ತಿರುವನಂಪುರಂ: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ಸರಣಿಯ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಕನಸನ್ನು ಎರಡೂ ತಂಡಗಳು ಹೊಂದಿವೆ. ಶನಿವಾರ ಜಯ ಸಾಧಿಸಿ ಟಿ20 ವಿಶ್ವಕಪ್‌ಗೆ ಕಾಲಿಡುವ ಕನಸು ಭಾರತ ತಂಡದ್ದಾಗಿದೆ. ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯವನ್ನು 50 ರನ್‌ಗಳಿಂದ ಗೆದ್ದುಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬಲಾಢ್ಯವಾಗಿದೆ. ಐದನೇ ಪಂದ್ಯದಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆ ಸೂರ್ಯ ಪಡೆಯದ್ದಾಗಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿತ್ತು. ಶನಿವಾರ ನಡೆಯುವ ಪಂದ್ಯದಲ್ಲಿ ಈ ಹಿಂದಿನ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಂತು ಪ್ರದರ್ಶನ ನೀಡುವ ಅನಿವಾರ್ಯತೆ ಭಾರತ ತಂಡದ್ದಾಗಿದೆ.

ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಸೂರ್ಯಕುಮಾರ್ ಯಾದವ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಮೇಲೆ ಒತ್ತಡವಿದೆ. ಇವರು ಇದೇ ಮೊದಲ ಬಾರಿಗೆ ತಮ್ಮ ತವರು ಮೈದಾನದಲ್ಲಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಟಿ20 ವಿಶ್ವಕಪ್‌ಗೂ ಮುನ್ನ ಲಯಕ್ಕೆ ಮರಳುವ ವಿಶ್ವಾಸವನ್ನು ಹೊಂದಿದ್ದಾರೆ.
ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಿದರೆ ಬೆಸ್ಟ್ ಎಂದು ಹೇಳಲಾಗುತ್ತಿದೆ. ಇವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿರುವ ಇಶಾನ್ ಮತ್ತೊಮ್ಮೆ ಇದೇ ರೀತಿ ಪ್ರದರ್ಶನ ನೀಡುವ ಕನಸು ಹೊಂದಿದ್ದಾರೆ. ಭರ್ಜರಿ ಪ್ರದರ್ಶನ ನೀಡುತ್ತಿರುವ ನಾಯಕ ಸೂರ್ಯಕುಮಾರ್ ಯಾದವ್, ಕೊನೆಯ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿ ಗೆಲುವಿನಲ್ಲಿ ಅಗತ್ಯ ಕಾಣಿಕೆ ನೀಡಲು ಯೋಜನೆ ರೂಪಿಸಿಕೊಂಡಿದ್ದಾರೆ.

ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಟವನ್ನು ಆಡಬೇಕಿದೆ. ಇನ್ನು ಕಳೆದ ಪಂದ್ಯದಲ್ಲಿ ಬೆಂಚ್ ಕಾಯ್ದಿದ್ದ ಅರ್ಷದೀಪ್ ಸಿಂಗ್ ಮತ್ತೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದರೆ ಬೆಸ್ಟ್. ಇವರಿಗೆ ಜಸ್ಪ್ರೀತ್ ಬುಮ್ರಾ ಹೊಸ ಚೆಂಡಿನೊಂದಿಗೆ ಸಾಥ್ ನೀಡಲಿದ್ದಾರೆ. ಸ್ಪಿನ್ ಬೌಲಿಂಗ್ ರೂಪದಲ್ಲಿ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ತಂಡ ಟಿ20 ವಿಶ್ವಕಪ್‌ಗೂ ಮುನ್ನ ತನ್ನ ಆಡುವ ಹನ್ನೊಂದರ ಬಳಗವನ್ನು ಸರಿಯಾಗಿ ಹೊಂದಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.
ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಜಯ ಸಾಧಿಸಿದೆ. ಆರಂಭಿಕರಾದ ಡೆವೋನ್ ಕಾನ್ವೆ ಹಾಗೂ ಟಿಮ್ ಸಿಫರ್ಟ್ ಮತ್ತೊಮ್ಮೆ ತಂಡದ ಪರ ಅಬ್ಬರದ ಪ್ರದರ್ಶನ ನೀಡಲು ಚಿಂತನೆ ನಡೆಸಿದ್ದಾರೆ. ಟಿ20 ಸರಣಿಯಲ್ಲಿ ಕಿವೀಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ಸ್ಟಾರ್ ಆಟಗಾರ ಗ್ಲೆನ್ ಫಿಲಿಪ್ಸ್ ರನ್ ಕಲೆ ಹಾಕಿದರೂ, ಇವರಿಗೆ ಯಾರೂ ಉತ್ತಮ ಸಾಥ್ ನೀಡುತ್ತಿಲ್ಲ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಇಶ್ ಸೋದಿ, ನಾಯಕ ಮಿಚಲ್ ಸ್ಯಾಂಟ್ನರ್ ಬಿಗಿ ದಾಳಿ ನಡೆಸಬೇಕಿದೆ. ಇನ್ನು ವೇಗಿಗಳು ಕರಾರುವಾಕ್ ದಾಳಿ ಸಂಘಟಿಸಿ ಜಯದಲ್ಲಿ ಮಿಂಚುವ ಅನಿವಾರ್ಯತೆ ಇದೆ.