ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಹೈವೋಲ್ಟೇಜ್ ಫೈಟ್ ಭಾನುವಾರ ದುಬೈನಲ್ಲಿ ನಡೆಯಲಿದೆ. ಈ ಪಂದ್ಯ ಪ್ರಸಕ್ತ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಕೊನೆಯ ಪಂದ್ಯವಾಗಿದೆ. ಈ ಪಂದ್ಯ ಮುಗಿದ ಬಳಿಕ ಸೆಮಿಫೈನಲ್ ಚಿತ್ರಣ ಸ್ಪಷ್ಟವಾಗಿ ಸಿಗಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈಗಾಗಲೇ "ಎ" ಗುಂಪಿನಿಂದ ಸೆಮಿಫೈನಲ್ ಹಂತವನ್ನು ತಲುಪಿದ್ದು, ಯಾರು ಅಗ್ರ ಸ್ಥಾನವನ್ನು ಪಡೆಯುತ್ತಾರೆ ಎಂಬ ಕುತೂಹಲ ಮಾತ್ರ ಮನೆ ಮಾಡಿದೆ.
ಭಾನುವಾರ ನಡೆಯಲಿರುವ ಬಿಗ್ ಫೈಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಣಕ್ಕೆ ಇಳಿಯುವುದು ಫಿಕ್ಸ್. ಇನ್ನು ಪಾಕ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿರುವ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಇನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ದೊಡ್ಡ ಇನಿಂಗ್ಸ್ ಕಟ್ಟದೇ ಇದ್ದರೂ, ತಮ್ಮ ನೈಜ್ಯ ಆಟವನ್ನು ಆಡಿ ತಂಡಕ್ಕೆ ಆಧಾರವಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಈ ಸ್ಟಾರ್ ಆಟಗಾರರು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಲಯಕ್ಕಾಗಿ ಪರದಾಟ ನಡೆಸುತ್ತಿದ್ದ ವಿರಾಟ್ ಕೊಹ್ಲಿ, ಫಾರ್ಮ್ ಕಂಡುಕೊಂಡಿದ್ದಾರೆ. ಇದೇ ಲಯವನ್ನು ಇವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪ್ರದರ್ಶಿಸಿದರೆ ಮತ್ತೊಂದು ದಾಖಲೆಯನ್ನು ನಿರ್ಮಿಸಬಹುದು. ಸದ್ಯ ವಿರಾಟ್ ಕಿವೀಸ್ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಇವರು ಆಡಿರುವ 31 ಪಂದ್ಯಗಳಲ್ಲಿ 58ರ ಸರಾಸರಿಯಲ್ಲಿ 1645 ರನ್ ಸಿಡಿಸಿದ್ದಾರೆ. ಭಾನುವಾರ 106 ರನ್ ಸಿಡಿಸುವಲ್ಲಿ ಯಶಸ್ವಿಯಾದರೆ, ಮತ್ತೊದು ದಾಖಲೆ ಬರೆಯಲಿದ್ದಾರೆ.
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್‌ಗಳನ್ನು ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು. ಸದ್ಯ ಈ ಸ್ಥಾನ ಸಚಿನ್ ತೆಂಡೂಲ್ಕರ್ ಅವರ ಬಳಿ ಇದೆ. ಸಚಿನ್ ಕಿವೀಸ್ ವಿರುದ್ಧ 1750 ರನ್ ಬಾರಿಸಿದ್ದಾರೆ. ಭಾನುವಾರ ವಿರಾಟ್ 106 ರನ್ ಬಾರಿಸಿದರೆ ಸಚಿನ್ ದಾಖಲೆ ಉಡೀಸ್ ಆಗುತ್ತದೆ.

ವಿರಾಟ್ ಅವರಂತೆ ರೋಹಿತ್ ಸಹ ನ್ಯೂಜಿಲೆಂಡ್ ವಿರುದ್ಧ ಸ್ಥಿರ ಬ್ಯಾಟಿಂಗ್ ನಡೆಸಿದ್ದಾರೆ. ಇವರು 29 ಪಂದ್ಯಗಳಲ್ಲಿ 982 ರನ್ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಇವರು ಅರ್ಧಶತಕ ಬಾರಿಸುವಲ್ಲಿ ಸಫಲರಾದರೆ, ಕಿವೀಸ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಾಹುಲ್ ದ್ರಾವಿಡ್ ಸಾಧನೆ ಮೀರಿ ನಿಲ್ಲಬಹುದು. ರಾಹುಲ್ ದ್ರಾವಿಡ್ ಕಿವೀಸ್ ವಿರುದ್ಧ 1032 ರನ್ ಸಿಡಿಸಿದ್ದಾರೆ. ರೋಹಿತ್ ಈ ಪಂದ್ಯದಲ್ಲಿ 51 ರನ್ ಬಾರಿಸಿದ್ದೇ ಆದಲ್ಲಿ ರಾಹುಲ್ ದ್ರಾವಿಡ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಒಂದು ವೇಳೆ ರೋಹಿತ್ ಶತಕವನ್ನೇ ಬಾರಿಸಿದರೆ, ಸೌರವ್ ಗಂಗೂಲಿಯವರ ದಾಖಲೆ ಮೀರಿ ನಿಲ್ಲಲಿದ್ದಾರೆ.