2023ರ ಐಸಿಸಿ ಏಕದಿನ ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ 7 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿತು.
ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗೆಲುವಿನ ನಂತರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 8-0 ಅಂತರದಿಂದ ಭಾರತದ ಪ್ರಾಬಲ್ಯ ಮುಂದುವರೆದಿದೆ.

ಪಂದ್ಯದ ನಂತರ ಪಾಕಿಸ್ತಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಅವರು ಇದು ಏಕದಿನ ವಿಶ್ವಕಪ್ ಪಂದ್ಯದಂತೆ ಇರಲಿಲ್ಲ ಎಂಬ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಭಾರತೀಯ ಬೌಲಿಂಗ್ ದಾಳಿಯ ವಿರುದ್ಧ 50 ಓವರ್‌ಗಳನ್ನು ಸಂಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ. 42.5 ಓವರ್‌ಗಳಲ್ಲಿ ಕೇವಲ 191 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ಸುಲಭ ಗುರಿ ಬೆನ್ನತ್ತಿದ ಭಾರತ ಆಕ್ರಮಣಕಾರಿ ಆಟ ಆರಂಭಿಸಿ ಕೇವಲ 30.3 ಓವರ್‌ಗಳಲ್ಲಿ ಗುರಿ ತಲುಪಿತು.
ಪಂದ್ಯದ ನಂತರ ಮಾತನಾಡಿದ ಪಾಕಿಸ್ತಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ಈ ವಿಶ್ವಕಪ್ ಟೂರ್ನಿ ಭಾರತದ ಪರ ಪಕ್ಷಪಾತದಿಂದ ಕೂಡಿತ್ತು ಮತ್ತು ಆಟವು ತಟಸ್ಥವಾಗಿರಲಿಲ್ಲ ಎಂದು ಹೇಳಿದರು.

"ನೋಡಿ, ನಾನು ಕಠಿಣವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುವುದಾದರೆ, ಇಂದು ರಾತ್ರಿ ಐಸಿಸಿ ವಿಶ್ವಕಪ್ ಪಂದ್ಯಾವಳಿಯಂತೆ ತೋರಲಿಲ್ಲ. ಇದು ದ್ವಿಪಕ್ಷೀಯ ಸರಣಿಯಂತೆ ತೋರುತ್ತಿತ್ತು, ಇದು ಬಿಸಿಸಿಐ ಕಾರ್ಯಕ್ರಮದಂತೆ ತೋರುತ್ತಿತ್ತು," ಎಂದರು.
"ಪಂದ್ಯದ ವೇಳೆ ದಿಲ್ ದಿಲ್ ಪಾಕಿಸ್ತಾನ್... ಮೈಕ್ರೊಫೋನ್‌ಗಳ ಮೂಲಕ ಆಗಾಗ್ಗೆ ಬರುತ್ತಿರುವುದನ್ನು ನಾನು ಸರಿಯಾಗಿ ಕೇಳಲಿಲ್ಲ," ಎಂದು ಮಿಕ್ಕಿ ಆರ್ಥರ್ ತಿಳಿಸಿದರು.
"ಆದ್ದರಿಂದ, ಅದು ಒಂದು ಪಾತ್ರ ವಹಿಸುತ್ತದೆ. ಆದರೆ ನಾನು ಅದನ್ನು ಕ್ಷಮಿಸಲು ಹೋಗುವುದಿಲ್ಲ. ಏಕೆಂದರೆ ನಮಗೆ, ಆಟದ ಮೇಲೆ ಮಾತ್ರ ಗಮನವಿರಬೇಕು. ಅದು ಮುಂದಿನ ಚೆಂಡಿನ ಬಗ್ಗೆ ಮತ್ತು ನಾವು ಹೇಗೆ ಹೋರಾಡಲಿದ್ದೇವೆ ಎಂಬುದರ ಬಗ್ಗೆ. ಭಾರತೀಯ ಆಟಗಾರರು ಇಂದು ರಾತ್ರಿ ಪೂರ್ಣ ಮೇಲುಗೈ ಸಾಧಿಸಿದರು," ಎಂದು ಮಿಕ್ಕಿ ಆರ್ಥರ್ ಅಭಿಪ್ರಾಯಪಟ್ಟರು.
ಈ ಕುರಿತು ಪಾಕಿಸ್ತಾನ ತಂಡದ ನಿರ್ದೇಶಕನಿಗೆ ತಿರುಗೇಟು ನೀಡಲು ವಾಸಿಮ್ ಜಾಫರ್ ಅವರು ಎಕ್ಸ್ (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡದ ತವರು ಫಲಿತಾಂಶಗಳ ಬಗ್ಗೆ ಪ್ರಶ್ನಿಸಿದರು.
"ಪಾಕಿಸ್ತಾನವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ತವರಿನ ಸರಣಿಯನ್ನು ಏಕೆ ಸೋತಿದೆ ಎಂದು ನಾನು ಆಶ್ಚರ್ಯ ಪಡುತ್ತೇನೆ. ಮಿಕ್ಕಿ ಆರ್ಥರ್‌ಗೆ ಧನ್ಯವಾದಗಳು, ಸ್ಟೇಡಿಯಂನಲ್ಲಿ ಹೆಚ್ಚಿನ ಡಿಜೆ 'ದಿಲ್ ದಿಲ್ ಪಾಕಿಸ್ತಾನ್' ಸೌಂಡ್ ಅನ್ನು ಕೇಳಲಿಲ್ಲ ಎಂದು ಹೇಳಿದ್ದಕ್ಕೆ. ಆದರೆ, ಕ್ರೀಡಾಂಗಣದಲ್ಲಿ ಬಹುತೇಕ ಅಭಿಮಾನಿಗಳು ನೀಲಿ ಜೆರ್ಸಿಯನ್ನು ಧರಿಸಿದ್ದರು," ಎಂದು ವಾಸಿಂ ಜಾಫರ್ ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ತಮ್ಮ ತಮ್ಮ ಟೆಸ್ಟ್ ಸರಣಿಯನ್ನು ಪಾಕಿಸ್ತಾನ ನೆಲದಲ್ಲಿ ಗೆದ್ದವು. ಆಸ್ಟ್ರೇಲಿಯ 3 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡರೆ, ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ 3-0 ಅಂತರದಿಂದ ಪಾಕಿಸ್ತಾನ ತಂಡವನ್ನು ಮಣಿಸಿತು.
ವಾಸಿಮ್ ಜಾಫರ್ ಅವರ ಹೇಳಿಕೆಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ಕೂಡ ಬೆಂಬಲ ನೀಡಿದರು. ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ ಮತ್ತು ಮಿಕ್ಕಿ ಆರ್ಥರ್ ಅವರ ಕಾಮೆಂಟ್‌ಗಳನ್ನು ವಿಲಕ್ಷಣ ಎಂದು ಕರೆದರು.
"ಮಿಕ್ಕಿ ಆರ್ಥರ್ ಹೇಳಿಕೆಗೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಕುಲದೀಪ್ ಯಾದವ್ ವಿರುದ್ಧ ನಿಮ್ಮ ಯೋಜನೆಗಳು ಏನೆಂದು ನಮಗೆ ತಿಳಿಸಿ ಎಂದು ನಾವು ಕೇಳಲು ಬಯಸುತ್ತೇವೆ. ಇದು ಕೇವಲ ಸಣ್ಣ ವಿಷಯವಲ್ಲ. ನೀವು ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ? ದುರದೃಷ್ಟವಶಾತ್ ನಿಮಗೆ ಸಾಧ್ಯವಿಲ್ಲ," ಎಂದು ವಾಸಿಂ ಅಕ್ರಮ್ ಪಂದ್ಯದ ನಂತರ ಹೇಳಿದರು.
"ಗೆಲುವು ಮತ್ತು ಸೋಲು ಆಟದ ಒಂದು ಭಾಗವಾಗಿದೆ. ಆದರೆ ನಾವು ಏಕೆ ಸೋತಿದ್ದೇವೆ ಮತ್ತು ಏನು ತಪ್ಪಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ," ಎಂದು ವಾಸಿಂ ಅಕ್ರಮ್ ತಿಳಿಸಿದರು.