಡೆಯುವಲ್ಲಿ ವಿಫಲವಾಗುತ್ತಿರುವುದು, ಹಾರ್ದಿಕ್ ಪಾಂಡ್ಯ ದುಬಾರಿಯಾಗಿದ್ದು, ನಾಯಕ ರೋಹಿತ್ ಶರ್ಮಾರ ಚಿಂತೆಯನ್ನು ಹೆಚ್ಚಿಸಿದೆ. ರಾಯ್ಪುರದ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ ಬಳಗದಲ್ಲಿ ಒಂದೆರಡು ಬದಲಾವಣೆಯಾಗುವ ಸಾಧ್ಯತೆ ಇದೆ.

ಯುವ ವೇಗಿಗೆ ತಂಡದಲ್ಲಿ ಸ್ಥಾನ
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಯುವ ವೇಗಿ ಉಮ್ರಾನ್ ಮಲಿಕ್ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯಲಿಲ್ಲ. ಉಮ್ರಾನ್ ಮಲಿಕ್ ಬದಲಾಗಿ ಶಾರ್ದುಲ್ ಠಾಕೂರ್ ಗೆ ಮಣೆ ಹಾಕಲಾಯಿತು.
ಶಾರ್ದುಲ್ ಠಾಕೂರ್ 2 ವಿಕೆಟ್ ಪಡೆದರು, ಹೆಚ್ಚಿನ ರನ್ ಬಿಟ್ಟುಕೊಟ್ಟರು. 156 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಭಾರತದ ಪರವಾಗಿ ದಾಖಲೆ ಮಾಡಿರುವ ಮಲಿಕ್‌ರನ್ನು ಕೈಬಿಟ್ಟು ಮಧ್ಯಮ ವೇಗಿ ಶಾರ್ದುಲ್ ಠಾಕೂರ್ ಗೆ ಅವಕಾಶ ನೀಡಿದ್ದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಯಿತು.
ಮಧ್ಯಮ ಓವರ್ ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿರುವ ಉಮ್ರಾನ್ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಉಳಿದಂತೆ ಬಹುತೇಕ ಮೊದಲ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಪರಿಗಣಿಸಿ ಹಿರಿಯ ವೇಗಿ ಶಮಿಗೆ ವಿಶ್ರಾಂತಿ ನೀಡಿದರೂ, ಅಚ್ಚರಿಯೇನಿಲ್ಲ. ಇಶಾನ್ ಕಿಶಾನ್ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
Ranji Trophy: ಭರ್ಜರಿ ದ್ವಿಶತಕ ಸಿಡಿಸಿದ ಮಯಾಂಕ್ ಅಗರ್ವಾಲ್, ಇನ್ನಿಂಗ್ಸ್ ಮುನ್ನಡೆಯತ್ತ ಕರ್ನಾಟಕ

ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ
ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣವು ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಇಲ್ಲಿ ಇದುವರೆಗೂ 6 ಐಪಿಎಲ್ ಪಂದ್ಯಗಳು ನಡೆದಿವೆ.
ಐಪಿಎಲ್ ಪಂದ್ಯಗಳಲ್ಲಿ ಈ ಅಂಗಳದಲ್ಲಿ ಗರಿಷ್ಠ ಮೊತ್ತ 164 ರನ್ ಆಗಿದೆ. ಸರಾಸರಿ ಸ್ಕೋರ್ 149.6. ರಾಯ್ಪುರ ಪಿಚ್ ಪಂದ್ಯದ ಸಮಯದಲ್ಲಿ ನಿಧಾನವಾಗುವುದರಿಂದ ಬ್ಯಾಟಿಂಗ್ ಮಾಡುವುದು ಸುಲಭವಾಗಿರುವುದಿಲ್ಲ.
ಸ್ಪಿನ್ನರ್ ಗಳಿಗೆ ಪಿಚ್ ಹೆಚ್ಚು ಅನುಕೂಲಕಾರಿಯಾಗಿರಲಿದೆ. ಸ್ವಿಂಗ್ ಮಾಡಿದರೆ ವೇಗಿಗಳು ಕೂಡ ವಿಕೆಟ್ ಪಡೆಯುವ ಸಾಧ್ಯತೆ ಇದೆ. ಬೌಂಡರಿ ಕೂಡ ದೊಡ್ಡದಾಗಿರುವುದರಿಂದ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರೆ ಮಾತ್ರ ರನ್ ಗಳಿಸಲು ಸಾಧ್ಯವಾಗುತ್ತದೆ. ಜನವರಿ 21 ರಂದು ಶನಿವಾರ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.

ಭಾರತ, ನ್ಯೂಜಿಲೆಂಡ್ ಸಂಭಾವ್ಯ ಆಡುವ ಬಳಗ
ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್/ಉಮ್ರಾನ್ ಮಲಿಕ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ನ್ಯೂಜಿಲೆಂಡ್ : ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications