ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ತನ್ನ ಹಿಡಿತವನ್ನು ಮುಂದುವರಿಸಿದೆ. ಭಾನುವಾರ ಮಳೆಯಿಂದಾಗಿ ಪಂದ್ಯ ಸ್ಥಗಿತವಾದ ನಂತರ ಸೋಮವಾರ ಮೀಸಲು ದಿನದಂದು ಪಂದ್ಯವನ್ನು ಮುಂದುವರಿಸಲಾಗಿದೆ. ಟೀಮ್ ಇಂಡಿಯಾ ಪರವಾಗಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಜೊತೆಯಾಟವನ್ನ ಮುಂದುವರಿಸಿದರು.
ಇನ್ನು ಈ ಪಂದ್ಯದಲ್ಲಿ ಗಾಯದಿಂದಾಗಿ ಸುದೀರ್ಘ ಕಾಲದ ಬಳಿಕ ತಂಡಕ್ಕೆ ಮರಳಿರುವ ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿರುವುದನ್ನು ಸಾರಿದ್ದಾರೆ. ಪಾಕಿಸ್ತಾನ್ ಬೌಲರ್‌ಗಳನ್ನು ಭರ್ಜರಿಯಾಗಿ ಬೆಂಡೆತ್ತಿರುವ ಕೆಎಲ್ ರಾಹುಲ್ ಅದ್ಭುತ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಶತಕದ ಜೊತೆಯಾಟವನ್ನು ನೀಡಿ ಇನ್ನಿಂಗ್ಸ್ ಮುಂದುವರಿಸಿದ್ದಾರೆ.

ಗಾಯದಿಂದಾಗಿ ತಂಡದಿಮದ ಹೊರಬಿದ್ದಿದ್ದ ಕೆಎಲ್ ರಾಹುಲ್ ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದರು. ಆದರೆ ಮತ್ತೆ ಗಾಯದ ಕಾರಣದಿಂದಾಗಿ ಏಷ್ಯಾಕಪ್ ಟೂರ್ನಿಯ ಮೊದಲ ಎರಡು ಲೀಗ್ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ನಂತರ ಸೂಪರ್ 4 ಹಂತದಲ್ಲಿಯೂ ಕೆಎಲ್ ರಾಹುಲ್‌ಗೆ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದು ಸುಲಭ ಸವಾಲಾಗಿರಲಿಲ್ಲ.
ಐದನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದ ಕಾರಣ ಆ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡುವುದು ಕಷ್ಟ ಎನ್ನುವುದು ಸ್ಪಷ್ಟವಾಗಿತ್ತು. ಹೀಗಾಗಿ ರಾಹುಲ್‌ಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ದೊರೆಯುವುದಿಲ್ಲವೇ ಎನ್ನುವ ಪ್ರಶ್ನೆಗಳು ಕೂಡ ಉದ್ಭವವಾಗಿತ್ತು. ಆದರೆ ಶ್ರೇಯಸ್ ಐಯ್ಯರ್‌ಗೆ ನೋವು ಕಾಣಿಸಿಕೊಂಡಿರುವ ಕಾರಣ ಅವರ ಸ್ಥಾನದಲ್ಲಿ ರಾಹುಲ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮೂಲಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ನಂತರ ತಮ್ಮ ಸಹಜ ಶೈಲಿಗೆ ಒಗ್ಗಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಸೇರಿಕೊಂಡು ಭರ್ಜರಿ ಶತಕದ ಜೊತೆಯಾಟವನ್ನು ಕೂಡ ನೀಡಿದ್ದಾರೆ ಕೆಎಲ್ ರಾಹುಲ್.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ಅರ್ಧ ಶತಕ ಸಿಡಿಸಿದ್ದಾರೆ. 55 ಎಸೆತಗಳನ್ನು ಎದುರಿಸಿ ವಿರಾಟ್ ಕೊಹ್ಲಿ 66ನೇ ಅರ್ಧ ಶತಕವನ್ನು ಪೂರ್ಣಗೊಳಿಸಿದ್ದಾದರು. ಕೊಹ್ಲಿ ಕೂಡ ಆರಂಬದಲ್ಲಿ ಎಚ್ಚರಿಕೆಯ ಬ್ಯಾಟಿಂಗ್‌ನ ಬಳಿಕ ಸರಾಗವಾಗಿ ರನ್ ಬಾರಿಸುತ್ತಾ ಮುನ್ನುಗ್ಗಿದ್ದಾರೆ. ಇನ್ನು ಟೀಮ್ ಇಂಡಿಯಾದ ಈ ದಾಂಡಿಗರನ್ನು ಕಟ್ಟಿ ಹಾಕಲು ಪಾಕಿಸ್ತಾನ ತಂ ಸರ್ವ ಪ್ರಯತ್ನವನ್ನು ಕೂಡ ನಡೆಸುತ್ತಿದೆ.