ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಬಹು ನಿರೀಕ್ಷಿತ ಪಂದ್ಯವೆಂದು ಬಿಂಬಿಸಲಾಗಿರುವ ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿವೆ.
ಈ ಪಂದ್ಯಕ್ಕಾಗಿ ಉಭಯ ತಂಡಗಳು ಕೊನೆ ಕ್ಷಣದ ಸಿದ್ಧತೆ ಮಾಡಿಕೊಳ್ಳುತ್ತಿವೆ. ಭಾರತ ತಂಡ ಕೂಡ ಶುಕ್ರವಾರ ಅಭ್ಯಾಸದಲ್ಲಿ ಭಾಗವಹಿಸಿತು. ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಕೂಡ ಅಭ್ಯಾಸದಲ್ಲಿ ಭಾಗವಹಿಸಿದ್ದು, ತಂಡಕ್ಕೆ ಶುಭಸುದ್ದಿಯಾಗಿದೆ.

ಎರಡೂ ತಂಡಗಳು ಮೊದಲ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಪಾಯಿಂಟ್‌ಗಳನ್ನು ಹೊಂದಿವೆ. ಅಂಕಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಶನಿವಾರ ನಡೆಯಲಿರುವ ಪಂದ್ಯ ಎರಡೂ ತಂಡಗಳಿಗೆ ಪ್ರಮುಖವಾಗಿದೆ.
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಈವರೆಗೆ ಭಾರತ ಪಾಕಿಸ್ತಾನ 7 ಬಾರಿ ಮುಖಾಮುಖಿಯಾಗಿದ್ದು ಎಲ್ಲಾ ಪಂದ್ಯಗಳಲ್ಲಿ ಭಾರತ ಜಯಗಳಿಸಿದೆ. ಪಾಕಿಸ್ತಾನ ಈವರೆಗೂ ಭಾರತ ತಂಡವನ್ನು ಏಕದಿನ ವಿಶ್ವಕಪ್‌ನಲ್ಲಿ ಸೋಲಿಸಲು ಸಾಧ್ಯವಾಗಿಲ್ಲ. ಭಾರತ ಗೆಲುವಿನ ಅಭಿಯಾನ ಮುಂದುವರೆಸುವ ವಿಶ್ವಾಸದಲ್ಲಿದ್ದರೆ, ಪಾಕಿಸ್ತಾನ ಈ ದಾಖಲೆ ಮುರಿಯುವ ಯೋಜನೆಯಲ್ಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, 1.50 ಲಕ್ಷ ಮಂದಿ ಪಂದ್ಯವನ್ನು ವೀಕ್ಷಿಸಲು ಮೈದಾನದಲ್ಲಿ ಸೇರುವ ನಿರೀಕ್ಷೆ ಇದ್ದು, ಭಾರಿ ಬಂದೋಬಸ್ತ್ ಮಾಡಲಾಗಿದೆ.
ಭಾರತ ಪಾಕಿಸ್ತಾನ ಪಂದ್ಯದ ನಡುವೆ ಅದ್ಧೂರಿ ಸಮಾರಂಭ ಕೂಡ ಹಮ್ಮಿಕೊಳ್ಳಲಾಗಿದ್ದು ಬಾಲಿವುಡ್ ತಾರೆಗಳು, ಗಾಯಕರು ಕಾರ್ಯಕ್ರಮ ನೀಡಲಿದ್ದಾರೆ. ಮಾಜಿ ಕ್ರಿಕೆಟಿಗರು, ಪ್ರಮುಖ ರಾಜಕಾರಣಿಗಳು ಮೈದಾನದಲ್ಲಿ ಹಾಜರಿದ್ದು, ಪಂದ್ಯವನ್ನು ವೀಕ್ಷಿಸಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ಶುಭಮನ್ ಗಿಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಇಶಾನ್ ಕಿಶನ್ ಹೊರಗುಳಿಯುವ ಸಾಧ್ಯತೆ ಇದೆ. ಅಹಮದಾಬಾದ್ ಪಿಚ್ ವೇಗಿಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಮೊಹಮ್ಮದ್ ಶಮಿ ಕೂಡ ಆಡುವ ಸಾಧ್ಯತೆ ಇದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಶಮಿ ಐಪಿಎಲ್ 2023 ರಲ್ಲಿ 28 ರಲ್ಲಿ 17 ವಿಕೆಟ್ ಪಡೆದರು. ಅವರು ಸ್ಥಳದಲ್ಲಿ ಉತ್ತಮ ಸಾಧನೆ ಮಾಡಿರುವುದು ಮಾತ್ರವಲ್ಲದೆ ಪರಿಸ್ಥಿತಿಗಳನ್ನು ಎಲ್ಲರಿಗಿಂತ ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.
ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಲ್ಲಿ ಕೂಡ ಪ್ರದರ್ಶನ ನೀಡುವುದರಿಂದ ಅವರನ್ನು ಆಯ್ಕೆಗೆ ಪರಿಗಣಿಸಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎನ್ನುವುದು ಗಮನಾರ್ಹವಾಗಿದೆ.