ಕನ್ನಡಿಗರ ಜೊತೆಯಾಟವೇ ನಿರ್ಣಾಯಕ: ದ. ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಗೆಲ್ಲಲು ಕಾರಣವಾದ 4 ಅಂಶಗಳು

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಭರ್ಜರಿ 113 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ಭದ್ರಕೋಟೆ ಎನಿಸಿರುವ ಸೆಂಚೂರಿಯನ್‌ನಲ್ಲಿ ಭಾರತ ಪ್ರಪ್ರಥಮ ಗೆಲುವು ಸಾಧಿಸಿದೆ. 1992ರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುತ್ತಿರುವ ಭಾರತ ತಂಡ ದಕ್ಷಣ ಆಫ್ರಿಕಾ ನೆಲದಲ್ಲಿ ಈವರೆಗೆ ಸಾಧಿಸಿದ ಕೇವಲ ನಾಲ್ಕನೇ ಗೆಲುವು ಇದಾಗಿದೆ. ಈ ಮೂಲಕ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವ ಕನಸಿಗೆ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.
ಸೆಂಚೂರಿಯನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲ ದಿನ ಅದ್ಭುತ ಆಟವನ್ನು ಪ್ರದರ್ಶಿಸಿದ ಬಳಿಕ ಎರಡನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಯಿತು. ಹೀಗಾಗಿ ಪಂದ್ಯ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಕಡಿಮೆಯೆಂದೇ ಊಹಿಸಲಾಗಿತ್ತು. ಅಲ್ಲದೆ ಪಂದ್ಯಕ್ಕೆ ಮಳೆ ಅಂತಿಮ ದಿನವೂ ಅಡ್ಡಿಯಾಗುವ ಅತಂಕವನ್ನು ಮೂಡಿಸಿತ್ತು. ಆದರೆ ಟೀಮ್ ಇಂಡಿಯಾದ ಬೌಲರ್‌ಗಳು ನೀಡಿದ ಪ್ರದರ್ಶನದಿಂದ ಪ್ರವಾಸಿ ತಂಡ ಪಂದ್ಯವನ್ನು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಅಂತಿಮ ದಿನದಲ್ಲಿ ವಾತಾವರಣವೂ ಭಾರತದ ಪರವಾಗಿ ಇದ್ದು ಮಳೆ ಅಡ್ಡಿಯಾಗದೇ ಸರಾಗವಾಗಿ ನಡೆಯಲು ಕಾರಣವಾಯಿತು. ಈ ಮೂಲಕ ಭಾರತ ಗೆಲುವು ಸಾಧಿಸಿದೆ.
ಈ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲ್ಲಲು ಕಾರಣವಾದ ಪ್ರಮುಖ ಅಂಶಗಳು ಯಾವುದು? ಈ ವರದಿಯಲ್ಲಿ ನೋಡೋಣ

ಆರಂಭಿಕ ಆಟಗಾರರ ಜೊತೆಯಾಟ
ಈ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಲು ಪ್ರಮುಖ ಕಾರಣವಾಗಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಸಾಧಿಸಿದ ಮುನ್ನಡೆ. ಇದಕ್ಕೆ ಪ್ರಮುಖ ಕಾರಣ ಮೊದಲ ದಿನ ಭಾರತೀಯ ಆರಂಭಿಕ ಆಟಗಾರರು ನೀಡಿದ ಅದ್ಭುತ ಪ್ರದರ್ಶನ. ಕನ್ನಡಿಗ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್‌ಗಳ ಪ್ರಮುಖ ಜೊತೆಯಾಟವನ್ನು ನೀಡಿದರು. ಈ ಜೊತೆಯಾಟದ ಕಾರಣದಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ರನ್‌ಗಳಿಸಲು ಕಾರಣವಾಯಿತು. ಇದು ತಂಡ ದೊಡ್ಡ ಮುನ್ನಡೆ ಸಾಧಿಸಲೂ ಕಾರಣವಾಯಿತಲ್ಲದೆ ಪಂದ್ಯದುದ್ದಕ್ಕೂ ತಂಡದ ಮೇಲುಗೈಗೆ ಕಾರಣವಾಯಿತು.

ಕೆಎಲ್ ರಾಹುಲ್ ಶತಕ
ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಏಳನೇ ಶತಕವನ್ನು ಸಿಡಿಸಿದರು. ಮೊದಲ ದಿನದಾಟದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಭರ್ಜರಿ 123 ರನ್‌ಗಳ ಕೊಡುಗೆ ನೀಡಿದರು. ಮೊದಲ ವಿಕೆಟ್‌ಗೆ ಮಯಾಂಕ್ ಅಗರ್ವಾಲ್ ಜೊತೆಗೆ ಶತಕದ ಜೊತೆಯಾಟವನ್ನು ನೀಡಿದ ನಂತರ 4ನೇ ವಿಕೆಟ್‌ಗೆ ಅಜಿಂಕ್ಯಾ ರಹಾನೆ ಜೊತೆಗೆ 79 ರನ್‌ಗಳ ಮತ್ತೊಂದು ಮಹತ್ವದ ಜೊತೆಯಾಟದಲ್ಲಿಯೂ ಭಾಗೊಯಾದರು. ಈ ಮೂಲಕ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣವಾದರು. ಕೆಎಲ್ ರಾಹುಲ್ ನೀಡಿದ ಈ ಪ್ರದರ್ಶನ ತಮಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ.

ಶಮಿ ಮಾರಕ ಸ್ಪೆಲ್
ಇನ್ನು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 327 ರನ್‌ಗಳನ್ನು ಗಳಿಸಿ ಆಲೌಟ್ ಆದ ಬಳಿಕ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ಗೆ ಇಳಿದಿತ್ತು. ಆದರೆ ಈ ಸಂದರ್ಭದಲ್ಲಿ ಭಾರತೀಯ ಬೌಲರ್‌ಗಳು ದಕ್ಷಿಣ ಆಫ್ರಿಕಾ ದಾಂಡಿಗರು ಕ್ರೀಸ್‌ನಲ್ಲಿ ನೆಲೆಯೂರಲು ಯಾವುದೇ ಅವಕಾಶವನ್ನು ನೀಡಲಿಲ್ಲ. ಅದರಲ್ಲೂ ಟೀಮ್ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ದಾಂಡಿಗರಿಗೆ ಕಂಟಕವಾದರು. ಇನ್ನಿಂಗ್ಸ್‌ನಲ್ಲಿ ಶಮಿ ಭರ್ಜರಿ 5 ವಿಕೆಟ್ ಕಿತ್ತು ಆತಿಥೇಯರಿಗೆ ಆಘಾತ ನೀಡಿದರು. ಈ ಮೂಲಕ ಭಾರತದ ಮೇಲುಗೈಗೆ ಕಾರಣವಾದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ 197 ರನ್‌ಗಳಿಗೆ ಆಲೌಟ್ ಆಯಿತು. ಈ ಪ್ರದರ್ಶನ ಕೂಡ ತಂಡ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ.

2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳ ಸಂಘಟಿತ ಹೋರಾಟ
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿಗೆ ಕಾರಣವಾದ ಮತ್ತೊಂದು ಪ್ರಮುಖ ಸಂಗತಿಯೆಂದರೆ ಟೀಮ್ ಇಂಡಿಯಾದ ಬೌಲರ್‌ಗಳ ಸಂಘಟಿತ ಹೋರಾಟ. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಎದುರಾಳಿಗೆ ಗೆಲ್ಲು 305 ರನ್‌ಗಳ ಗುರಿಯನ್ನು ನೀಡಿತ್ತು. ಈ ಮೊತ್ತವನ್ನು ರಕ್ಷಿಸಿಕೊಳ್ಳುವ ಜವಾಬ್ಧಾರಿಯನ್ನು ಭಾರತೀಯ ತಂಡದ ಬೌಲರ್‌ಗಳು ಅದ್ಭುತವಾಗಿ ನಿರ್ವಹಿಸಿದರು. ದಕ್ಷಿಣ ಆಪ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಹೊರತುಪಡಿಸಿ ಉಳಿದ ಯಾವ ಆಟಗಾರ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಭಾರತೀಯ ಬೌಲರ್‌ಗಳು ಅವಕಾಶವನ್ನೇ ನೀಡಲಿಲ್ಲ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಆರ್ ಅಶ್ವಿನ್ ಸೇರಿ ದಕ್ಷಿಣ ಆಫ್ರಿಕಾ ತಂಡವನ್ನು 191 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಂದ್ಯವನ್ನು ಭಾರತ 113 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಭಾರತದ ಪರವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬೂಮ್ರಾ ಹಾಗೂ ಶಮಿ ತಲಾ 3 ವಿಕೆಟ್ ಪಡೆದರೆ ಸಿರಾಜ್ ಹಾಗೂ ಆರ್ ಅಶ್ವಿನ್ ತಲಾ 2 ವಿಕೆಟ್ ಕಬಳಿಸಿದರು.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ,ಮೊಹಮ್ಮದ್ ಸಿರಾಜ್
ಬೆಂಚ್: ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಪ್ರಿಯಾಂಕ್ ಪಾಂಚಾಲ್, ಹನುಮ ವಿಹಾರಿ, ಇಶಾಂತ್ ಶರ್ಮಾ
ದಕ್ಷಿಣ ಆಫ್ರಿಲಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ
ಬೆಂಚ್: ಡುವಾನ್ ಒಲಿವಿಯರ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಜಾರ್ಜ್ ಲಿಂಡೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications