ಹಾರ್ದಿಕ್ ಪಾಂಡ್ಯಗೆ ಇಂಥಾ ನಡೆಗಳೇ ಮುಳ್ಳು!: ಮತ್ತೆ ಅನುಭವಿ ಆಟಗಾರನಿಗೆ ಅಗೌರವ ತೋರಿದ್ರಾ ಆಲ್‌ರೌಂಡರ್?

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಆದರೆ ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅದ್ಭುತವಾಗಿತ್ತು. ಇಶಾನ್ ಕಿಶನ್ ಅವರ ಬ್ಯಾಟ್‌ನಿಂದ ಬಂದ ಸ್ಪೋಟಕ ಪ್ರದರ್ಶನದಿಂದಾಗಿ ಭಾರತ ಬೃಹತ್ ಮೊತ್ತವನ್ನು ಗಳಿಸಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ತಂಡದ ಉಪ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 12 ಎಸೆತಗಳಲ್ಲಿ 31 ರನ್ ಬಾರಿಸಿ ಮಿಂಚಿದ್ದಾರೆ.
ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನ ತಮ್ಮ ಫಾರ್ಮ್‌ಅನ್ನು ದೇಶೀಯ ತಂಡದ ಪರವಾಗಿಯೂ ಮುಂದುವರಿಸಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅವರ ವರ್ತನೆ ಮತ್ತೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಹಿರಿಯ ಆಟಗಾರರಿಗೆ ನೀಡಬೇಕಾದ ಗೌರವ ಈ ಆಟಗಾರನಿಂದ ದೊರೆಯುತ್ತಿಲ್ಲ ಎಂಬುದು ಅಭಿಮಾನಿಗಳ ಈ ಆಕ್ಷೇಪಕ್ಕೆ ಕಾರಣವಾಗಿದೆ.
ಹಾಗಾದರೆ ಅಂಥಾದ್ದು ಏನಾಯಿತು? ಹಾರ್ದಿಕ್ ಪಾಂಡ್ಯ ಯಾವ ಆಟಗಾರನಿಗೆ ಅಗೌರವ ತೋರಿದ್ದಾರೆ? ಮುಂದೆ ಓದಿ..

ಮನೋಜ್ಞ ಹೊಡೆತಗಳ ಮೂಲಕ ರಂಚಿಸಿದ ಪಾಂಡ್ಯ
ಪಂದ್ಯದ 17ನೇ ಓವರ್ ನಲ್ಲಿ ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ಮನೋಜ್ಞ ಹೊಡೆತಗಳ ಮೂಲಕ ಭಾರತೀಯ ಅಭಿಮಾನಿಗಳನ್ನು ರಂಜಿಸಿದರು. ನಾಯಕ ರಿಷಭ್ ಪಂತ್ ಜೊತೆಗೂಡಿ ತಂಡದ ಮೊತ್ತದ ವೇಗವನ್ನು ಹೆಚ್ಚಿಸಿದರು. 18 ಹಾಗೂ 19ನೇ ಓವರ್‌ನಲ್ಲಿ ಬೌಂಡರಿ ಸಿಕ್ಸರ್‌ಗಳ ಸುರಿಮಳೆಗಗೈದರು ಹಾರ್ದಿಕ್ ಪಾಂಡ್ಯ. ಆದರೆ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ನಾಯಕ ಪಂತ್ ವಿಕೆಟ್ ಕಳೆದುಕೊಂಡರು. ಈ ಇಬ್ಬರು ಜೊತೆಯಾಟದಲ್ಲಿ 18 ಎಸೆತಗಳಲ್ಲಿ 46 ರನ್ ಹರಿದು ಬಂದಿತ್ತು. ಪಂತ್ ಔಟಾಗುತ್ತಿದ್ದಂತೆ ಫಿನಿಶರ್ ದಿನೇಶ್ ಕಾರ್ತಿಕ್ ಕ್ರೀಸ್‌ಗೆ ಆಗಮಿಸಿದರು.

ಒಂದು ರನ್‌ಗೆ ಓಡದೆ DKಯನ್ನು ವಾಪಾಸ್ ಕಳುಹಿಸಿದ ಪಾಂಡ್ಯ
ಎರಡನೇ ಎಸೆತ ಎದುರಿಸಿದ ದಿನೇಶ್ ಕಾರ್ತಿಕ್ ಯಾವುದೇ ರನ್ ಗಳಿಸಲಿಲ್ಲ. ಮೂರನೇ ಎಸೆತಕ್ಕೆ 1 ರನ್ ಗಳಿಸಿ ಸ್ಟ್ರೈಕ್ ಬದಲಾಯಿಸಿದರು. ಮುಂದಿನ ಎಸೆತದಲ್ಲಿ ಹಾರ್ದಿಕ್ ಸಿಕ್ಸರ್ ಬಾರಿಸಿದರು. ಆದರೆ ಐದನೇ ಎಸೆತದಲ್ಲಿ ಒಂಟಿ ರನ್ ಗಳಿಸುವ ಅವಕಾಶವಿತ್ತು. ಆದರೆ ಹಾರ್ದಿಕ್ ಪಾಂಡ್ಯ ರನ್ ಓಡಲು ಒಪ್ಪದೆ ಮತ್ತೊಂದು ತುದಿಯಲ್ಲಿದ್ದ ಅನುಭವಿ ಆಟಗಾರ ಫಿನಿಷರ್ ದಿನೇಶ್ ಕಾರ್ತಿಕ್ ಅವರನ್ನು ವಾಪಾಸ್ ಕಳುಹಿಸಿದರು.

ಅನುಭವಿಗೆ ಅಗೌರವ ತೋರಿದ ಪಾಂಡ್ಯ?
ಉತ್ತಮ ಫಿನಿಷರ್ ಎನಿಸಿಕೊಂಡಿದ್ದರೂ ಹಾರ್ದಿಕ್ ಪಾಂಡ್ಯ ಅವರ ಈ ವರ್ತನೆ ಅಭಿಮಾನಿಗಳಿಗೆ ಅತಿರೇಕ ಎನಿಸಿದೆ. ಈ ಮೂಲಕ ಅನುಭವಿ ಆಟಗಾರನಿಗೆ ಪಾಂಡ್ಯ ಅಗೌರವ ತೋರಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದೆ. ಕೆಲ ಅಭಿಮಾನಿಗಳು ಹಾರ್ದಿಕ್ ಪಾಂಡ್ ದಿನೇಶ್ ಕಾರ್ತಿಕ್ ಅವರನ್ನು 10ನೇ ಕ್ರಮಾಂಕದಲ್ಲಿ ಆಡುವ ಆಟಗಾರನಂತೆ ನಡೆಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಹಿರಿಯ ಆಟಗಾರನಿಗೆ ಹೇಗೆ ಗೌರವ ನೀಡಬೇಕೆಂದು ಪಾಂಡ್ಯಗೆ ಇನ್ನೂ ತಿಳಿದಿಲ್ಲ ಎಂಬ ಕಟು ಟೀಕೆಗಳು ವ್ಯಕ್ತವಾಗಿದೆ. ಅಷ್ಟಕ್ಕೂ ಅಂತಿಮ ಎಸೆತದಲ್ಲಿ ಕೇವಲ ಎರಡು ರನ್ ಮಾತ್ರವೇ ಗಳಿಸುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸುವಲ್ಲಿಯೂ ಪಾಂಡ್ಯ ವಿಫಲವಾಗಿದ್ದರು.

ಐಪಿಎಲ್‌ನಲ್ಲಿಯೂ ಟೀಕೆಗೊಳಗಾಗಿದ್ದ ಪಾಂಡ್ಯ
ಇತ್ತೀಚೆಗಷ್ಟೇ ಅಂತ್ಯವಾದ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ. ಆದರೆ ಲೀಗ್ ಹಂತದಲ್ಲಿ ಟೀಮ್ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಕ್ಯಾಚ್‌ವೊಂದನ್ನು ಕೈಚೆಲ್ಲಿದ್ದಾಗ ಹಾರ್ದಿಕ್ ಪಾಂಡ್ಯ ವರ್ತನೆ ಅಭಿಮಾನಿಗಳಿಗೆ ಆಘಾತ ಮುಡಿಸಿತ್ತು. ಹಿರಿಯ ಹಾಗೂ ಅನುಭವಿ ಆಟಗಾರನಾಗಿದ್ದರೂ ಪಾಂಡ್ಯ ಉಪಯೋಗಿಸಿದ ನಿಂದನಾತ್ಮಕ ಮಾತುಗಳಿಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಆದರೆ ಅದಾದ ಬಳಿಕ ಪಾಂಡ್ಯ ಟೂರ್ನಿಯುದ್ದಕ್ಕೂ ಎಲ್ಲೂ ನಡತೆಯಲ್ಲಿ ಎಡವಿರಲಿಲ್ಲ. ಇದೀಗ ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications