ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ಸುದೀರ್ಘ ಕಾಲ ನೆನಪಿಟ್ಟುಕೊಳ್ಳುವಂತಾ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಭಾರತ ಪಾಕಿಸ್ತಾನ ತಂಡದ ವಿರುದ್ಧ ಅಮೋಘ 228 ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಪಂದ್ಯಕ್ಕೆ ಕೊಡುಗೆ ನೀಡಿದ ವಿಶೇಷ ವ್ಯಕ್ತಿಗಳನ್ನು ಸ್ಮರಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಈ ಪಂದ್ಯಕ್ಕೆ ಮಳೆ ನೀಡಿದ ತೊಂದರೆ ಅಷ್ಟಿಷ್ಟಲ್ಲ. ಭಾನುವಾರ ಆರಂಭವಾಗಿದ್ದ ಈ ಪಂದ್ಯ ಮಳೆಯ ಕಾರಣದಿಂದಾಗಿ ಮೀಸಲು ದಿನವಾದ ಸೋಮವಾರಕ್ಕೆ ಕಾಲಿಟ್ಟಿತ್ತು. ಈ ಎರಡು ದಿನಗಳ ಕಾಲ ಕೂಡ ಪಂದ್ಯ ನಡೆಯಲು ಅವಿರತವಾಗಿ ಶ್ರಮವಹಿಸಿದ್ದು ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿಗಳು.

ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿಗಳ ಶ್ರಮವನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಣ್ಣಾರೆ ಕಂಡರು. ಹೀಗಾಗಿ ಅವರ ಶ್ರಮವನ್ನು ಕೊಂಡಾಡಿದ್ದಾರೆ. ಅಲ್ಲದೆ ಪಂದ್ಯ ನಡೆಯುವಂತಾಗಲೂ ಅವರ ಈ ಶ್ರಮವೇ ಕಾರಣ ಎನ್ನುವುದನ್ನು ಉಲ್ಲೇಖಿಸಿದ್ದು ಧನ್ಯವಾದ ಹೇಳಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ಸತಿ ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ "ಈ ಪಂದ್ಯ ನಡೆಯಲು ಸಾಧ್ಯವಾಗುವಂತೆ ಮಾಡಿದ ಎಲ್ಲಾ ಗೌಂಡ್ಸ್‌ಮನ್‌ಗಳಿಗೂ ದೊಡ್ಡ ಧ್ವನಿಯಿಂದ ಧನ್ಯವಾದ ಹೇಳುತ್ತಿದ್ದೇವೆ. ಅವರು ಮಾಡಿರುವುದು ಅದ್ಭುತವಾದ ಕಾರ್ಯ" ಎಂದಿದ್ದಾರೆ ವಿರಾಟ್ ಕೊಹ್ಲಿ.
ಇನ್ನು ನಾಯಕ ರೋಹಿತ್ ಶರ್ಮಾ ಕೂಡ ಮಾತನಾಡುತ್ತಾ ತಂಡದ ಆಟಗಾರರಿಗೆ ಪಂದ್ಯದಲ್ಲಿ ಆಡುವ ಮೂಲಕ ಮೈದಾನದಲ್ಲಿ ಸಮಯವನ್ನು ಕಳೆಯುವುದು ಎಷ್ಟು ಮುಖ್ಯವಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ. "ನಮಗೆ ಇಲ್ಲಿ ಆಡಲು ಅವಕಾಶ ದೊರೆತಿದ್ದಕ್ಕೆ ಬಹಳ ಸಂತಸವಾಗುತ್ತಿದೆ. ಸಾಕಷ್ಟು ಆಟಗಾರರಿಗೆ ಆಟದ ಸಮಯವೇ ದೊರೆತಿರಲಿಲ್ಲ. ಇದಕ್ಕಾಗಿ ಅದ್ಭುತವಾದ ಬೆಂಬಲ ನೀಡಿದ್ದು ಮೈದಾನದ ಸಿಬ್ಬಂದಿಗಳು. ಇಲ್ಲಿ ಆಗಮಿಸಿ ಮೈದಾನವನ್ನು ರಕ್ಷಣೆ ಮಾಡುವುದು ಹಾಗೂ ಪಂದ್ಯಕ್ಕೆ ಸಿದ್ಧಪಡಿಸುವುದು ಎಚ್ಚು ಕಞ್ಟ ಎನ್ನುವುದು ನನಗೆ ತಿಳಿದಿದೆ. ಇಡೀ ತಂಡವಾಗಿ ನಾವು ಅವರಿಗೆ ಧನ್ಯವಾದ ತಿಳಿಸುತ್ತೇವೆ" ಎಂದಿದ್ದಾರೆ ರೋಹಿತ್ ಶರ್ಮಾ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಶತಕದ ಜೊತೆಯಾಟ ನೀಡುವ ಮೂಲಕ ಅಬ್ಬರಿಸಿದ ನಂತರ ಜೊತೆಯಾದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅಮೋಘ ದ್ವಿಶತಕದ ಜೊತೆಯಾಟ ನೀಡಿದರು. ಇಬ್ಬರು ಆಟಗಾರರು ಕೂಡ ಅಜೇಯ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ ಎರಡು ವಿಕೆಟ್ ಕಳೆದುಕೊಂಡು ಬರೊಬ್ಬರಿ 356 ರನ್‌ಗಳನ್ನು ಕಲೆಹಾಕಿತ್ತು.
ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನಕ್ಕೆ ಕಂಗಾಲಾದರು. ವೇಗಿ ಜಸ್ಪ್ರೀತ್ ಬೂಮ್ರಾ ಅವರಿಂದ ಆರಂಭವಾದ ಪಾಕ್ ದಾಂಡಿಗರನ್ನು ಬೇಟೆಯಾಡುವ ಪೈಪೋಟಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದು ಸ್ಪಿನ್ನರ್ ಕುಲ್‌ದೀಪ್ ಯಾದವ್. ಪಾಕಿಸ್ತಾನದ ಐವರು ಬ್ಯಾಟರ್‌ಗಳನ್ನು ಔಟ್ ಮಾಡುವ ಮೂಲಕ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಕೂಡ ಇಲ್ಲಿ ತಲಾ ಒಂದೊಂದು ವಿಕೆಟ್ ಸಂಪಾದಿಸಿದರು. ಈ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 128 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಗಿದೆ.