IND vs SA 2022: ಎರಡನೇ ಪಂದ್ಯದಲ್ಲಿ ಈ ಆರ್ಸಿಬಿ ಆಟಗಾರನಿಗೆ ಅವಕಾಶ ನೀಡಿ ಎಂದ ವಾಸಿಂ ಜಾಫರ್

ಭಾನುವಾರ (ಅಕ್ಟೋಬರ್ 9) ರಾಂಚಿಯಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತವು ಶಹಬಾಜ್ ಅಹ್ಮದ್‌ರನ್ನು ಕಣಕ್ಕಿಳಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಆಲ್ ರೌಂಡರ್ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುತ್ತಾರೆ ಮತ್ತು ಆರನೇ ಬೌಲಿಂಗ್ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಜಾಫರ್ ಶಹಬಾಜ್ ಅಹ್ಮದ್ ಆಯ್ಕೆಗೆ ಕಾರಣಗಳನ್ನು ನೀಡಿದ್ದಾರೆ.
2022ರ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ಪರವಾಗಿ ಆಡಿದ್ದ ಶಹಬಾಜ್ ಅಹ್ಮದ್, 16 ಪಂದ್ಯಗಳಲ್ಲಿ 219 ರನ್ ಗಳಿಸಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಆಯ್ಕೆದಾರರ ಗಮನ ಸೆಳೆದಿದ್ದರು. ಟೀಂ ಇಂಡಿಯಾ ಪರವಾಗಿ ಪದಾರ್ಪಣೆ ಮಾಡಲು ಕಾಯುತ್ತಿರುವ ಅವರಿಗೆ ಎರಡನೇ ಪಂದ್ಯದಲ್ಲಿ ಸ್ಥಾನ ಸಿಗುವ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಶಹಬಾಜ್ ಅಹ್ಮದ್ ಬೌಲಿಂಗ್ ವಿಭಾಗದಲ್ಲಿ ಸಹಾಯಕವಾಗಿರುವುದರಿಂದ ಮತ್ತು ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಆಡಬೇಕು. 50 ಓವರ್‌ಗಳ ಕ್ರಿಕೆಟ್‌ನಲ್ಲಿ ನೀವು ಕೇವಲ ಐದು ಬೌಲಿಂಗ್ ಆಯ್ಕೆಗಳೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ನೀವು ರುತುರಾಜ್ ಗಾಯಕ್ವಾಡ್ ಅಥವಾ ಇಶಾನ್ ಕಿಶನ್ ಬದಲಿಗೆ ಶಹಬಾಜ್ ಅಹ್ಮದ್‌ರನ್ನು ಆಡಿಸಬಹುದು" ಎಂದು ಹೇಳಿದ್ದಾರೆ.

ಆರಂಭದಲ್ಲೇ ವಿಕೆಟ್ ಪಡೆದು ಒತ್ತಡ ಹಾಕಬೇಕು
ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ಪಂದ್ಯವನ್ನು ಸೋತರೆ ಭಾರತ ಸರಣಿಯನ್ನು ಕಳೆದುಕೊಳ್ಳಲಿದೆ. ಆದ್ದರಿಂದ, ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಗೆಲ್ಲಬೇಕಾದರೆ, ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಬೇಗನೆ ಔಟ್ ಮಾಡಬೇಕು ಎಂದು ಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಿಲ್ಲರ್ ಮತ್ತು ಕ್ಲಾಸೆನ್ 75 ಮತ್ತು 74 ರನ್ ಗಳಿಸಿ ಅಜೇಯರಾಗಿ ಉಳಿದರೆ, ಡಿ ಕಾಕ್ 48 ರನ್ ಗಳಿಸಿ ತಮ್ಮ ತಂಡಕ್ಕೆ ಗಟ್ಟಿಯಾದ ವೇದಿಕೆಯನ್ನು ಒದಗಿಸಿದರು.
T20 World Cup 2022: ಆಸ್ಟ್ರೇಲಿಯಾ ಪಿಚ್‌ಗಳ ಬಗ್ಗೆ ನನಗೆ ಗೊತ್ತು ಎಂದ ಯುಜುವೇಂದ್ರ ಚಹಾಲ್

ಡೇವಿಡ್ ಮಿಲ್ಲರ್ ಅಪಾಯಕಾರಿ
ಡೇವಿಡ್ ಮಿಲ್ಲರ್ ಗುಣಮಟ್ಟದ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಅವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಟೀಂ ಇಂಡಿಯಾ ಆದಷ್ಟು ಬೇಗನೆ ಮಿಲ್ಲರ್ ವಿಕೆಟ್ ಪಡೆಯಲು ಕಾರ್ಯತಂತ್ರ ರೂಪಿಸಬೇಕು ಎಂದು ಅವರು ಹೇಳಿದ್ದಾರೆ.
ಮೊದಲನೇ ಏಕದಿನ ಪಂದ್ಯದಲ್ಲಿ ಒಂಬತ್ತು ರನ್‌ಗಳಿಂದ ಸೋತ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್ ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದರು, ಎರಡನೇ ಪಂದ್ಯದಲ್ಲಿ ಹೊಸ ಆಟಗಾರ ಬೆಂಗಾಲ್ ವೇಗಿ ಮುಖೇಶ್ ಕುಮಾರ್‌ಗೆ ಭಾರತದ ಪರವಾಗಿ ಪದಾರ್ಪಣೆ ಮಾಡುವ ಅವಕಾಶವಿದೆ.

ಬ್ಯಾಟಿಂಗ್ ಕೂಡ ಸುಧಾರಣೆಯಾಗಬೇಕು
ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಆರಂಭದಲ್ಲಿ ವಿಕೆಟ್ ಉಳಿಸಿಕೊಂಡು ಉತ್ತಮ ರನ್ ಗಳಿಸುವ ಮೂಲಕ ಮಧ್ಯಮ ಮಧ್ಯಮ ಕ್ರಮಾಂಕಕ್ಕೆ ಭದ್ರ ಬುನಾದಿ ಹಾಕಿಕೊಡಬೇಕಾಗಿದೆ.
ಶ್ರೇಯಸ್ ಅಯ್ಯರ್ ಅವರು ಟಿ 20 ವಿಶ್ವಕಪ್‌ಗಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿರುವುದರಿಂದ ಅವರು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸುವ ಯೋಜನೆಯಲ್ಲಿದ್ದಾರೆ. ಏತನ್ಮಧ್ಯೆ, ಸಂಜು ಸ್ಯಾಮ್ಸನ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ.
ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರು ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಭಾರತದ ಪ್ರವಾಸದಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಮೊದಲ ಎರಡು ಟಿ20 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಅವರು ಮೂರನೇ ಟಿ20 ಪಂದ್ಯದಲ್ಲಿ 3 ರನ್ ಗಳಿಸಿದರು. ಮೊದಲನೇ ಏಕದಿನ ಪಂದ್ಯದಲ್ಲಿ 8 ರನ್ ಗಳಿಸಿ ಔಟಾದರು. ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಅವರು ಉತ್ತಮ ಪ್ರದರ್ಶಣ ನೀಡುವ ಅಗತ್ಯವಿದೆ. ಇಲ್ಲದಿದ್ದರೆ, ದಕ್ಷಿಣ ಆಫ್ರಿಕಾದ ತಂಡದ ಆಡಳಿತವು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೇಶ್ ಖಾನ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಮುಖೇಶ್ ಕುಮಾರ್, ರಜತ್ ಪಾಟಿದಾರ್, ಶಹಬಾಜ್ ಎ. ರಾಹುಲ್ ತ್ರಿಪಾಠಿ.
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್‌ಸೆನ್ ಮತ್ತು ಅನ್ರಿಲೆ ಫೆಹ್ಲುಕ್ವಾಯೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications