IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ

ಬುಧವಾರ, ಫೆಬ್ರವರಿ 1ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 168 ರನ್‌ಗಳ ಅಂತರದಿಂದ ಸೋಲಿಸಿತು. ಇದೇ ವೇಳೆ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿತು.
ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 168 ರನ್‌ಗಳಿಂದ ಸೋಲಿಸುತ್ತಿದ್ದಂತೆಯೇ, ರನ್‌ಗಳ ಅಂತರದ ವಿಷಯದಲ್ಲಿ ಭಾರತದ ಅತಿದೊಡ್ಡ ಗೆಲುವು ದಾಖಲಿಸಿತು. 2018ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ 143 ರನ್‌ಗಳ ಗೆಲುವು ಭಾರತದ ಎರಡನೇ ಅತಿ ಹೆಚ್ಚು ಅಂತರದ ಗೆಲುವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತ್ತು.

12.1 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್
235 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಪ್ರವಾಸಿ ನ್ಯೂಜಿಲೆಂಡ್ ತಂಡ, 12.1 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತು. ಡೆರಿಲ್ ಮಿಚೆಲ್ (35 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (13 ರನ್) ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌ಗಳು ಎರಡಂಕಿ ಮೊತ್ತ ಗಳಿಸಲಿಲ್ಲ.
2.4 ಓವರ್‌ಗಳಾಗುಷ್ಟರಲ್ಲಿ 7 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆ, ಅಲ್ಲಿಂದ ಮೇಲೇಳಲೇ ಇಲ್ಲ. ಭಾರತದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಮಿಚೆಲ್ ಸ್ಯಾಂಟ್ನರ್ ಬಳಗ ಒಂದರ ಹಿಂದೆ ಒಂದರಂತೆ ವಿಕೆಟ್ ಉರುಳುತ್ತಲೇ ಇದ್ದವು.

ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 16 ರನ್ ನೀಡಿ 4 ವಿಕೆಟ್
ಇನ್ನು ಭಾರತ ಪರ ಬೌಲಿಂಗ್‌ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ 4 ಓವರ್‌ಗಳಲ್ಲಿ 16 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನುಳಿದಂತೆ ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್ ಮತ್ತು ಶಿವಂ ಮಾವಿ ತಲಾ 2 ವಿಕೆಟ್ ಪಡೆದು ಎದುರಾಳಿ ತಂಡವನ್ನು ಕಟ್ಟಿಹಾಕಿದರು.
ಇದಕ್ಕೂ ಮುನ್ನ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 126 ರನ್ ಬಾರಿಸಿ ಮಿಂಚಿದರು. ಪಂದ್ಯ ವಿಜೇತ ಪ್ರದರ್ಶನ ನೀಡಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಸರಣಿಯಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಸರಣಿಶ್ರೇಷ್ಠ ಆಟಗಾರನಾದರು.

ಅದ್ಭುತ ಫಾರ್ಮ್‌ಗೆ ಮರಳಿದ ಶುಭ್ಮನ್ ಗಿಲ್
2023ರ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತನ್ನ ಅದ್ಭುತ ಫಾರ್ಮ್‌ಗೆ ಮರಳಿದ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಆಕ್ರಮಣಕಾರಿ ಆಟವಾಡಿ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಬಾರಿಸಿದರು. ಶುಭ್ಮನ್ ಗಿಲ್ ಜೊತೆ ಭಾರತದ ಇನ್ನಿಂಗ್ಸ್ ಆರಂಭಿಸಿದ್ದ ಇಶಾನ್ ಕಿಶನ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ, ರಾಹುಲ್ ತ್ರಿಪಾಠಿ 22 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 44 ರನ್ ಬಾರಿಸಿದರು. ಇನ್ನು ಸುರ್ಯಕುಮಾರ್ ಯಾದವ್ ಅವರು 13 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು.

ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 30 ರನ್
ನಂತರ, ಶುಭ್ಮನ್ ಗಿಲ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ನಾಲ್ಕನೇ ವಿಕೆಟ್‌ಗೆ 103 ರನ್‌ಗಳ ಜೊತೆಯಾಟ ನೀಡಿದರು. ನಾಯಕ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ನ ನೆರವಿನಿಂದ 30 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ಪರ ಮೈಕೆಲ್ ಬ್ರೇಸ್‌ವೆಲ್, ಬ್ಲೇರ್ ಟಿಕ್ನರ್, ಇಶ್ ಸೋಧಿ, ಡೇರಿಲ್ ಮಿಚೆಲ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications