ಲಾಹೋರ್, ಅಕ್ಟೋಬರ್ 17: ಭಾರತದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯು ಹಲವು ರೋಚಕ ಮತ್ತು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಅಫ್ಘಾನಿಸ್ತಾನದಂತಹ ದುರ್ಬಲ ತಂಡ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನೇ ಸೋಲಿಸಿ ಅಚ್ಚರಿ ಮೂಡಿಸಿತು.
ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1.20 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಮಧ್ಯೆ ನಡೆದ ಹೈ-ವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ 7 ವಿಕೆಟ್‌ಗಳ ಹೀನಾಯ ಸೋಲು ಕಂಡಿತು.
ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 1992ರಿಂದ ಪಾಕಿಸ್ತಾನ ವಿರುದ್ಧ ಸತತ 8ನೇ ಗೆಲುವು ಸಾಧಿಸಿ ಭಾರತ ತಂಡ ತನ್ನ ಅಜೇಯ ದಾಖಲೆ ಮುಂದುವರೆಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 30.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು.
ಭಾರತ ವಿರುದ್ಧ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಸಮುದಾಯವು ತಂಡಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪರಿಶೀಲಿಸುತ್ತಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವಮಾನವನ್ನು ಅನುಭವಿಸುತ್ತಿದ್ದಾರೆ.
ಪಾಕಿಸ್ತಾನ ತಂಡದಲ್ಲಿನ ಹಲವಾರು ನ್ಯೂನತೆಗಳನ್ನು ಕ್ರಿಕೆಟ್ ತಜ್ಞರು ಗಮನ ಸೆಳೆದಿದ್ದು ಅದು ಹಿನ್ನಡೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಇಂತಹ ವಾತಾವರಣದ ನಡುವೆ, ತನ್ನ ಪ್ರತಿಕ್ರಿಯೆ ಮತ್ತು ವಿವಾದಗಳಿಂದಾಗಿ ಆಗಾಗ್ಗೆ ಗಮನ ಸೆಳೆಯುವ ಪ್ರಸಿದ್ಧ ಟಿಕ್‌ಟಾಕರ್ ಹರೀಮ್ ಶಾ ಆಶ್ಚರ್ಯಕರ ಆರೋಪವನ್ನು ಮಾಡಿದ್ದಾಳೆ.
"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ದುಷ್ಕೃತ್ಯ ಎಸಗಲು ಮಾಟ-ಮಂತ್ರದ ಅಭ್ಯಾಸ ಮಾಡುವವರ ಸೇವೆಯನ್ನು ಕೋರಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತನಗೆ ಮಾಹಿತಿ ಸಿಕ್ಕಿದೆ".
"ಪಾಕಿಸ್ತಾನ ತಂಡದ ಮೇಲೆ ಮಾಟ-ಮಂತ್ರ ಮಾಡಲು ಪ್ರಸಿದ್ಧ ಜಾದೂ ತಜ್ಞ ಕಾರ್ತಿಕ್ ಚಕ್ರವರ್ತಿ ಅವರಿಗೆ ಜಯ್ ಶಾ ಈ ಕೆಲಸವನ್ನು ನೀಡಿದ್ದಾರೆ." ಎಂದು ಟ್ವಿಟ್ಟರ್‌ನಲ್ಲಿ ಹರೀಮ್ ಶಾ ಪ್ರತಿಪಾದಿಸಿದ್ದಾಳೆ.

ಈ ವಿಷಯದ ಬಗ್ಗೆ ಐಸಿಸಿಯಿಂದ ಸಮಗ್ರ ತನಿಖೆಗೆ ಹರೀಮ್ ಶಾ ಕರೆ ನೀಡಿದರು. ಇಂತಹ ಆರೋಪಗಳು ಸ್ವೀಕಾರಾರ್ಹವಲ್ಲ ಮತ್ತು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಕಟುವಾಗಿ ಹೇಳಿದ್ದಾಳೆ.
ಪಾಕಿಸ್ತಾನ ತಂಡ ಒಂದು ಹಂತದಲ್ಲಿ 155 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆ ಬಳಿಕ ಭಾರತದ ಬೌಲರ್‌ಗಳ ದಾಳಿಗೆ ಪಾಕಿಸ್ತಾನ ಬ್ಯಾಟರ್‌ಗಳು ನಿರುತ್ತರರಾದರು. ನಾಯಕ ಬಾಬರ್ ಅಜಂ 50 ರನ್ ಮತ್ತು ಮೊಹಮ್ಮದ್ ರಿಜ್ವಾನ್ 49 ರನ್ ಹೊರತುಪಡಿಸಿ ಉಳಿದವರಾರು ಪ್ರತಿರೋಧ ಒಡ್ಡಲಿಲ್ಲ.
ನಂತರದ 36 ರನ್‌ಗಳಿಗೆ ಉಳಿದ 8 ವಿಕೆಟ್ ಕಳೆದುಕೊಂಡಿತು ಎಂದು ಹರೀಮ್ ಶಾ ಹೇಳಿದ್ದು, ಇದಕ್ಕೆ ಬ್ಲ್ಯಾಕ್ ಮ್ಯಾಜಿಕ್ ಮಾಡಿರುವುದೇ ಕಾರಣ ಎಂದು ಆರೋಪಿಸಿದ್ದಾಳೆ.
ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯದ ಹಿಂದೆ ಭಾರತೀಯ ಬೌಲರ್‌ಗಳ ಕೈಚಳಕ ಮತ್ತು ಅತ್ಯುತ್ತಮ ಪ್ರದರ್ಶನವನ್ನು ಹರೀಮ್ ಶಾ ಒಪ್ಪಿಕೊಂಡಿಲ್ಲ. ಇದಕ್ಕೆ ಮಾಟ-ಮಂತ್ರದ ಬಣ್ಣ ಬಳಿದಿದ್ದಾಳೆ.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 86 ರನ್ ಮತ್ತು ಶ್ರೇಯಸ್ ಅಯ್ಯರ್ 53 ರನ್ ಅವರ ಅತ್ಯುತ್ತಮ ಇನ್ನಿಂಗ್ಸ್ ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟಿತು.
ಭಾರತ ತಂಡ ಇದುವರೆಗೆ ಆಡಿದ ಎಲ್ಲಾ 3 ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದು, ಒಂದು ಸೋತಿರುವ ಪಾಕಿಸ್ತಾನ ತಂಡ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಭಾರತ ತನ್ನ ಮುಂದಿನ ಪಂದ್ಯವನ್ನು ಗುರುವಾರ, ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದ್ದರೆ, ಅಕ್ಟೋಬರ್ 20ರ ಶುಕ್ರವಾರದಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.