IND vs SA: ಕಂಟಕವಾದ ಕ್ಲಾಸೆನ್; 2ನೇ ಟಿ ಟ್ವೆಂಟಿಯನ್ನೂ ಸೋತು ಸಂಕಷ್ಟಕ್ಕೆ ಸಿಲುಕಿದ ಭಾರತ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯ ದ್ವಿತೀಯ ಪಂದ್ಯ ಇಂದು ಕಟಕ್ ನಗರದ ಬಾರಾಬತಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಆತಿಥೇಯ ಟೀಮ್ ಇಂಡಿಯಾ ವಿರುದ್ಧ 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಫೀಲ್ಡಿಂಗ್ ಆಯ್ದುಕೊಳ್ಳುವುದರ ಮೂಲಕ ಎದುರಾಳಿ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿ ಹರಿಣಗಳಿಗೆ 149 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತ್ತು.
ಅತ್ತ ಈ ಸಾಮಾನ್ಯ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ಟೆಂಬಾ ಬವುಮಾ 35 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರೆ, ರೀಜಾ ಹೆಂಡ್ರಿಕ್ಸ್ 4 ರನ್ ಕಲೆ ಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪ್ರೆಟೋರಿಯಸ್ 4 ರನ್ ಮತ್ತು ವಾನ್ ಡರ್ ಡಸನ್ 1 ರನ್, ವೇಯ್ನ್ ಪಾರ್ನೆಲ್ 1 ರನ್ ಕಲೆಹಾಕಿದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಚ್ ಕ್ಲಾಸೆನ್ 46 ಎಸೆತಗಳಲ್ಲಿ ಬರೋಬ್ಬರಿ 81 ರನ್ ಚಚ್ಚಿ ಮ್ಯಾಚ್ ವಿನ್ನರ್ ಆಗಿ ನಿಂತರು. ಅಂತಿಮವಾಗಿ ಡೇವಿಡ್ ಮಿಲ್ಲರ್ ಅಜೇಯ 20 ರನ್ ಕಲೆಹಾಕಿದರೆ, ಯಾವುದೇ ರನ್ ಕಲೆಹಾಕದ ಕಗಿಸೋ ರಬಾಡ ಅಜೇಯರಾಗಿ ಉಳಿದರು.

ಕಂಟಕವಾದ ಕ್ಲಾಸೆನ್
ಇನ್ನು ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮೊಣಕೈ ಗಾಯದ ಸಮಸ್ಯೆಗೆ ಒಳಗಾಗಿದ್ದ ಕಾರಣ ಇಂದಿನ ಪಂದ್ಯದಲ್ಲಿ ಡಿಕಾಕ್ ಬದಲಾಗಿ ಹೆನ್ರಿಚ್ ಕ್ಲಾಸೆನ್ ಕಣಕ್ಕಿಳಿದಿದ್ದರು. ತಂಡ 5.3 ಓವರ್‌ಗಳಲ್ಲಿ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ಕ್ಲಾಸೆನ್ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡವನ್ನು ಬಹುತೇಕ ಗೆಲುವಿನ ಸನಿಹಕ್ಕೆ ತಂದಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. 46 ಎಸೆತಗಳನ್ನು ಎದುರಿಸಿ 81 ರನ್ ಚಚ್ಚಿದ ಕ್ಲಾಸೆನ್ 7 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದರು.

ಭುವನೇಶ್ವರ್ ಕುಮಾರ್ ಶ್ರಮ ವ್ಯರ್ಥ
ಭಾರತದ ವೇಗಿ ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ 29 ರನ್‌ಗಳಿಗೆ ತನ್ನ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತೆ ಮಾಡಿದ್ದರು. ಪಂದ್ಯದಲ್ಲಿ ತನ್ನ ಪಾಲಿನ ಎಲ್ಲಾ 4 ಓವರ್ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಕೇವಲ 13 ರನ್ ನೀಡಿ 4 ವಿಕೆಟ್ ಪಡೆದರು. ಆದರೆ ತಂಡದ ಉಳಿದ ಬೌಲರ್‌ಗಳು ಅಗತ್ಯವಿದ್ದ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ ಟೀಮ್ ಇಂಡಿಯಾ ಸೋಲುಂಡಿದ್ದು, ಭುವನೇಶ್ವರ್ ಕುಮಾರ್ ಶ್ರಮ ವ್ಯರ್ಥವಾಗಿದೆ.

ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ
ಇನ್ನು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ತೀವ್ರ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಹೌದು, ಈ ಸರಣಿಯಲ್ಲಿ ವಿಜೇತರಾಗಿ ಹೊರಹೊಮ್ಮಬೇಕೆಂದರೆ ಉಳಿದಿರುವ ಎಲ್ಲಾ 3 ಪಂದ್ಯಗಳಲ್ಲಿಯೂ ಜಯ ಸಾಧಿಸಲೇಬೇಕಾದ ಒತ್ತಡಕ್ಕೆ ಇದೀಗ ರಿಷಬ್ ಪಂತ್ ಪಡೆ ಸಿಲುಕಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications