ಭಾರತ vs ದ. ಆಫ್ರಿಕಾ: 2ನೇ ಪಂದ್ಯದಲ್ಲಿ ಭಾರತದ ಪರ ಕಣಕ್ಕಿಳಿಯುವ ಸಂಭಾವ್ಯ ತಂಡ: ಬದಲಾಗುತ್ತಾ ಪ್ಲೇಯಿಂಗ್ XI!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಎರಡೂ ತಂಡಗಳು ಕೂಡ ಸಜ್ಜಾಗಿದೆ. ಟೀಮ್ ಇಂಡಿಯಾ ಮೊದಲ ಪಂದ್ಯದವನ್ನು ಭರ್ಜರಿಯಾಗಿ ಗೆದ್ದ ಆತ್ಮ ವಿಶ್ವಾಸದಲ್ಲಿದ್ದರೆ ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಲು ಆತಿಥೆಯ ದಕ್ಷಿಣ ಆಫ್ರಿಕಾ ಹವಣಿಸುತ್ತಿದೆ. ಜೊಹನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಭಾರತ ಗೆದ್ದರೆ ಇದು ಟೆಸ್ಟ್ ಇತಿಹಾಸದಲ್ಲಿ ಭಾರತದ ಮತ್ತೊಂದು ಮಹತ್ವದ ಮೈಲಿಗಲ್ಲು ಎನಿಸಲಿದೆ ಎಂಬುದು ಗಮನಾರ್ಹ. ಅದಕ್ಕೆ ಕಾರಣ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಈವರೆಗೆ ಟೆಸ್ಟ್ ಸರಣಿ ಗೆಲ್ಲಲು ಸಫಲವಾಗಿಲ್ಲ. ಎರಡನೇ ಪಂದ್ಯವನ್ನು ಗೆದ್ದರೆ ಈ ಸರಣಿ ಭಾರತದ ಕೈವಶವಾಗಲಿದೆ.
ಇನ್ನು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಎರಡನೇ ಒಂದ್ಯದಲ್ಲಿ ಯಾವ ರೀತಿಯಾಗಿ ಕಣಕ್ಕಿಳಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಟೀಮ್ ಇಂಡಿಯಾದ ಆಡುಯವ ಬಳಗ ಎರಡನೇ ಪಂದ್ಯದಲ್ಲಿ ಹೇಗಿರಲಿದೆ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಮೊದಲ ಪಂದ್ಯದಲ್ಲಿ ಗೆಲುವಿನ ಹೊರತಾಗಿಯೂ ಆಡಯವ ಬಳಗದಲ್ಲಿ ಬದಲಾವಣೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿಸಿದೆ.
ಹಾಗಾದರೆ ಎರಡನೇ ಟೆಸ್ಟ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಭಾವ್ಯ ತಂಡ ಹೇಗಿದೆ? ಮುಂದೆ ಓದಿ..

ಆರಂಭಿಕರಾಗಿ ರಾಹುಲ್- ಮಯಾಂಕ್
ಇನ್ನು ಅನುಭವಿ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಪರವಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಇಬ್ಬರು ಕೂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಅದರಲ್ಲೀ ಮೊದಲ ಇನ್ನಿಂಗ್ಸ್‌ನಲ್ಲಿ ಈ ಜೋಡಿ ನೀಡಿದ ಆರಂಭಿಕ ಆಟ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತ್ತು. ಇದು ಪಂದ್ಯವನ್ನು ಭಾರತ ಅಂತಿಮ ದಿನದವರೆಗೂ ಬಿಗಿ ಹಿಡಿತದಲ್ಲಿಟ್ಟುಕೊಳ್ಳಲು ಕಾರಣವಾಗಿತ್ತು. ಹೀಗಾಗಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯುವುದು ಖಚಿತವಾಗಿದೆ.

ಪೂಜಾರ, ರಹಾನೆ ಕಥೆಯೇನು?
ಇನ್ನು ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವುದು ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಫಾರ್ಮ್. ಈ ಇಬ್ಬರು ಕೂಡ ದೊಡ್ಡ ಇನ್ನಿಂಗ್ಸ್ ನೀಡಲು ಸತತವಾಗಿ ವಿಫಲವಾಗುತ್ತಿದ್ದರೂ ಮ್ಯಾನೇಜ್‌ಮೆಂಟ್ ನಿರಂತರವಾಗಿ ಈ ಆಟಗಾರರ ಬೆಂಬಲಕ್ಕೆ ನಿಲ್ಲುತ್ತಾ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಮತ್ತೊಂದು ಶೂನ್ಯ ಸುತ್ತಿದ್ದರೆ ಅಜಿಂಕ್ಯಾ ರಹಾನೆ ಮಾತ್ರ 48 ರನ್‌ಗಳ ಕೊಡುಗೆ ನೀಡಲು ಯಶಸ್ವಿಯಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ನೀರಸ ಪ್ರದರ್ಶನ ನೀಡಿ ವಿಕೆಟ್ ಕಳೆದುಕೊಂಡರು. ಹಾಗಿದ್ದರೂ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಈ ಇಬ್ಬರು ಆಟಗಾರರನ್ನು ಆಡುವ ಬಳಗದಿಂದ ಹೊರಗಿಡುವ ಮನಸ್ಸು ಮಾಡುವುದು ಕಷ್ಟ.

ಉಮೇಶ್ ಯಾದವ್‌ಗೆ ಸಿಗುತ್ತಾ ಅವಕಾಶ?
ಇನ್ನು ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಸೆಂಚುರಿಯನ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿತ್ತು. ದಕ್ಷಿಣ ಆಫ್ರಿಕಾದ ವೇಗದ ಪಿಚ್‌ನ ಲಾಭವನ್ನು ತವರಿನ ವೇಗಗಳಿಗಿಂತಲೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಭಾರತೀಯ ವೇಗಿಗಳು ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ ಭಾರತ 113 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಮೊಹಮ್ಮದ್ ಶಮಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮೂರು ವಿಕೆಟ್ ಸಂಪಾದಿಸಿದ್ದರು. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಕೂಡ ಮಿಂಚಿದ್ದಾರೆ. ಈ ಮಧ್ಯೆ ಶಾರ್ದೂಲ್ ಠಾಕೂರ್ ಸ್ಥಾನದಲ್ಲಿ ಉಮೇಶ್ ಯಾದವ್‌ಗೆ ಅವಕಾಶ ದೊರೆಯಬಹುದಾ ಎಂಬ ಚರ್ಚೆಗಳು ಕೂಡ ನಡೆಯುತ್ತಿದೆ. ಆದರೆ ಮೊದಲ ಪಂದ್ಯದಲ್ಲಿ ನಿಡಿದ ಯಶಸ್ವಿ ಕಾಂಬಿನೇಶನ್ ಬದಲಾಯಿಸುವ ಸಾಧ್ಯತೆ ತೀರಾ ಕಡಿಮೆಯಿದೆ.

ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ XI
2ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications