
ಟೀಮ್ ಇಂಡಿಯಾ ಪರವಾಗಿ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೂರ್ಯಕುಮಾರ್ ಅನೇಕ ಅದ್ಭುತ ಪ್ರದರ್ಶನಗಳನ್ನು ನೀಡಿ ಮಿಂಚುಹರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿಯೂ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದ ಸೂರ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಆತ್ಮವಿಶ್ವಾಸದಿಂದ ಸಜ್ಜಾಗಿದ್ದಾರೆ.
ಈ ಸಂದರ್ಭದಲ್ಲಿ ಭಾರತದ ಈ ನಂಬಿಕಸ್ತ ದಾಂಡಿಗ ಮತ್ತೊಂದು ಪ್ರಮುಖ ದಾಖಲೆಯನ್ನು ಬರೆಯುವ ಸನಿಹದಲ್ಲಿದ್ದಾರೆ. ಚುಟುಕು ಮಾದರಿಯಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿರುವ ದಾಖಲೆಯನ್ನು ಸದ್ಯ ಹಿರಿಯ ಆಟಗಾರ ಶಿಖರ್ ಧವನ್ ಹೊಂದಿದ್ದು ಇದನ್ನು ಹಿಂದಿಕ್ಕುವ ಅವಕಾಶ ಸೂರ್ಯಕುಮಾರ್ ಯಾದವ್‌ಗೆ ಇದೆ. ಇದಕ್ಕಾಗಿ ಸೂರ್ಯಲುಮಾರ್ ಯಾದವ್‌ಗೆ ಕೇವಲ 8 ರನ್‌ಗಳ ಅಗತ್ಯವಿದೆ. ದ. ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿಯೇ ಸೂರ್ಯ ಈ ದಾಖಲೆ ಮುರಿಯುವುದು ನಿಶ್ಚಿತ.
2018ರಲ್ಲಿ ಶಿಖರ್ ಧವನ್ 689 ರನ್‌ಗಳನ್ನು ಗಳಿಸುವ ಮೂಲಕ ಈ ದಾಖಲೆಯನ್ನು ಬರೆದಿದ್ದರು. ಇದನ್ನು ಮೀರಿಸಲು ಸೂರ್ಯಕುಮಾರ್ ಯಾದವ್ 8 ರನ್‌ಗಳನ್ನು ಗಳಿಸಬೇಕು. ಭಾರತದ ಈ ಆಟಗಾರನಿಗೆ ಈ ವರ್ಷ ಇನ್ನು ಕೂಡ ಕನಿಷ್ಠ 11 ಪಂದ್ಯಗಳಲ್ಲಿ ಆಡುವ ಅವಕಾಶ ದೊರೆಯಲಿದ್ದು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ವರ್ಷವೊಂದರಲ್ಲಿ 1000ರನ್‌ಗಳನ್ನು ಗಳಿಸುವ ಅವಕಾಶವೂ ಸೂರ್ಯಕುಮಾರ್‌ಗೆ ಇದೆ.
ಆಸ್ಟ್ರೇಲಿಯಾ ವಿರುದ್ಧದ ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ 2016ರಲ್ಲಿ ಗಳಿಸಿದ್ದ ರನ್ ದಾಖಲೆಯನ್ನು ಹಿಂದಿಕ್ಕಿದ್ದರು. 2016ರಲ್ಲಿ ಅತ್ಯುನ್ನತ ಫಾರ್ಮ್‌ನಲ್ಲಿದ್ದ ಕೊಹ್ಲಿ 641 ರನ್‌ಗಳಿಸಿದ್ದರು. ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿಗೆ ಹೋಲಿಸಿದರೆ ಸೂರ್ಯಕುಮಾರ್ ಯಾದವ್ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಒಂದು ಶತಕ ಹಾಗೂ ನಾಲ್ಕು ಅರ್ಧ ಶತಕವನ್ನು ಸಿಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಪ್ರತಿಭಾನ್ವಿತ ಬ್ಯಾಟರ್ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಸಿಡಿಸಿ 69 ರನ್‌ಗಳ ಅದ್ಭುತ ಪ್ರದರ್ಶನ ನಿಡಿದರು. ಅಲ್ಲದೆ ವಿರಾಟ್ ಕೊಹ್ಲಿ ಅವರೊಂದಿಗೆ ಮೂರನೇ ವಿಕೆಟ್‌ಗೆ 104 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟವನ್ನು ನಡೆಸಿದರು.
ಇನ್ನು ಚುಟುಕು ಮಾದರಿಯಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯನ್ನು ನೋಡಿದರೆ ಅದರಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗುತ್ತದೆ. ವಿರಾಟ್ 2012, 2014, 2016, 2017, ಮತ್ತು 2019 ರಲ್ಲಿ ಭಾರತದ ಪ್ರಮುಖ ರನ್ ಸ್ಕೋರರ್ ಆಗಿದ್ದರು. ರೋಹಿತ್ ಶರ್ಮಾ ಅವರು 2015 ಮತ್ತು 2021 ರಲ್ಲಿ ಎರಡು ಬಾರಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೆ, ಕೆಎಲ್ ರಾಹುಲ್ 2020 ರಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.