Ind vs Pak: ಬಾಬರ್ ಪಡೆಯ ಹಾರ್ದಿಕ್ ಭಯ: ಪಾಂಡ್ಯ ಕಟ್ಟಿಹಾಕಲು ಪಾಕ್‌ನಿಂದ ವಿಶೇಷ ಯೋಜನೆ!

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಮುಖಾಮುಖಿ ಭಾನುವಾರ ನಡೆಯಲಿದೆ. ಒಂದು ವಾರದಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಈ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಎರಡು ತಂಡಗಳಿಂದ ಪೈಪೋಟಿಯ ಪ್ರದರ್ಶನ ಬಂದಿದ್ದು ಅಂತಿಮ ಹಂತದಲ್ಲಿ ಭಾರತ ಗೆಲುವಿನ ನಗೆ ಬೀಡುವಲ್ಲಿ ಯಶಸ್ವಿಯಾಗಿತ್ತು. ಈ ಸೋಲಿನ ಮುಖಭಂಗದಿಂದ ಹೊರಗೆ ಬರಲು ಪಾಕಿಸ್ತಾನ ತಂಡ ಕಠಿಣ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.
ಇನ್ನು ಲೀಗ್ ಹಂತದ ಮೊದಲ ಮುಖಾಮುಖಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆಲುವು ಸಾಧಿಸಲು ಕಾರಣವಾದ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ. ಮೊದಲಿಗೆ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುಹರಿಸಿದ್ದ ಹಾರ್ದಿಕ್ ಪಾಂಡ್ಯ ಬಳಿಕ ಬ್ಯಾಟಿಂಗ್‌ನಲ್ಲಿ ಸ್ಪೋಟಕ ಆಟವಾಡುವ ಮೂಲಕ ಪಾಕಿಸ್ತಾನಕ್ಕೆ ಆಘಾತ ನೀಡಿದರು.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧದ ಸೂಪರ್ 4 ಹಂತದ ಕದನಕ್ಕೂ ಮುನ್ನ ಸಾಕಷ್ಟು ಲೆಕ್ಕಾಚಾರಗಳನ್ನು ಹಾಕಿದೆ. ತಂಡದ ಮೀಟಿಂಗ್‌ನಲ್ಲಿ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವಿಚಾರವಾಗಿಯೇ ಹೆಚ್ಚು ಚರ್ಚೆಗಳು ನಡೆದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳೇ ವರದಿ ಮಾಡಿದೆ. ಭಾರತದ ಆಲ್‌ರೌಂಡರ್ ವಿರುದ್ಧ ವಿಶೇಷ ರಣತಂತ್ರವನ್ನು ಸಿದ್ಧಪಡಿಸಿಕೊಂಡಿದೆ.

ಪಾಂಡ್ಯಾ ಮೇಲೆಯೇ ಬಾಬರ್ ಪಡೆಯ ಕಣ್ಣು
ಭಾರತ ತಂಡದಲ್ಲಿ ಸಾಕಷ್ಟು ಪ್ರಮಾಣದ ಮ್ಯಾಚ್ ವಿನ್ನರ್‌ಗಳು ಇದ್ದಾರೆ. ಆದರೆ ಎಲ್ಲರಿಗಿಂತಲೂ ಪಾಕಿಸ್ತಾನ ಹೆಚ್ಚು ತಲೆಕೆಡಿಸಿಕೊಂಡಿರುವುದು ಹಾರ್ದಿಕ್ ಪಾಂಡ್ಯ ಬಗ್ಗೆ. ಲೀಗ ಹಂತದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ಪಡೆಗೆ ದೊಡ್ಡ ಆಘಾತವನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದಾಗಿಯೇ ಹಾರ್ದಿಕ್ ಪಾಂಡ್ಯ ವಿರುದ್ಧ ವಿಶೇಷ ಯೋಜನೆಗಳನ್ನು ಬಾಬರ್ ಪಡೆ ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ. ಶನಿವಾರ ನಡೆದ ಟೀಮ್ ಮೀಟಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕಟ್ಟಿಹಾಕುವ ವಿಚಾರವಾಗಿಯೇ ಹೆಚ್ಚಿನ ಚರ್ಚೆಗಳು ನಡೆದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ.

ಆ ನಾಲ್ಕು ಓವರ್‌ಗಳು..
ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ದಾಳಿಯ ಬಗ್ಗೆ ಪಾಕಿಸ್ತಾನ ತಂಡ ಹೆಚ್ಚು ತಲೆಕೆಡಿಸಿಕೊಂಡಂತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಬೌನ್ಸರ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಲು ಆಟಗಾರರಿಗೆ ಸೂಚಿಸಲಾಗಿದೆ. ಮೊದಲ ಪಂದ್ಯದಲ್ಲಿ ಬೌನ್ಸರ್ ಹಾಗೂ ಶಾರ್ಟ್ ಪಿಚ್ ಎಸೆತಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಈ ಮುಖಾಮುಖಿಯಲ್ಲಿಯೂ ಅದನ್ನು ಉಪಯೋಗಿಸುವ ಸಾಧ್ಯತೆಯಿರುವ ಕಾರಣ ಹಾರ್ದಿಕ್ ಅವರ ಬಲೆಗೆ ಬೀಳದಂತೆ ಮ್ಯಾನೇಜ್‌ಮೆಂಟ್ ಸೂಚನೆ ನೀಡಿದೆ. ಅಲ್ಲದೆ ಭಾರತೀಯ ಆಲ್‌ರೌಂಡರ್‌ನ ನಾಲ್ಕು ಓವರ್‌ಗಳನ್ನು ಎಚ್ಚರಿಕೆಯಿಂದ ಆಡುವಂತೆ ಸಲಹೆ ನೀಡಲಾಗಿದೆ.

ಬೌಲಿಂಗ್‌ನಲ್ಲಿ ಶದಬ್‌ಖಾನ್‌ಗೆ ಹೊಣೆ
ಇನ್ನು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ಗೆ ಇಳಿದಾಗ ಅವರನ್ನು ಕಟ್ಟಿಹಾಕಲು ಅನುಭವಿ ಸ್ಪಿನ್ನರ್ ಶದಬ್ ಖಾನ್‌ಗೆ ಹೊಣೆ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಬ್ಯಾಟಿಂಗ್‌ನಲ್ಲಿ ವೇಗವಾಗಿ ಹಾರ್ದಿಕ್ ಪಾಂಡ್ಯ ರನ್‌ಗಳಿಸದಂತೆ ತಡೆಯಲು ಶದಬ್ ಖಾನ್ ಸೂಕ್ತ ಬೌಲರ್ ಎಂದು ಪಾಕಿಸ್ತಾನ ನಿರ್ಧರಿಸಿದ್ದು ಹಾರ್ದಿಕ್ ಕ್ರೀಸ್‌ಗಿಳಿಯುವಾಗ ಅವರಿಗೆ ದಾಳಿ ನಡೆಸುವ ನಿಟ್ಟಿನಲ್ಲಿ ಶದಬ್ ಖಾನ್ ಓವರ್‌ಗಳನ್ನು ಉಳಿಸಿಕೊಳ್ಳುವ ಯೋಜನೆ ಪಾಕ್ ರೂಪಿಸಿದ್ದು ಈ ಮೂಲಕ ಕಟ್ಟಿ ಹಾಕಬಹುದು ಎಂದು ಲೆಕ್ಕಾಚಾರ ಮಾಡಿದೆ ಎಂದು ವರದಿಯಾಗಿದೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ರವಿ ಬಿಷ್ಣೋಯ್, ದಿನೇಶ್ ಕಾರ್ತಿಕ್, ಅವೇಶ್ ಖಾನ್, ದೀಪಕ್ ಹೂಡಾ
ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ನಸೀಮ್ ಶಾ, ಹಸನ್ ಅಲಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್, ಹೈದರ್ ಅಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications