IND vs SA ಪ್ರಥಮ ಟಿ20: ಅಬ್ಬರಿಸಿದ ಇಶಾನ್ ಕಿಶನ್; ಹರಿಣಗಳಿಗೆ ಬೃಹತ್ ಗುರಿ ನೀಡಿದ ಭಾರತ

ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ಇತ್ತಂಡಗಳ ನಡುವಿನ ಈ ಸರಣಿ ಆರಂಭವಾಗಿದ್ದು ಇಂದು ( ಜೂನ್ 9 ) ಪ್ರಥಮ ಟಿ ಟ್ವೆಂಟಿ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗುತ್ತಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಫೀಲ್ಡಿಂಗ್ ಆಯ್ದುಕೊಂಡು ಆತಿಥೇಯ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಇತ್ತ ಹೆಚ್ಚು ಅನುಭವಿ ಆಟಗಾರರನ್ನು ಹೊಂದಿಲ್ಲದ ಟೀಮ್ ಇಂಡಿಯಾ ಸರಣಿಯಲ್ಲಿ ತಂಡವನ್ನು ಮುನ್ನಡೆಸಬೇಕಿದ್ದ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಹೊರ ಬಿದ್ದ ನಂತರ ರಿಷಭ್ ಪಂತ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದು, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಪವರ್ ಪ್ಲೇಯನ್ನು ಸಂಪೂರ್ಣವಾಗಿ ಆಡಿದ ಈ ಜೋಡಿ 57 ರನ್‌ಗಳ ಜತೆಯಾಟವಾಡಿತು. ರುತುರಾಜ್ ಗಾಯಕ್ವಾಡ್ 23 ರನ್ ಗಳಿಸಿ ಔಟ್ ಆದರೆ, ಇಶಾನ್ ಕಿಶನ್ 48 ಎಸೆತಗಳಲ್ಲಿ 76 ರನ್ ಚಚ್ಚಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 27 ಎಸೆತಗಳಲ್ಲಿ 36 ರನ್ ಕಲೆಹಾಕಿದರೆ, ನಾಯಕ ರಿಷಭ್ ಪಂತ್ 16 ಎಸೆತಗಳಲ್ಲಿ 29 ರನ್ ಬಾರಿಸಿದರು ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ ಅಜೇಯ 31 ರನ್ ಮತ್ತು ದಿನೇಶ್ ಕಾರ್ತಿಕ್ ಅಜೇಯ 1 ರನ್ ಕಲೆಹಾಕಿದರು.

ಅಬ್ಬರಿಸಿದ ಇಶಾನ್ ಕಿಶನ್
ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಯಾವ ರೀತಿಯ ಆರಂಭವನ್ನು ಪಡೆದುಕೊಳ್ಳಲಿದೆ ಎಂಬ ಆತಂಕ ಹಲವಾರು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಅರ್ಧ ಶತಕದ ಜತೆಯಾಟವಾಡಿದ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಅದರಲ್ಲಿಯೂ ಅರ್ಧಶತಕ ಸಿಡಿಸಿ ಅಬ್ಬರಿಸಿದ ಇಶಾನ್ ಕಿಶನ್ 48 ಎಸೆತಗಳಲ್ಲಿ 76 ರನ್ ಬಾರಿಸಿದರು. ಇಶಾನ್ ಕಿಶನ್ 11 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದರು.

ನಾಯಕ - ಉಪ ನಾಯಕನ ಜುಗಲ್ ಬಂದಿ
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಶ್ರೇಯಸ್ ಅಯ್ಯರ್ ಔಟ್ ಆದ ಬಳಿಕ ನಾಲ್ಕನೇ ವಿಕೆಟ್‌ಗೆ ಜತೆಯಾದ ನಾಯಕ ರಿಷಭ್ ಪಂತ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 46 ರನ್‌ಗಳ ಅಬ್ಬರದ ಜೊತೆಯಾಟವನ್ನು ಆಡಿದರು. 16.1 ಓವರ್‌ಗಳಲ್ಲಿ 156ರಲ್ಲಿದ್ದ ತಂಡದ ಮೊತ್ತ 19.1 ಓವರ್‌ಗಳಲ್ಲಿ 202 ರನ್ ಮುಟ್ಟುವಲ್ಲಿ ಈ ಇಬ್ಬರು ಪ್ರಮುಖ ಪಾತ್ರ ವಹಿಸಿದರು. ರಿಷಭ್ ಪಂತ್ 2 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 16 ಎಸೆತಗಳಲ್ಲಿ 29 ರನ್ ಕಲೆಹಾಕಿದರೆ, 3 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ ಅಜೇಯ 31 ರನ್ ಚಚ್ಚಿದರು.

ಮುಗ್ಗರಿಸಿದ ಹರಿಣಗಳ ಬೌಲಿಂಗ್ ಪಡೆ
ಇನ್ನು ಟೀಮ್ ಇಂಡಿಯಾದ ಆಟಗಾರರನ್ನು ಕಟ್ಟಿಹಾಕುವಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ವಿಫಲವಾದರು. ಕೇಶವ್ ಮಹರಾಜ್, ಅನ್ರಿಚ್ ನಾರ್ಕಿಯಾ, ವೇಯ್ನ್ ಪಾರ್ನೆಲ್ ಮತ್ತು ಪ್ರಿಟೋರಿಯಸ್ ತಲಾ ಒಂದೊಂದು ವಿಕೆಟ್ ಪಡೆದರೂ ಸಹ ಬೃಹತ್ ರನ್ ಬಿಟ್ಟುಕೊಟ್ಟು ದುಬಾರಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications