
ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತವು ಸದ್ಯ 1-2 ರಿಂದ ಹಿನ್ನಡೆ ಅನುಭವಿಸಿದೆ. ನವದೆಹಲಿಯಲ್ಲಿ ನಡೆದ ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಸೋತಿದ್ದರೆ, ಎರಡನೇ ಪಂದ್ಯವನ್ನು ನಾಲ್ಕು ವಿಕೆಟ್‌ಗಳ ಅಂತರದಿಂದ ಸೋತರು.
ಆನಂತರ ವಿಶಾಖಪಟ್ಟಣದಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 48 ರನ್‌ಗಳಿಂದ ಗೆದ್ದು, ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಸರಣಿಯನ್ನು ಗೆಲ್ಲಬೇಕಾದರೆ ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಸರಣಿಯ ನಾಲ್ಕನೇ ಪಂದ್ಯ ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆಯಲಿದ್ದರೆ, ಕೊನೆಯ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ.
ಹೀಗಾಗಿ ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರರವರು ಬುಧವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಇದೇ ಭಾನುವಾರದಂದು ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾದ ರಕ್ಷಣೆ ಮತ್ತು ಭದ್ರತಾ ವ್ಯವಸ್ಥೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಾದ ರೋಜರ್ ಬಿನ್ನಿ, ಸಂತೋಷ್ ಮೆನನ್, ವಿನಯ್ ಮೃತ್ಯುಂಜಯ, ಅಭಿರಾಮ್, ಕಾರ್ತಿಕ್, ಡಿಎಸ್ ಅರುಣ್ ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಐದು ದಿನಗಳ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಪೊಲೀಸ್ ಇಲಾಖೆ ವಿಧಿಸುವ ಭದ್ರತಾ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು, ಅದನ್ನು ಪರಿಷ್ಕರಿಸಬೇಕೆಂದು ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮನವಿಯನ್ನು ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಧಿಕಾರಿಗಳ ಜತೆ ಇದರ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಹಾರ್ದಿಕ್ ಪಾಂಡ್ಯ ನಾಯಕ
ಜೂನ್ 26ರಿಂದ ಪ್ರಾರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗಾಗಿ ಭಾರತ ತಂಡವನ್ನು 17 ಆಟಗಾರರ ತಂಡವನ್ನು ಬುಧವಾರ ಬಿಸಿಸಿಐ ಪ್ರಕಟಿಸಿದೆ. ಭಾರತ ಮತ್ತು ಐರ್ಲೆಂಡ್‌ಗಳು ಕ್ರಮವಾಗಿ ಜೂನ್ 26 ಮತ್ತು ಜೂನ್ 28 ರಂದು ಡಬ್ಲಿನ್‌ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿವೆ.
ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಪ್ರಕಟಿಸಲಾದ ತಂಡವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದರೆ, ವೇಗಿ ಭುವನೇಶ್ವರ್ ಕುಮಾರ್ ಉಪ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.