ಭಾರತ vs ದ. ಆಫ್ರಿಕಾ: ಟಿ20 ವಿಶ್ವದಾಖಲೆ ನಿರ್ಮಿಸಲು ಮಿಂಚಬೇಕಿದೆ ಈ 4 ಭಾರತೀಯ ಆಟಗಾರರು

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ದಿನಗಣನೆ ಆರಂಭವಾಗಿದೆ. ಜೂನ್ 9ರಿಂದ ಈ ಸರಣಿ ಆರಂಬವಾಗಲಿದ್ದು ಐದು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಲು ಎರಡು ತಂಡಗಳು ಕೂಡ ಸಜ್ಜಾಗಿದೆ. ಇನ್ನು ಈ ಟಿ20 ಸರಣಿಯ ಮೊದಲ ಪಂದ್ಯ ಭಾರತಕ್ಕೆ ಮಹತ್ವದ್ದಾಗಿದ್ದು ಟಿ20 ಮಾದರಿಯಲ್ಲಿ ವಿಶ್ವದಾಖಲೆ ನಿರ್ಮಾಣಕ್ಕೆ ಅವಕಾಶವಿದೆ. ಭಾರತ t20 ಕ್ರಿಕೆಟ್‌ನಲ್ಲಿ ಸತತ 12 ಗೆಲುವು ಸಾಧಿಸಿದ್ದು ಇನ್ನು ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತದ ಹೆಸರಿನಲ್ಲಿ ಸತತವಾಗಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ದಾಖಲೆ ನಿರ್ಮಾಣವಾಗಲಿದೆ.
ಹೀಗಾಗಿ ಮುಂದಿನ ಗುರುವಾರ ದೆಹಲಿಯಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಗೆಲುವು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಆದರೆ ಈ ಸರಣಿಯಲ್ಲಿ ಭಾರತದ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಹೀಗಾಗಿ ವಿಶ್ವ ದಾಖಲೆಯ ಪಂದ್ಯದಲ್ಲಿ ಭಾರತ ಗೆಲ್ಲಬೇಕಾದರೆ ಭಾರತ ತಂಡದಿಂದ ಅದ್ಭುತ ಪ್ರದರ್ಶನ ಬರಲೇ ಬೇಕಿದೆ.
ಈ ಮಹತ್ವದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಪರವಾಗಿ ಈ ನಾಲ್ವರು ಆಟಗಾರರು ಮಿಂಚಿದರೆ ಎದುರಾಳಿ ತಂಡಕ್ಕೆ ಉಳಿದಗಾಲವಿಲ್ಲ. ಹಾಗಾದರೆ ಆ ಆಟಗಾರರು ಯಾರು? ಮುಂದೆ ಓದಿ..

ಆರಂಭಿಕ ಆಟಗಾರ ಇಶಾನ್ ಕಿಶನ್
ರೋಹಿತ್ ಶರ್ಮಾ ದಕ್ಷಿಣ ಆಪ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯುತ್ತಿರುವ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಕೆಎಲ್ ರಾಹುಲ್ ಎಂದಿನಂತೆ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮತ್ತೊಂದು ತುದಿಯಲ್ಲಿ ಇಶಾನ್ ಕಿಶನ್ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ತಂಡದ ರನ್ ವೇಗವನ್ನು ಹೆಚ್ಚಿಸಬೇಕಿದೆ. ಐಪಿಎಲ್‌ನಲ್ಲಿ ಬಹುತೇಕ ಪಂದ್ಯಗಳಲ್ಲಿ ವೈಫಲ್ಯವನ್ನು ಅನುಭವಿಸಿರುವ ಇಶಾನ್ ಕಿಶನ್ ರಾಷ್ಟ್ರೀಯ ತಂಡದ ಪರವಾಗಿ ಆಡುವ ಸಂದರ್ಭದಲ್ಲಿ ಮತ್ತೆ ಲಯವನ್ನು ಕಂಡುಕೊಳ್ಳಬೇಕಿದೆ. ಇಶಾನ್ ಕಿಶನ್ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಯಶಸ್ವಿಯಾದರೆ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕಂಠಕವಾಗುವುದರಲ್ಲಿ ಅನುಮಾನವಿಲ್ಲ.

ಅನುಭವಿ ಆಟಗಾರ ದಿನೇಶ್ ಕಾರ್ತಿಕ್
ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರ ಪೈಕಿ ದಿನೇಶ ಕಾರ್ತಿಕ್ ಕೂಡ ಒಬ್ಬರು. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಈ ಅನುಭವಿ ಆಟಗಾರ ಭಾರತ ತಂಡದ ಪರವಾಗಿಯೂ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ಪುನರಾವರ್ತಿಸಬೇಕಿದೆ. ಸುದೀರ್ಘ ಕಾಲದ ಬಳಿಕ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡು ಆಡಲು ಸಜ್ಜಾಗಿದ್ದಾರೆ ಡಿನೇಶ್ ಕಾರ್ತಿಕ್. ಡೆತ್ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ಕಣಕ್ಕಿಳಿದು ರನ್ ವೇಗವನ್ನು ಹೆಚ್ಚಿಸಿದರೆ ಭಾರತದ ಸ್ಕೋರ್ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಈ ಮೂಲಕ ಎದುರಾಳಿ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಲು ಸಾಧ್ಯವಿದೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ
ಕಳೆದ ಟಿ20 ವಿಶ್ವಕಪ್‌ನ ಬಳಿಕ ಭಾರತೀಯ ತಂಡದಿಂದ ದೂರವುಳಿದಿರುವ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಗಳಿಸಿಕೊಂಡು ಮತ್ತೆ ಆಡಲು ಸಜ್ಜಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಆಡಿರುವ ಹಾರ್ದಿಕ್ ಪಾಂಡ್ಯಗೆ ಭಾರತ ತಂಡದಲ್ಲಿ ಯಾವ ಕ್ರಮಾಂಕ ದೊರೆಯಲಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ರಾಷ್ಟ್ರೀಯ ತಂಡದ ಪರವಾಗಿ ಫಿನಿಷರ್ ಆಗಿಯೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಅವಕಾಶವನ್ನು ಹಾರ್ದಿಕ್ ಅದ್ಭುತವಾಗಿ ಬಳಸಿಕೊಳ್ಳಬೇಕಿದೆ. ಜೊತೆಗೆ ಬೌಲಿಂಗ್‌ನಲ್ಲಿಯೂ ತನ್ನ ಸಾಮರ್ಥ್ಯವನ್ನು ಹಾರ್ದಿಕ್ ಪಾಂಡ್ಯ ಪ್ರದರ್ಶಿಸಲು ಸಾಧ್ಯವಾದರೆ ಎದುರಾಳಿಗಳಿಗೆ ಉಳಿಗಾಲವಿಲ್ಲ.

ವೇಗದ ಬೌಲರ್ ಹರ್ಷಲ್ ಪಟೇಲ್
ಇನ್ನು ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಿರುವ ಹರ್ಷಲ್ ಪಟೇಲ್ ರಾಷ್ಟ್ರೀಯ ತಮಡದ ಪರವಾಗಿಯೂ ಆಡುವ ಅವಕಾಶ ಗಿಟ್ಟಿಸಿಕೊಂಡು ಈಗಾಗಲೇ ಭರವಸೆ ಮೂಡಿಸಿದ್ದಾರೆ. ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳ ಪೈಕಿ ನಿಧಾನಗತಿಯ ಬೌಲಿಂಗ್ ದಾಳಿಯನ್ನು ಅದ್ಭುತವಾಗಿ ಬಳಸುವ ಸಾಮರ್ಥ್ಯವಿರುವ ಹರ್ಷಲ್ ಡೆತ್ ಓವರ್‌ಗಳಲ್ಲಿ ಮಾರಕವಾಗಬಲ್ಲ ಆಟಗಾರ. ಹೀಗಾಗಿ ದಕ್ಷಿಣ ಆಫ್ರಿಕಾ ತಮಡದ ದಾಂಡಿಗರನ್ನು ಹರ್ಷಲ್ ತಮ್ಮ ಅಸ್ತ್ರದ ಮೂಲಕ ಕಂಗೆಡಿಸಲು ಯಶಸ್ವಿಯಾದರೆ ದಕ್ಷಿಣ ಆಪ್ರಿಕಾ ವಿರುದ್ಧಧ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಗೆದ್ದು ಭಾರತ ಮುನ್ನಡೆ ಸಾಧಿಸುವ ಜೊತೆಗೆ ಸತಿ ಹೆಚ್ಚಿನ ಪಂದ್ಯಗಳನ್ನು ಸತತವಾಗಿ ಗೆದ್ದ ಐತಿಹಾಸಿಕ ದಾಖಲೆ ಬರೆದಂತಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications