IND vs SA: 212 ರನ್‌ಗಳ ಬೃಹತ್ ಗುರಿ ನೀಡಿಯೂ ಸೋತ ಭಾರತ; ವಿಶ್ವದಾಖಲೆಯ ಕನಸು ನುಚ್ಚುನೂರು!

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಿದ್ದು, ಇತ್ತಂಡಗಳ ನಡುವಿನ ಪ್ರಥಮ ಪಂದ್ಯ ಇಂದು ( ಜೂನ್ 9 ) ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್‌ಗಳ ಬೃಹತ್ ಗುರಿಯನ್ನು ನೀಡಿತು.
ಆದರೆ ಈ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ ಹಾಗೂ ಸತತವಾಗಿ 13 ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆದ್ದ ಮೊದಲ ತಂಡ ಎಂಬ ವಿಶ್ವದಾಖಲೆ ಬರೆಯಬೇಕೆಂದುಕೊಂಡಿದ್ದ ಭಾರತದ ಕನಸಿಗೆ ತಣ್ಣೀರನ್ನು ಎರಚಿದೆ.

ಟೀಮ್ ಇಂಡಿಯಾಗೆ ಕಂಟಕವಾದ ಮಿಲ್ಲರ್, ವಾನ್ ಡರ್ ಡಸನ್
ಟೀಂ ಇಂಡಿಯಾ ನೀಡಿದ್ದ 212 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 22 ರನ್‌ಗಳಿಗೆ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಂತರ 62 ರನ್‌ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ 8.2 ಓವರ್ ಆಗಿದ್ದಾಗ ತನ್ನ ಬಲಿಷ್ಠ ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡಿತು. ಹೀಗೆ 81 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾಗೆ ಆಸರೆಯಾದದ್ದು ನಾಲ್ಕನೇ ವಿಕೆಟ್‍ಗೆ ಜತೆಯಾದ ಡೇವಿಡ್ ಮಿಲ್ಲರ್ ಮತ್ತು ವಾನ್ ಡರ್ ಡಸನ್. ಹೌದು, ರಸ್ಸಿ ವಾನ್‌ಡರ್ ಡಸೆನ್ 46 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕಿದರೆ, ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ ಅಜೇಯ 64 ರನ್ ಬಾರಿಸಿ ಅಬ್ಬರಿಸಿದರು. ವಾನ್‌ಡರ್ ಡಸೆನ್ 7 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದರೆ, ಡೇವಿಡ್ ಮಿಲ್ಲರ್ 4 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದರು. ತಂಡ 8.4 ಓವರ್‌ಗಳಿಗೆ 81 ರನ್ ಕಲೆಹಾಕಿ 3 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಈ ಜೋಡಿ 132 ರನ್‌ಗಳ ಜತೆಯಾಟವನ್ನಾಡಿ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನ ಕನಸಿಗೆ ತಣ್ಣೀರನ್ನು ಎರಚಿತು.

ವಿಶ್ವದಾಖಲೆ ಕನಸು ನುಚ್ಚುನೂರು
ಇನ್ನು ಕಳೆದ 12 ಟಿ ಟ್ವೆಂಟಿ ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಕಂಡಿದ್ದರೆ ಸತತವಾಗಿ 13 ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆಲುವು ಕಂಡ ಮೊದಲ ತಂಡ ಎಂಬ ವಿಶ್ವ ದಾಖಲೆ ಬರೆಯುವ ಅವಕಾಶವಿತ್ತು. ಆದರೆ, ಈ ಪಂದ್ಯದಲ್ಲಿ ಸೋತಿರುವ ಭಾರತ ಈ ಅವಕಾಶವನ್ನು ಕೈತಪ್ಪಿಸಿಕೊಂಡು ನಿರಾಸೆ ಅನುಭವಿಸಿದೆ. ಈ ಮೂಲಕ ಅಪ್ಘಾನಿಸ್ತಾನ, ರೋಮಾನಿಯಾ ದೇಶಗಳ ನಂತರ ಸತತ 12 ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆದ್ದ ದೇಶ ಭಾರತ ಎಂಬ ಮೈಲಿಗಲ್ಲಿಗೆ ತೃಪ್ತಿಪಟ್ಟುಕೊಂಡಿದೆ.

ಮುಗ್ಗರಿಸಿದ ಬೌಲಿಂಗ್
ಇನ್ನು ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಟೀಮ್ ಇಂಡಿಯಾದ ಪ್ರತಿಯೊಬ್ಬ ಬೌಲರ್ ಕೂಡ ಮುಗ್ಗರಿಸಿದರು. ಭುವನೇಶ್ವರ್ ಕುಮಾರ್ 4 ಓವರ್ ಬೌಲಿಂಗ್ ಮಾಡಿ 43 ರನ್ ನೀಡಿ 1 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಕೂಡ 4 ಓವರ್ ಬೌಲಿಂಗ್ ಮಾಡಿ 43 ರನ್ ನೀಡಿ 1 ವಿಕೆಟ್ ಪಡೆದರು ಮತ್ತು ಅಕ್ಷರ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ 40 ರನ್ ನೀಡಿ 1 ವಿಕೆಟ್ ಪಡೆದರು. ಹೀಗೆ ಈ ಮೂವರೂ ತಲಾ ಒಂದೊಂದು ವಿಕೆಟ್ ಪಡೆದರೂ ಸಹ ಹೆಚ್ಚು ರನ್ ನೀಡಿ ದುಬಾರಿಯಾದರೆ, ಯಾವುದೇ ವಿಕೆಟ್ ಪಡೆಯದ ಅವೇಶ್ ಖಾನ್ 4 ಓವರ್ ಮಾಡಿ 35 ರನ್ ನೀಡಿದರು, ಯುಜುವೇಂದ್ರ ಚಹಲ್ 2.1 ಓವರ್ ಮಾಡಿ 26 ರನ್ ನೀಡಿದರು ಹಾಗೂ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 18 ರನ್ ನೀಡಿ ದುಬಾರಿಯಾದರು.

ಟೀಮ್ ಇಂಡಿಯಾ ಇನ್ನಿಂಗ್ಸ್
ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಪವರ್ ಪ್ಲೇಯನ್ನು ಸಂಪೂರ್ಣವಾಗಿ ಆಡಿದ ಈ ಜೋಡಿ 57 ರನ್‌ಗಳ ಜತೆಯಾಟವಾಡಿತು. ರುತುರಾಜ್ ಗಾಯಕ್ವಾಡ್ 23 ರನ್ ಗಳಿಸಿ ಔಟ್ ಆದರೆ, ಇಶಾನ್ ಕಿಶನ್ 48 ಎಸೆತಗಳಲ್ಲಿ 76 ರನ್ ಚಚ್ಚಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 27 ಎಸೆತಗಳಲ್ಲಿ 36 ರನ್ ಕಲೆಹಾಕಿದರೆ, ನಾಯಕ ರಿಷಭ್ ಪಂತ್ 16 ಎಸೆತಗಳಲ್ಲಿ 29 ರನ್ ಬಾರಿಸಿದರು ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ ಅಜೇಯ 31 ರನ್ ಮತ್ತು ದಿನೇಶ್ ಕಾರ್ತಿಕ್ ಅಜೇಯ 1 ರನ್ ಕಲೆಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications