Ind vs SA: 2ನೇ ಟಿ20 ಪಂದ್ಯದಲ್ಲಿ ಭಾರತದ ಆಡುವ 11ರ ಬಳಗ ಹೇಗಿರಲಿದೆ? ಯಾರು ಇನ್? ಯಾರು ಔಟ್?

ಭಾನುವಾರ (ಜೂನ್ 12) ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ಕಮ್ ಬ್ಯಾಕ್ ಮಾಡುವ ಉತ್ಸಾಹದಲ್ಲಿ ಭಾರತ ತಂಡವಿದೆ. ಈ ಮೂಲಕ ಸಾಂದರ್ಭಿಕ ನಾಯಕ ರಿಷಭ್ ಪಂತ್ ಅವರು ಭಾರತ ಬೌಲರ್‌ಗಳಿಂದ ಸುಧಾರಿತ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.
ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಜೋಡಿ ಅತ್ಯಂತ ನಿರಾಯಾಸವಾಗಿ 212 ರನ್ ಬೃಹತ್ ಗುರಿಯನ್ನು ತಲುಪಿದರು ಮತ್ತು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಆದರೆ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ ರಿಷಭ್ ಪಂತ್‌ಗೆ ಮಾತ್ರ ಕಹಿ ಅನುಭವವಾಗಿದೆ.

ಚೊಚ್ಚಲ ಟಿ20 ನಾಯಕತ್ವದಲ್ಲಿ ಸೋತ ಎರಡನೇ ಭಾರತೀಯ
ಮೊದಲ ಪಂದ್ಯದಲ್ಲಿ ಭಾರತದ ಸೋಲಿನಿಂದ ರಿಷಭ್ ಪಂತ್ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿ ನಂತರ ತನ್ನ ಚೊಚ್ಚಲ ಟಿ20 ನಾಯಕತ್ವದಲ್ಲಿ ಸೋತ ಎರಡನೇ ಭಾರತೀಯ ಎಂಬ ಕುಖ್ಯಾತಿಗೆ ಒಳಗಾದರು. ಆರಂಭಿಕ ಪಂದ್ಯದ ಸೋಲಿನಿಂದ ಭಾರತ ಕಳೆದ ಪಂದ್ಯದ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಚೊಚ್ಚಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಲು ಕನಸು ಕಾಣುತ್ತಿರುವ ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್ ಅವರು ಮತ್ತೊಮ್ಮೆ ಬೆಂಚ್ ಕಾಯಿಸಬೇಕಾಗಬಹುದು.
ಬ್ಯಾಟಿಂಗ್‌ನಲ್ಲಿ ಭಾರತವು ಉತ್ತಮ ಮೊತ್ತ ಗಳಿಸಿದ ಹೊರತಾಗಿಯೂ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಬೇಕಾಯಿತು. ಎರಡನೇ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಬೌಲರ್‌ಗಳ ಮೇಲೆ ಮತ್ತು ನಾಯಕ ರಿಷಭ್ ಪಂತ್ ಬೌಲರ್‌ಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಲುಂಗಿ ಎನ್‌ಗಿಡಿ ಕಣಕ್ಕಿಳಿಯುವ ಸಾಧ್ಯತೆ
ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರ ತಂಡಕ್ಕೆ ಎರಡನೇ ಪಂದ್ಯದಲ್ಲಿ ತಮ್ಮ ಆವೇಗವನ್ನು ಇನ್ನಷ್ಟು ಉತ್ತಮಗೊಳಿಸಲು ಬಯಸುವುದರಿಂದ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಮೊದಲ ಪಂದ್ಯದಲ್ಲಿ ಕೇಶವ್ ಮಹಾರಾಜ್ 43 ರನ್ ಬಿಟ್ಟುಕೊಟ್ಟಿದ್ದರಿಂದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಕಟಕ್‌ನ ಬಾರಾಬತಿಯಲ್ಲಿರುವ ಪಿಚ್ ಸಾಂಪ್ರದಾಯಿಕವಾಗಿ ನಿಧಾನಗತಿಯಾಗಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸಿಸುವ ಸಾಧ್ಯತೆ ಇದೆ.

ಭಾರತ, ದಕ್ಷಿಣ ಆಫ್ರಿಕಾ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್-ಕೀಪರ್), ಟೆಂಬಾ ಬವುಮಾ (ನಾಯಕ), ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ.

ಕಟಕ್‌ನಲ್ಲಿ ಮಳೆ ಸಾಧ್ಯತೆ
ಭಾನುವಾರ ಕಟಕ್‌ನ ಬಾರಾಬತಿಯಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯದ ಮೊದಲು, ಭುವನೇಶ್ವರದಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರ (RMC) ಸಂಜೆಯ ಸಮಯದಲ್ಲಿ ಒಂದು ಅಥವಾ ಎರಡು ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಮಳೆಯಯಾಗುವ ಅವಕಾಶ 50:50 ಇದೆ. ಭಾನುವಾರ ಸಂಜೆ ಕಟಕ್‌ನಲ್ಲಿ ಮಳೆಯಾಗುವುದಿಲ್ಲ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಣ್ಣ ಪ್ರಮಾಣದ ಮಳೆಯಾಗಬಹುದು ಆದರೆ ಯಾವುದೇ ದೊಡ್ಡ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಆರ್‌ಎಂಸಿ ಭುವನೇಶ್ವರ್ ನಿರ್ದೇಶಕ ಎಚ್‌ಆರ್ ಬಿಸ್ವಾಸ್ ಪಿಟಿಐಗೆ ತಿಳಿಸಿದ್ದಾರೆ.
"ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಮೂರ್ನಾಲ್ಕು ಗಂಟೆ ಮುಂಚಿತವಾಗಿ ಗೊತ್ತಾಗಲಿದೆ. ಆದಾಗ್ಯೂ, ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಇನ್ನು ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ನಡೆಸಲಾಗಿದೆ,'' ಎಂದು ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications