IND vs SA ಟಿ20 ಮುಖಾಮುಖಿ: ಹೆಚ್ಚು ಪಂದ್ಯ ಗೆದ್ದಿರುವ ತಂಡ ಯಾವುದು? ಭಾರತಕ್ಕಿದೇ ತಲೆನೋವು!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಪಂದ್ಯಗಳತ್ತ ಮುಖ ಮಾಡಿದ್ದು, ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿದೆ. ಹೌದು, ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಂಡಿದ್ದು, ಇತ್ತಂಡಗಳ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯ ನಾಳೆ ( ಜೂನ್ 9 ) ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ.
ಇನ್ನು ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪ್ರತಿಷ್ಠಿತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿರುವ ಕಾರಣ ಅಲ್ಲಿಯವರೆಗೂ ನಡೆಯಲಿರುವ ಟಿ ಟ್ವೆಂಟಿ ಸರಣಿಗಳಲ್ಲಿ ಕಣಕ್ಕಿಳಿದು ಬೃಹತ್ ಟೂರ್ನಿಗಾಗಿ ಸಿದ್ಧತೆ ಮಾಡಿಕೊಳ್ಳುವ ಯೋಜನೆಯಲ್ಲಿವೆ ಎಲ್ಲಾ ತಂಡಗಳು. ಹೀಗಾಗಿ ಈ ವರ್ಷ ನಡೆಯಲಿರುವ ಎಲ್ಲಾ ಟಿ ಟ್ವೆಂಟಿ ಸರಣಿಗಳೂ ಸಹ ಟೀಮ್ ಇಂಡಿಯಾಗೆ ಬಹು ಮುಖ್ಯದ್ದಾಗಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಈ ಟಿ ಟ್ವೆಂಟಿ ಸರಣಿಗೆ ಪ್ರಕಟವಾದ ಟೀಮ್ ಇಂಡಿಯಾದಿಂದ ಪ್ರಮುಖ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಹೊರಗುಳಿದಿದ್ದು ವಿಶ್ರಾಂತಿ ಪಡೆಯುತ್ತಿರುವ ಕಾರಣ ಹಲವು ಯುವ ಕ್ರಿಕೆಟಿಗರಿಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಅದರಲ್ಲಿಯೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಹಲವಾರು ಆಟಗಾರರಿಗೆ ಅವಕಾಶ ಲಭಿಸಿದ್ದು, ಅನುಭವಿ ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ತಂಡಕ್ಕೆ ಮರಳಿದ್ದಾರೆ. ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಈ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸಲಿದ್ದು, ದಿಗ್ಗಜರಿಲ್ಲದೇ ಎದುರಾಳಿಯನ್ನು ಸಮರ್ಥವಾಗಿ ಎದುರಿಸಿ ಗೆಲ್ಲಬೇಕೆಂಬ ಗುರಿಯನ್ನೊಂದಿದ್ದಾರೆ. ಹಾಗಿದ್ದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಲ್ಲಿಯವರೆಗೂ ಒಟ್ಟಾರೆ ಎಷ್ಟು ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳು ನಡೆದಿವೆ ಹಾಗೂ ಈ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ ಓದಿ..

ಭಾರತ vs ದಕ್ಷಿಣ ಆಫ್ರಿಕಾ ಟಿಟ್ವೆಂಟಿ ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿಯವರೆಗೂ ಒಟ್ಟು 17 ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳು ನಡೆದಿದ್ದು, ಟೀಮ್ ಇಂಡಿಯಾ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ದಕ್ಷಿಣ ಆಫ್ರಿಕಾ 6 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದ ಎರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ. ಈ ಮೂಲಕ ಇತ್ತಂಡಗಳ ನಡುವೆ ನಡೆದಿರುವ ಒಟ್ಟಾರೆ ಟಿ ಟ್ವೆಂಟಿ ಪಂದ್ಯಗಳ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ.

ತವರಿನಲ್ಲಿ ಬಲಿಷ್ಟವಾಗಿಲ್ಲ ಟೀಮ್ ಇಂಡಿಯಾ
ಭಾರತ ಮತ್ತು ದಕ್ಷಿಣ ಆಫ್ರಿಕಾ ಒಟ್ಟಾರೆ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಬಲಿಷ್ಟವಾಗಿರಬಹುದು, ಆದರೆ ತವರಿನಲ್ಲಿ ನಡೆದಿರುವ ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಅಕ್ಷರಶಃ ನೆಲಕಚ್ಚಿದೆ. ಹೌದು, ಇತ್ತಂಡಗಳ ನಡುವೆ ನಡೆದಿರುವ ಒಟ್ಟಾರೆ 15 ಟಿ ಟ್ವೆಂಟಿ ಪಂದ್ಯಗಳ ಪೈಕಿ 4 ಪಂದ್ಯಗಳು ಭಾರತದ ನೆಲದಲ್ಲಿ ನಡೆದಿದ್ದು, ಈ ಪೈಕಿ ಭಾರತ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ ಮೂರೂ ಪಂದ್ಯಗಳಲ್ಲಿಯೂ ದಕ್ಷಿಣ ಆಫ್ರಿಕಾ ಗೆದ್ದು ಬೀಗಿದೆ.

ಸರಣಿಗೆ ಪ್ರಕಟವಾಗಿರುವ ತಂಡಗಳು
ಭಾರತ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ವೈ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್ , ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಂಬ್ಡರ್, ಟ್ರೈಸ್ಸೆ ಸ್ಟಬ್ಡರ್, ರಸ್ಸಿ ವಾನ್‌ಡರ್ ಡಸೆನ್ , ಮಾರ್ಕೊ ಜಾನ್ಸೆನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications