IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್

ಬುಧವಾರ, ಫೆಬ್ರವರಿ 1ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 168 ರನ್‌ಗಳ ದಾಖಲೆ ಅಂತರದಿಂದ ಸೋಲಿಸಿತು. ಇದೇ ವೇಳೆ 3 ಪಂದ್ಯಗಳ ಟಿ20 ಸರಣಿಯನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ 2-1 ಅಂತರದಲ್ಲಿ ಜಯಿಸಿತು.
ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 168 ರನ್‌ಗಳಿಂದ ಸೋಲಿಸುತ್ತಿದ್ದಂತೆಯೇ, ರನ್‌ಗಳ ಅಂತರದ ವಿಷಯದಲ್ಲಿ ಭಾರತ ಟಿ20 ಪಂದ್ಯದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿತು. 2018ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ 143 ರನ್‌ಗಳ ಗೆಲುವು ಭಾರತದ ಎರಡನೇ ಅತಿ ಹೆಚ್ಚು ಅಂತರದ ಗೆಲುವಾಗಿದೆ.
ಶುಭ್ಮನ್ ಗಿಲ್ ಬುಧವಾರದ ಪಂದ್ಯದಲ್ಲಿ 126 ರನ್ ಬಾರಿಸಿ ವಿರಾಟ್ ಕೊಹ್ಲಿ ಅವರ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಬ್ಯಾಟರ್‌ನಿಂದ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಅಳಿಸಿ ಹಾಕಿದರು.

ವಿರಾಟ್ ಕೊಹ್ಲಿ ಅಜೇಯ 122 ರನ್
ಈ ಮೊದಲು ಕಳೆದ ವರ್ಷದ 2022ರ ಸೆಪ್ಟೆಂಬರ್‌ನಲ್ಲಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಮೊಹಮ್ಮದ್ ನಬಿ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 122 ರನ್ ಗಳಿಸುವ ಮೂಲಕ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ನಿರ್ಮಿಸಿದ್ದರು.
ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು 63 ಎಸೆತಗಳಲ್ಲಿ 12 ಬೌಂಡರಿಗಳು ಮತ್ತು 7 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 126 ರನ್ ಗಳಿಸಿ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸಿದರು.

ಟಿ20 ಶತಕ ಗಳಿಸಿದ ಆರನೇ ಭಾರತೀಯ ಶುಭ್ಮನ್ ಗಿಲ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ. ಶುಭ್ಮನ್ ಗಿಲ್ ಮೊದಲು 35 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ನಂತರ 54 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರೋಹಿತ್ ಶರ್ಮಾ, ಸುರೇಶ್ ರೈನಾ, ಕೆಎಲ್ ರಾಹುಲ್, ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಪುರುಷ ಆಟಗಾರರಾಗಿದ್ದಾರೆ. ಮಹಿಳಾ ಕ್ರಿಕೆಟರ್ ಪೈಕಿ ಹರ್ಮನ್‌ಪ್ರೀತ್ ಕೌರ್ ವೆಸ್ಟ್ ಇಂಡೀಸ್‌ನಲ್ಲಿ ನಡೆದ 2018ರ ಟಿ20 ವಿಶ್ವಕಪ್‌ನಲ್ಲಿ ಶತಕ ಗಳಿಸಿದ್ದಾರೆ.

ನ್ಯೂಜಿಲೆಂಡ್ ತಂಡ 12.1 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್
2023ರ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತನ್ನ ಅದ್ಭುತ ಫಾರ್ಮ್‌ಗೆ ಮರಳಿದ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಆಕ್ರಮಣಕಾರಿ ಆಟವಾಡಿ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಬಾರಿಸಿದರು. ಇನ್ನು ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಆಡಿರುವ ಶುಭ್ಮನ್ ಗಿಲ್ ಅಹಮದಾಬಾದ್ ಪಿಚ್‌ನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದಿದ್ದಾರೆ.
235 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಪ್ರವಾಸಿ ನ್ಯೂಜಿಲೆಂಡ್ ತಂಡ 12.1 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತು. ಡೆರಿಲ್ ಮಿಚೆಲ್ (35 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (13 ರನ್) ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌ಗಳು ಎರಡಂಕಿ ಮೊತ್ತ ಗಳಿಸಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications