IND vs SA: ಇವರಿಬ್ಬರು ನಿವೃತ್ತಿ ಹೊಂದಿದರೆ ಟೀಮ್ ಇಂಡಿಯಾ ಕಥೆ ಮುಗಿದಂತೆ; ಕಂಗಾಲಾದ ಅಭಿಮಾನಿಗಳು!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಭಾರತ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ಭಾಗವಹಿಸುವತ್ತ ಮುಖ ಮಾಡಿದ್ದು, ಮೊದಲಿಗೆ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದೆ.
ಇತ್ತಂಡಗಳ ನಡುವಿನ ಮೊದಲೆರಡು ಪಂದ್ಯ ಈಗಾಗಲೇ ಮುಗಿದಿದ್ದು, ಮೊದಲಿಗೆ ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ನೀಡಿದ್ದ 212 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿತ್ತು ಹಾಗೂ ಇದೀಗ ಕಟಕ್ ನಗರದ ಬಾರಾಬತಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ 20 ಪಂದ್ಯದಲ್ಲಿಯೂ ಪ್ರವಾಸಿ ದಕ್ಷಿಣ ಆಫ್ರಿಕಾ ಗೆದ್ದು ಬೀಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಫೀಲ್ಡಿಂಗ್ ಆಯ್ದುಕೊಳ್ಳುವುದರ ಮೂಲಕ ಎದುರಾಳಿ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿ ಹರಿಣಗಳಿಗೆ 149 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತ್ತು. ಅತ್ತ ದಕ್ಷಿಣ ಆಫ್ರಿಕಾ 18.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿ 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 2 - 0 ಅಂತರದ ಮುನ್ನಡೆಯನ್ನು ಸಾಧಿಸಿ, ಸರಣಿ ಕೈವಶ ಪಡಿಸಿಕೊಳ್ಳುವುದರ ಸನಿಹದಲ್ಲಿದೆ. ಇನ್ನು ಟೀಂ ಇಂಡಿಯಾ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಸೋತ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯ ನೋವನ್ನು ಹೊರಹಾಕಿದ್ದು, ಈ ಕೆಳಕಂಡಂತೆ ಟ್ವೀಟ್ ಮಾಡಿ ಟೀಮ್ ಇಂಡಿಯಾದ ಭವಿಷ್ಯದ ಕುರಿತು ಆತಂಕ ಹೊರಹಾಕಿದ್ದಾರೆ.

ಇವರಿಬ್ಬರು ವಿದಾಯ ಹೇಳಿದ್ರೆ ತಂಡದಲ್ಲಿ ಯಾರಿದ್ದಾರೆ?
ಎಂಎಸ್ ಧೋನಿ ವಿದಾಯ ಹೇಳಿದ ನಂತರ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದ ಕಾರಣ ತಂಡಕ್ಕೆ ಹಲವಾರು ಗೆಲುವುಗಳನ್ನು ತಂದು ಕೊಟ್ಟರು, ಆದರೆ ಈ ಇಬ್ಬರೂ ವಿದಾಯ ಹೇಳಿದ ನಂತರ ಟೀಮ್ ಇಂಡಿಯಾವನ್ನು ರಕ್ಷಿಸಲು ಯಾರಿದ್ದಾರೆ? ಭಾರತ ತಂಡದ ಭವಿಷ್ಯದ ಬಗ್ಗೆ ಆತಂಕ ಆಗುತ್ತಿದೆ ಎಂದು ನೆಟ್ಟಿಗರೊಬ್ಬರು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯದ ಫಲಿತಾಂಶ ಹೊರಬಿದ್ದ ನಂತರ ಬರೆದುಕೊಂಡಿದ್ದಾರೆ.

ಪ್ರತಿ ಸೋಲಿನ ನಂತರವೂ ಒಂದೇ ಉತ್ತರ
ಮತ್ತೋರ್ವ ನೆಟ್ಟಿಗ ಟೀಮ್ ಇಂಡಿಯಾ ಪಂದ್ಯ ಸೋತ ಬೆನ್ನಲ್ಲೇ ನಾಯಕ ರಿಷಭ್ ಪಂತ್ ಅವರ ಕಾಲೆಳೆದಿದ್ದು, ರಿಷಭ್ ಪಂತ್ ಪ್ರತಿ ಪಂದ್ಯ ಸೋತ ನಂತರವೂ 'ನಾವು ಇನ್ನೂ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು, ಮುಂದಿನ ಪಂದ್ಯಗಳಲ್ಲಿ ಪ್ರದರ್ಶನವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತೇವೆ' ಎಂಬ ಹೇಳಿಕೆಯನ್ನೇ ನೀಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಭಾರತದ ಕ್ರಿಕೆಟ್ ಭವಿಷ್ಯ ಸಂಕಷ್ಟದಲ್ಲಿದೆ
ಮತ್ತೋರ್ವ ನೆಟ್ಟಿಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕುರಿತಾಗಿಯೇ ಟ್ವೀಟ್ ಮಾಡಿದ್ದು, ಈ ಇಬ್ಬರೂ ವಿದಾಯ ಹೇಳಿದ ನಂತರ ಟೀಮ್ ಇಂಡಿಯಾದ ಭವಿಷ್ಯ ಬಲು ಕಷ್ಟವಾಗಿರಲಿದೆ ಎಂದು ಬರೆದುಕೊಂಡಿದ್ದಾರೆ.
ಹೀಗೆ ಟ್ವಿಟರ್ ವೇದಿಕೆಯಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಯಶಸ್ಸು ಸಾಧಿಸುವುದು ದೂರದ ಮಾತು ಎಂಬಂತೆ ಸಾಲು ಸಾಲು ಟ್ವೀಟ್ ಮಾಡಿ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications