
ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಿ ಇತ್ತೀಚೆಗಷ್ಟೇ ಟಿ ಟ್ವೆಂಟಿ ಮತ್ತು ಟೆಸ್ಟ್ ಎರಡೂ ಸರಣಿಗಳಲ್ಲಿ ವಿಜಯದ ಪತಾಕೆಯನ್ನು ಹಾರಿಸಿದ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸಲಿದೆ.
ಈಗಾಗಲೇ ದಕ್ಷಿಣ ಆಫ್ರಿಕಾವನ್ನು ತಲುಪಿರುವ ವಿರಾಟ್ ಕೊಹ್ಲಿ ಪಡೆ ಹರಿಣಗಳ ವಿರುದ್ಧ ಮೊದಲಿಗೆ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದ್ದು ಡಿಸೆಂಬರ್ 26ರಂದು ಇತ್ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇನ್ನು ಬಿಸಿಸಿಐ ದಕ್ಷಿಣ ಆಫ್ರಿಕಾ ವಿರುದ್ಧದ ಈ ಟೆಸ್ಟ್ ಸರಣಿಗೆ 18 ಆಟಗಾರರ ತಂಡವನ್ನು ಪ್ರಕಟಿಸಿದ್ದು ಕಳೆದ ಡಿಸೆಂಬರ್ 16ರಂದೇ ಟೀಮ್ ಇಂಡಿಯಾ ಆಟಗಾರರ ತಂಡ ದಕ್ಷಿಣ ಆಫ್ರಿಕಾವನ್ನು ತಲುಪಿದ್ದು ಈಗಾಗಲೇ 1 ದಿನದ ಕ್ವಾರಂಟೈನ್ ಮುಗಿಸಿ ಅಭ್ಯಾಸಗಳಲ್ಲಿ ತೊಡಗಿಕೊಂಡಿದೆ. ಹೌದು, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಜೊತೆಗೆ ಒಮಿಕ್ರಾನ್ ವೈರಸ್ ಹಾವಳಿ ಕೂಡ ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆಟಗಾರರನ್ನು ಕ್ವಾರಂಟೈನ್ ಮಾಡಿ, ಕೊವಿಡ್ ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದ ನಂತರವಷ್ಟೇ ಆಟಗಾರರನ್ನು ಕ್ರಿಕೆಟ್ ಸೌತ್ ಆಫ್ರಿಕಾ ಕ್ವಾರಂಟೈನ್ ನಿಯಮದಿಂದ ಬಿಡುಗಡೆಗೊಳಿಸಿತು.
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಸೆಂಚುರಿಯನ್ ನಗರದ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಕ್ವಾರಂಟೈನ್ ಮುಗಿಸಿದ ಟೀಮ್ ಇಂಡಿಯಾ ಆಟಗಾರರು ಇಂದು ಕ್ರೀಡಾಂಗಣಕ್ಕೆ ಕಾಲಿಟ್ಟು ಮೈದಾನದಲ್ಲಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಹೀಗೆ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣಕ್ಕೆ ಭಾರತೀಯ ಆಟಗಾರರ ಜೊತೆ ಕಾಲಿಟ್ಟ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅಲ್ಲಿನ ಪಿಚ್ ಮೇಲಿನ ಹುಲ್ಲನ್ನು ನೋಡಿ ಆಶ್ಚರ್ಯಕ್ಕೊಳಗಾಗಿದ್ದಾರೆ.
ಹೌದು, ಇತ್ತೀಚೆಗಷ್ಟೇ ಭಾರತ ನೆಲದಲ್ಲಿ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿ ಆಡಿದ ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ 150 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಶ್ರೇಯಸ್ ಅಯ್ಯರ್ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದು, ಇಂದು ಅಭ್ಯಾಸ ಆರಂಭಿಸಲು ಸೆಂಚುರಿಯನ್ ಕ್ರೀಡಾಂಗಣಕ್ಕೆ ಬಂದ ಕೂಡಲೇ ಪಿಚ್ ಮೇಲಿದ್ದ ಹುಲ್ಲನ್ನು ನೋಡಿ ಶಾಕ್ ಆಗಿದ್ದಾರೆ. ಶ್ರೇಯಸ್ ಅಯ್ಯರ್ ಇದೇ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಅಂತರರಾಷ್ಟ್ರೀಯ ಟೆಸ್ಟ್ ಸರಣಿಯನ್ನು ಆಡುತ್ತಿದ್ದು ಈ ಅನುಭವ ಹೊಸದಾಗಿರುವುದರಿಂದ ಕೆಲಕಾಲ ಆತಂಕಕ್ಕೊಳಗಾಗಿದ್ದರು.
ಹೀಗೆ ಪಿಚ್ ಕುರಿತು ತಂಡದ ಆಟಗಾರರಲ್ಲಿ ಆತಂಕ ಉಂಟಾಗಿದ್ದನ್ನು ಕಂಡ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಮೈದಾನದಲ್ಲಿಯೇ ಆಟಗಾರರ ಜೊತೆ ಚರ್ಚಿಸಿ 'ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಹೋಗಿ ಉತ್ತಮ ಅಭ್ಯಾಸವನ್ನು ತೀವ್ರವಾಗಿ ಮಾಡಿ' ಎಂದು ಸಲಹೆಯನ್ನು ನೀಡಿದರು. ರಾಹುಲ್ ದ್ರಾವಿಡ್ ಅವರ ಈ ಸಲಹೆಯನ್ನು ಆಲಿಸಿದ ಟೀಮ್ ಇಂಡಿಯಾ ಆಟಗಾರರು ಹುಮ್ಮಸ್ಸಿನಿಂದ ಅಭ್ಯಾಸ ನಡೆಸಿದ್ದಾರೆ. ಶ್ರೇಯಸ್ ಅಯ್ಯರ್ ಪಿಚ್ ಕುರಿತಾಗಿ ಹೇಳಿದ ಮಾತುಗಳು ಮತ್ತು ರಾಹುಲ್ ದ್ರಾವಿಡ್ ನೀಡಿದ ಸಲಹೆಯ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳ ವೇಳಾಪಟ್ಟಿ ಈ ಕೆಳಕಂಡಂತಿದೆ..
ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು ಇದರ ವೇಳಾ ಪಟ್ಟಿ ಈ ಕೆಳಕಂಡಂತಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಹೀಗೆ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಅದರ ವೇಳಾಪಟ್ಟಿ ಹೀಗಿದೆ
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM