IND vs NZ 3rd ODI: ಸೆಹ್ವಾಗ್-ಗಂಭೀರ್ ಜೋಡಿಯ 14 ವರ್ಷಗಳ ದಾಖಲೆ ಮುರಿದ ರೋಹಿತ್- ಗಿಲ್ ಜೋಡಿ

ಮಂಗಳವಾರ, ಜನವರಿ 24ರಂದು ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಭರ್ಜರಿ ಶತಕ ಬಾರಿಸಿ ಮಿಂಚಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಭಾರತ ತಂಡ ರೋಹಿತ್ ಶರ್ಮಾ(101), ಶುಭ್ಮನ್ ಗಿಲ್ (112) ಅವರ ಶತಕಗಳು ಮತ್ತು ಹಾರ್ದಿಕ್ ಪಾಂಡ್ಯ (54) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಪೇರಿಸಿತು.
ಇದೇ ವೇಳೆ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕ ಜೋಡಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ಅತ್ಯಧಿಕ ಆರಂಭಿಕ ಜೊತೆಯಾಟ ನೀಡಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಜೋಡಿಯ ದಾಖಲೆಯನ್ನು ಮುರಿದರು.

ರೋಹಿತ್ ಶರ್ಮಾ- ಶುಭ್ಮನ್ ಗಿಲ್ 212 ರನ್‌ಗಳ ಜೊತೆಯಾಟ
2009ರ ಮಾರ್ಚ್‌ನಲ್ಲಿ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿಯು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಮುರಿಯದ ಮೊದಲ ವಿಕೆಟ್‌ಗೆ 201 ರನ್ ಜೊತೆಯಾಟ ನಡೆಸಿದ್ದರು. ಆ ಪಂದ್ಯವನ್ನು ಭಾರತ ತಂಡ ಡಕ್ವರ್ಥ್ ಲೂಯಿಸ್ ನಿಯಮದನ್ವಯ 84 ರನ್‌ಗಳಿಂದ ಗೆದ್ದುಕೊಂಡಿತ್ತು. ಗೌತಮ್ ಗಂಭೀರ್ 63 ರನ್ ಗಳಿಸಿ ಅಜೇಯರಾಗಿ ಉಳಿದರೆ, ವೀರೇಂದ್ರ ಸೆಹ್ವಾಗ್ 74 ಎಸೆತಗಳಲ್ಲಿ 14 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 125 ರನ್ ಗಳಿಸಿದ್ದರು.
ಗಂಭೀರ್ ಮತ್ತು ಸೆಹ್ವಾಗ್ ಜೋಡಿಯು ನ್ಯೂಜಿಲೆಂಡ್ ವಿರುದ್ಧ 200 ಪ್ಲಸ್ ರನ್ ಜೊತೆಯಾಟ ನೀಡಿದ ಏಕೈಕ ಭಾರತೀಯ ಆರಂಭಿಕ ಜೋಡಿಯಾಗಿತ್ತು. ಇದೀಗ ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿವೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ 212 ರನ್‌ಗಳ ಜೊತೆಯಾಟದೊಂದಿಗೆ ಈ ಪಟ್ಟಿಯನ್ನು ಸೇರಿಕೊಂಡರು.

30ನೇ ಏಕದಿನ ಶತಕ ಬಾರಿಸಿದ ರೋಹಿತ್ ಶರ್ಮಾ
ಮೂರು ವರ್ಷಗಳ ನಂತರ ಏಕದಿನ ಶತಕ ಬಾರಿಸಿ, ಶತಕದ ಬರ ನೀಗಿಸಿಕೊಂಡ ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಇದೀಗ 30ನೇ ಶತಕ ಬಾರಿಸುವ ಮೂಲಕ ಅತಿ ಹೆಚ್ಚು ಏಕದಿನ ಶತಕ ಗಳಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಇದೀಗ ರೋಹಿತ್ ಶರ್ಮಾ ಕೂಡ ರಿಕಿ ಪಾಂಟಿಂಗ್ ಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ 85 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 101 ರನ್ ಗಳಿಸಿ, ಆಫ್ ಸ್ಪಿನ್ನರ್ ಮೈಕೆಲ್ ಬ್ರೇಸ್‌ವೆಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.

ಶುಭ್ಮನ್ ಗಿಲ್‌ಗೆ ಈ ಸರಣಿಯಲ್ಲಿ ಎರಡನೇ ಶತಕ
ಇನ್ನು ಶುಭ್ಮನ್ ಗಿಲ್ 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 112 ರನ್ ಗಳಿಸಿದರು. ಈ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್‌ಗೆ ಎರಡನೇ ಶತಕವಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್ 180ರ ಸರಾಸರಿಯಲ್ಲಿ 360 ರನ್ ಗಳಿಸಿ, ಪಾಕಿಸ್ತಾನದ ಬಾಬರ್ ಅಜಂ ದಾಖಲೆ ಸರಿಗಟ್ಟಿದ್ದಾರೆ.
ಶುಭ್ಮನ್ ಗಿಲ್ ಇದುವರೆಗಿನ 21 ಏಕದಿನ ಪಂದ್ಯಗಳಲ್ಲಿ 73.76ರ ಸರಾಸರಿಯಲ್ಲಿ 1254 ರನ್ ಗಳಿಸಿದ್ದಾರೆ. 109.81ರ ಸ್ಟ್ರೈಕ್‌ರೇಟ್‌ನೊಂದಿಗೆ ನಾಲ್ಕು ಶತಕ ಮತ್ತು ಒಂದು ಅರ್ಧಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications