
ಹೊಸ ವಿಶ್ವದಾಖಲೆ ಬರೆಯಲಿದ್ದಾರ ಸೂರ್ಯಕುಮಾರ್ ಯಾದವ್
ಟೀಮ್ ಇಂಡಿಯಾದ ಆಟಗಾರ ಸೂರ್ಯಕುಮಾರ್ ಯಾದವ್ ಅದ್ಭುತ ಪಾರ್ಮ್‌ನಲ್ಲಿದ್ದು ಚುಟುಕು ಮಾದರಿಯ ನಂಬರ್ 1 ಆಟಗಾರ ಎನಿಸಿಕೊಂಡಿದ್ದಾರೆ. ಈ ವರ್ಷದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಸೂರ್ಯಕುಮಾರ್ ಯಾದವ್ ರನ್ ಮಳೆ ಹರಿಸಿದ್ದಾರೆ. ಇನ್ನು ಈ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ವಿಶ್ವದಾಖಲೆಯನ್ನು ಬರೆಯುವ ಅತ್ಯುತ್ತಮ ಅವಕಾಶ ಸೂರ್ಯಕುಮಾರ್ ಮುಂದಿದೆ. ಆದರೆ ಇದಕ್ಕಾಗಿ ಸೂರ್ಯಕುಮಾರ್ ಈ ಮೂರು ಪಂದ್ಯಗಳ ಸರಣಿಯಲ್ಲಿ 287 ರನ್‌ಗಳನ್ನು ಗಳಿಸಬೇಕಿದೆ.
2021ರಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಟಿ20 ಮಾದರಿಯಲ್ಲಿ 1326 ರನ್‌ಗಳಿಸಿದ್ದರು. ಈ ವರ್ಷ ಸೂರ್ಯಕುಮಾರ್ ಯಾದವ್ 29 ಟಿ20 ಪಂದ್ಯಗಳಲ್ಲಿ ಈವರೆಗೆ 1040 ರನ್‌ಗಳಿಸಿದ್ದಾರೆ. ಇದರಲ್ಲಿ 9 ಅರ್ಧಶತಕ ಹಾಗೂ ಒಂದು ಶತಕ ಸೇರಿದೆ. 43.33ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಸೂರ್ಯಕುಮಾರ್ ಯಾದವ್ 185.71ರಷ್ಟು ಅದ್ಭುತವಾದ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.

ಬೌಲಿಂಗ್‌ನಲ್ಲಿ ವಿಶ್ವದಾಖಲೆಯ ಸನಿಹದಲ್ಲಿ ಭುವನೇಶ್ವರ್ ಕುಮಾರ್
ಇನ್ನು ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ರನ್‌ಗಳಿಸುವ ದಾಖಲೆಯ ಸನಿಹದಲ್ಲಿದ್ದರೆ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಅಂತಾದ್ದೇ ಸಾಧನೆಗೆ ಮತ್ತಷ್ಟು ಹತ್ತಿರವಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಅವಕಾಶ ಭುವನೇಶ್ವರ್ ಕುಮಾರ್ ಮುಂದಿದ್ದು ಅದಕ್ಕಾಗಿ ಭುವಿ ಕೇವಲ 4 ವಿಕೆಟ್‌ಗಳನ್ನು ಮಾತ್ರವೇ ಪಡೆದರೆ ಸಾಕು.
ಭುವನೇಶ್ವರ್ ಕುಮಾರ್ ಈ ಕ್ಯಾಲೆಂಡರ್ ವರ್ಷದಲ್ಲಿ 30 ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 36 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಸದ್ಯ ಈ ದಾಖಲೆಯಲ್ಲಿ ಐರ್ಲೆಂಡ್ ತಂಡದ ಎಡಗೈ ವೇಗಿ ಜೋಶುವಾ ಲಿಟಲ್ 39 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಈ ದಾಖಲೆ ಮುರಿಯಲು ಭುವಿ ಈ ಸರಣಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯಬೇಕಿದೆ.

ಭುವಿಗೆ ಭಾರತದ ಪರ ಮತ್ತೊಂದು ದಾಖಲೆ ಬರೆಯುವ ಅವಕಾಶ
ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಮತ್ತೊಂದು ವಿಶೇಷ ಮೈಲಿಗಲ್ಲು ಸಾಧಿಸುವ ಅವಕಾಶ ಭುವನೇಶ್ವರ್ ಕುಮಾರ್ ಮುಂದಿದೆ. 32ರ ಹರೆಯದ ಟೀಮ್ ಇಂಡಿಯಾದ ವೇಗದ ಬೌಲರ್ ಈ ಸರಣಿಯಲ್ಲಿ 11 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ ಭಾರತದ ಪರವಾಗಿ 100 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಚುಟುಕು ಮಾದರಿಯಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಸ್ವಿಂಗ್ ಸ್ಪೆಶಲಿಸ್ಟ್ ಭುವನೇಶ್ವರ್ ಕುಮಾರ್.

1000 ರನ್‌ಗಳ ಸನಿಹ ರಿಷಭ್ ಪಂತ್
ಟೀಮ್ ಇಂಡಿಯಾದ ಆಟಗಾರ ರಿಷಭ್ ಪಂತ್ ಚುಟುಕು ಮಾದರಿಯಲ್ಲಿ ಈವರೆಗೂ ಹೇಳಿಕೊಳ್ಳುವಂತಾ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಟಿ20 ವಿಶ್ವಕಪ್‌ನಲ್ಲಿಯೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ರಿಷಭ್ ಪಂತ್ ವಿಫಲವಾಗಿ ಟೀಕೆಗೆ ಒಳಗಾಗಿದ್ದಾರೆ. ಈ ಮಧ್ಯೆ ಚುಟುಕು ಮಾದರಿಯಲ್ಲಿ ಮಹತ್ವದ ಮೈಲಿಗಲ್ಲು ದಾಖಲಿಸುವ ಅವಕಾಶ ಪಂತ್ ಮುಂದಿದೆ. ಟಿ20ಐ ಮಾದರಿಯಲ್ಲಿ 1000 ರನ್‌ಗಳಿಸಿದ ಮೈಲಿಗಲ್ಲು ತಲುಪಲು ರಿಷಭ್ ಪಂತ್ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೇವಲ 30 ರನ್‌ಗಳನ್ನು ಮಾತ್ರವೇ ಗಳಿಸಬೇಕಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿರುವ ಕಾರಣ ರಿಷಭ್ ಪಂತ್ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಜೊತೆಗೆ ಆರಂಭಿಕನಾಗಿ ತಾನು ಪರಿಣಾಮಕಾರಿ ಆಟಗಾರ ಎಂದು ತೋರ್ಪಡಿಸಿಕೊಳ್ಳಲು ಅವಕಾಶವೂ ಪಂತ್‌ಗೆ ಇದೆ. ಈ ಅವಕಾಶವನ್ನು ಯುವ ಎಡಗೈ ಆಟಗಾರ ಯಾವ ರೀತಿ ಬಳಸಿಕೊಳ್ಳಲಿದ್ದಾರೆ ಎಂಬುದು ಈಗ ಎಲ್ಲರ ಕುತೂಹಲ.

ವೈಯಕ್ತಿಕ ಮೈಲಿಗಲ್ಲು ಸಾಧಿಸಲು ಕುಲ್‌ದೀಪ್ ಯಾದವ್ ಸಜ್ಜು
ಇನ್ನು ಟೀಮ್ ಇಂಡಿಯಾದ ಸ್ಕ್ವಾಡ್‌ನಲ್ಲಿ ಮತ್ತೊಮ್ಮೆ ಅವಕಾಶ ಗಿಟ್ಟಿಸಿಕೊಂಡಿರುವ ಕುಲ್‌ದೀಪ್ ಯಾದವ್ ಆಡುವ ಬಳಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ ಕುಲ್ದೀಪ್. ಈ ವರ್ಷದ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು ಕೂಡ ನಂತರ ಗಾಯದ ಸಮಸ್ಯೆಗೆ ತುತ್ತಾದರು. 2019ರ ಬಳಿಕ ಕುಲ್‌ದೀಪ್ ಬೌಲಿಂಗ್‌ನಲ್ಲಿ ಹಿಂದಿನ ತೀಕ್ಷ್ಣತೆಯನ್ನು ಕಳೆದುಕೊಂಡಿದ್ದಾರೆ. ಈ ಮಧ್ಯೆ ವೈಯಕ್ತಿಕವಾಗಿ ಮಹತ್ತರ ಮೈಲಿಗಲ್ಲು ಸಾಧಿಸುವ ಅವಕಾಶ ಕುಲ್‌ದೀಪ್ ಯಾದವ್ ಮುಂದಿದೆ. ಈ ಸರಣಿಯಲ್ಲಿ 6 ವಿಕೆಟ್ ಪಡೆದರೆ ಕುಲ್‌ದೀಪ್ ಯಾದವ್ ಅಂತಾರಾಷ್ಟ್ರೀಯ ಚುಟುಕು ಮಾದರಿಯಲ್ಲಿ 50 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.
ಇನ್ನು ಕುಲ್‌ದೀಪ್ ಯಾದವ್ ಈ ಸಾಧನೆ ಮಾಡಿದರೆ ಚುಟುಕು ಮಾದರಿಯಲ್ಲಿ ಭಾರತದ ಪರವಾಗಿ 50 ಟಿ20 ವಿಕೆಟ್ ಸಂಪಾದಿಸಿದ 7ನೇ ಬೌಲರ್ ಎನಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಅಗ್ರಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಇದ್ದಾರೆ. ಅದಾದ ಬಳಿಕ ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ 50ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳಾಗಿದ್ದಾರೆ.


Click it and Unblock the Notifications
