ಮಂಗಳವಾರ, ಡಿಸೆಂಬರ್ 26ರಿಂದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಭಾರತ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ.
ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಸೇವೆಯನ್ನು ಭಾರತ ತಂಡ ಮಿಸ್ ಮಾಡಿಕೊಳ್ಳಲಿದೆ ಎಂದು ನಾಯಕ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ.
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಹೃದಯ ವಿದ್ರಾವಕ ಸೋಲಿನ ನಂತರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು ಇದೇ ಮೊದಲು.

ಟಿ20 ಮತ್ತು ಏಕದಿನ ಸರಣಿಗಳಲ್ಲಿ ಆಡಿದ ನಂತರ, ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದ ಕೊನೆಯ ಹಂತವನ್ನು ಮಂಗಳವಾರದಿಂದ ಪ್ರಾರಂಭಿಸಲಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್ ಆಟಗಾರರು ಏಕದಿನ ವಿಶ್ವಕಪ್ ಫೈನಲ್‌ನ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕೆ ಕಾಲಿಡಲಿದ್ದಾರೆ. ಆದರೆ, ಗಾಯಾಳು ಮೊಹಮ್ಮದ್ ಶಮಿ ಟೆಸ್ಟ್ ಸರಣಿಯ ಭಾಗವಾಗಿರುವುದಿಲ್ಲ.

ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಲ್ಲಿ ಭಾರೀ ಮಿಸ್ ಆಗುತ್ತಾರೆ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು. ಹರಿಣಗಳ ನಾಡಿನಲ್ಲಿ ಭಾರತ ತಂಡ ಇನ್ನೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಮತ್ತು ಈ ಸರಣಿಯಲ್ಲಿ ಆ ಕಳಪೆ ದಾಖಲೆಯನ್ನು ಬದಲಾಯಿಸಲು ತಂಡವು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಟೀಮ್ ಇಂಡಿಯಾ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.
"ತುಂಬಾ ಮಹತ್ವದ ಟೆಸ್ಟ್ ಸರಣಿ. ನಾವು ಇಲ್ಲಿ ಯಾವತ್ತೂ ಸರಣಿ ಗೆದ್ದಿಲ್ಲ. ಇದು ನಮಗೆ ದೊಡ್ಡ ಅವಕಾಶವಿದೆ. ಕಳೆದ ಎರಡು ಬಾರಿ ನಾವು ಹತ್ತಿರ ಬಂದಿದ್ದೇವೆ. ಅದು ನಮಗೆ ಅತ್ಯುತ್ತಮ ಪ್ರದರ್ಶನ ನೀಡಲು ಸಾಕಷ್ಟು ಉತ್ಸಾಹ ಮತ್ತು ಉತ್ತೇಜನ ನೀಡುತ್ತದೆ. ನಮ್ಮ ವೇಗಿಗಳು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ವೇಗಿಗಳು ವಾಸ್ತವವಾಗಿ ಫಾರ್ಮ್‌ನಲ್ಲಿದ್ದಾರೆ. ಮೊಹಮ್ಮದ್ ಶಮಿ ದೊಡ್ಡ ಮಿಸ್ ಆಗುತ್ತಾರೆ," ಎಂದು ರೋಹಿತ್ ಶರ್ಮಾ ಹೇಳಿದರು.
ಪ್ರಸ್ತುತ ಭಾರತೀಯ ಬೌಲರ್‌ಗಳ ಪೈಕಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್. ಅವರು ದಕ್ಷಿಣ ಆಫ್ರಿಕಾದ ನೆಲದಲ್ಲಿ ಆಡಿದ 8 ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದಾರೆ.
2023ರ ಏಕದಿನ ವಿಶ್ವಕಪ್‌ನಲ್ಲಾದ ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಭಾರತ ತಂಡದ ಪರ 2023ರ ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಅಸಾಧಾರಣ ಪ್ರದರ್ಶನ ನೀಡಿದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ಗಳೊಂದಿಗೆ ಅಗ್ರ ವಿಕೆಟ್-ಟೇಕರ್ ಆಗಿ ಪಂದ್ಯಾವಳಿಯನ್ನು ಮುಗಿಸಿದರು.
ಮೊದಲ ನಾಲ್ಕು ಪಂದ್ಯಗಳಿಗೆ ಮೊಹಮ್ಮದ್ ಶಮಿ ಬೆಂಚ್ ಕಾಯಿಸಬೇಕಾಯಿತು. ಬಾಂಗ್ಲಾದೇಶ ವಿರುದ್ಧದ ಪಂದ್ಯಾವಳಿಯ 3ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಾದದ ಗಾಯಕ್ಕೆ ತುತ್ತಾದ ನಂತರ ಮೊಹಮ್ಮದ್ ಶಮಿಯನ್ನು ಆಡುವ 11ರ ಬಳಗಕ್ಕೆ ಕರೆತರಲಾಯಿತು.
ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಇನ್ನೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಮತ್ತು ಇದು ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಭಾರತ ತಂಡಕ್ಕೆ ಉಳಿದಿರುವ ಕೊನೆಯ ಗಡಿಯಾಗಿದೆ.
ಭಾರತ ತಂಡ ಡಿಸೆಂಬರ್ 26ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿರುವಾಗ, ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಚೊಚ್ಚಲ ಸರಣಿ ಗೆಲುವನ್ನು ದಾಖಲಿಸಲು ಎದುರು ನೋಡುತ್ತದೆ.