ಮಂಗಳವಾರ, ಡಿಸೆಂಬರ್ 12ರಂದು ಗ್ಕೆಬರ್ಹಾದಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಪ್ರವಾಸಿ ಭಾರತ ತಂಡದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈಗಾಗಲೇ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದ್ದು, ಮಳೆ-ಬಾಧಿತ ಎರಡನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇದೀಗ ಉಳಿದಿರುವ ಕೊನೆಯ ಪಂದ್ಯವನ್ನು ಗೆಲ್ಲಬೇಕಾದ ಅನಿವಾರ್ಯತೆ ಭಾರತಕ್ಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ 19.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್‌ಗಳನ್ನು ಕಲೆಹಾಕಿತ್ತು.
ಮಳೆ ಸುರಿದ ಕಾರಣ, ಆಟವನ್ನು ಅಲ್ಲಿಗೆ ನಿಲ್ಲಿಸಲಾಯಿತು. ಮಳೆ ನಿಂತ ನಂತರ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 15 ಓವರ್‌ಗಳಲ್ಲಿ 152 ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಆಗ 13.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವು ಪಡೆದುಕೊಂಡಿತು.
ಭಾರತದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಸೊನ್ನೆಗೆ ಔಟಾದರು. ನಂತರ ಬಂದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕುಸಿದಿದ್ದ ತಂಡಕ್ಕೆ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನಿರ್ಮಿಸಿದರು.
ತಿಲಕ್ ವರ್ಮಾ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 29 ರನ್ ಗಳಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 56 ರನ್ ಬಾರಿಸಿದರು. ತಿಲಕ್ ವರ್ಮಾ ಔಟಾದ ಬಳಿಕ ಬಂದ ರಿಂಕು ಸಿಂಗ್ ಕೂಡ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು.
ರಿಂಕು ಸಿಂಗ್ 39 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 68 ರನ್ ಬಾರಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜಾ 19 ರನ್ ಗಳಿಸಿ ಸಾಥ್ ನೀಡಿದರು.
ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಜೆರಾಲ್ಡ ಕೊಯಟ್ಜಿ ಮೂರು ವಿಕೆಟ್ ಪಡೆದರೆ, ಮಾರ್ಕೋ ಜಾನ್ಸನ್, ಲಿಜಾಡ್ ವಿಲಿಯಮ್ಸ್, ತಬ್ರೇಜ್ ಶಮ್ಸಿ ಮತ್ತು ಏಡೆನ್ ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೇಳೆ ಆರಂಭಿಕರಾದ ಮ್ಯಾಥ್ಯೂ ಬ್ರೀಟ್ಜ್ಕೆ 16 ರನ್ ಗಳಿಸಿ ಔಟಾದರೆ, ರೀಜಾ ಹೆಂಡ್ರಿಕ್ಸ್ 27 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ವೇಗದ 49 ರನ್ ಗಳಿಸಿದರು.
ಏಡೆನ್ ಮಾರ್ಕ್ರಾಮ್ 30 ರನ್, ಹೆನ್ರಿಚ್ ಕ್ಲಾಸೆನ್ 7 ರನ್, ಡೇವಿಡ್ ಮಿಲ್ಲರ್ 17 ರನ್, ಟ್ರಿಸ್ಟಾನ್ ಸ್ಟಬ್ಸ್ ಅಜೇಯ 14 ರನ್, ಆಂಡಿಲ್ ಹೆಹ್ಲುಕಾಯೋ ಅಜೇಯ 10 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.