Ind vs Pak Women's T20 World Cup: ದೀಪ್ತಿ ಪಂಚ್‌ಗೆ ಪಾಕ್ ಸುಸ್ತು; ಭಾರತ ಗೆಲುವಿನ ಆರಂಭ
ಬರ್ಮಿಂಗ್‌ಹ್ಯಾಮ್: ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಬಾರಿಸಿದ ಅರ್ಧಶತಕ ಹಾಗೂ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರ ಭರ್ಜರಿ ಆಟದ ನೆರವಿನಿಂದ ಟೀಮ್ ಇಂಡಿಯಾ ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 60 ರನ್‌ಗಳಿಂದ ಮಣಿಸಿ ಅಬ್ಬರಿಸಿತು. ಈ ಮೂಲಕ ಭಾರತ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ 7ನೇ ಗೆಲುವಿನ ನಗೆ ಬೀರಿದೆ.
ಪಾಕಿಸ್ತಾನ ವಿರುದ್ಧ ಟಾಸ್ ಗೆಲ್ಲುತ್ತಿದ್ದಂತೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿದರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆದರೆ ಮೊದಲ ಓವರ್‌ನಲ್ಲೇ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಜೆಮಿಮಾ ರೋಡ್ರಿಗಸ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.

ಸ್ಮೃತಿ ಅರ್ಧಶತಕ
18 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ದೊಡ್ಡ ಕಾಣಿಕೆ ನೀಡಿತು. ಈ ಜೋಡಿ 3ನೇ ವಿಕೆಟ್‌ಗೆ 64 ಎಸೆತಗಳಲ್ಲಿ 91 ರನ್ ಸೇರಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್ ಸಿಡಿಸಿ ಔಟ್ ಆದರು. ಹರ್ಮನ್‌ಪ್ರೀತ್ ಕೌರ್ 4 ಬೌಂಡರಿ ಸಹಾಯದಿಂದ 36 ರನ್ ಬಾರಿಸಿ ಔಟ್ ಆದರು.
ಕೊನೆಯ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಚಾ ಘೋಷ್ ಕೇವಲ 17 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್ ಸೇರಿಸಿತು.
171 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ಉತ್ತಮ ಆರಂಭವನ್ನು ಮಾಡಿತು. ಪಾಕ್ ಪವರ್‌ಪ್ಲೇನಲ್ಲಿ 52 ರನ್ ಸೇರಿಸಿ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಬಳಿಕ ಟೀಮ್ ಇಂಡಿಯಾದ ಭರವಸೆಯ ಬೌಲರ್‌ಗಳು ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದರು. ಮಧ್ಯದ ಓವರ್‌ಗಳಲ್ಲಿ ಪಾಕ್ 6 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಪಾಕ್ ಪರ ಆರಂಭಿಕ ಆಟಗಾರ್ತಿ ಮುನೀಬ ಅಲಿ 5 ಬೌಂಡರಿ ಸಹಾಯದಿಂದ 41 ರನ್ ಬಾರಿಸಿ ಔಟ್ ಆದರು. ಗುಲ್ ಫಿರೋಜಾ 12, ಆಯೇಶಾ ಜಾಫರ್ 12, ಅಲಿಯಾ ರಿಯಾಜ್ 18 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಪಾಕಿಸ್ತಾನ 17 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್ ಆಯಿತು.
ದೀಪ್ತಿ ಶರ್ಮಾ ಅಬ್ಬರ
ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್ ದೀಪ್ತಿ ಶರ್ಮಾ ಅಮೋಘ ಪ್ರದರ್ಶನ ನೀಡಿದರು. ಇವರು ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಮೂರು ವಿಕೆಟ್ ಪಡೆದರು. ಒಟ್ಟಾರೆಯಾಗಿ 4 ಓವರ್ ಬೌಲಿಂಗ್ ಮಾಡಿದ ದೀಪ್ತಿ ಶರ್ಮಾ 10 ರನ್ ನೀಡಿ 5 ವಿಕೆಟ್ ಪಡೆದರು. ಯುವ ಸ್ಪಿನ್ ಬೌಲರ್ ಶ್ರೀ ಚರಣಿ 3 ವಿಕೆಟ್ ಉರುಳಿಸಿದರು. ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ತನ್ನ ಮುಂದಿನ ಪಂದ್ಯವನ್ನು ನೆದರ್‌ಲ್ಯಾಂಡ್ಸ್ ವಿರುದ್ಧ ಜೂನ್ 17 ರಂದು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

