
ಯುವ ದಾಂಡಿಗ ಐಡೆನ್ ಮಾರ್ಕ್ರಮ್
ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ ಐಡೆನ್ ಮಾರ್ಕ್ರಮ್ ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಿದ್ದಾರೆ. ಎಸ್‌ಆರ್‌ಹೆಚ್ ಟೂರ್ನಿಯಲ್ಲಿ ಮಿಂಚಲು ವಿಫಲವಾಗಿದ್ದರೂ ಮಾರ್ಕ್ರಮ್ ಪ್ರದರ್ಶನ ಮಾತ್ರ ಗಮನಾರ್ಹವಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರೂ ಆಡಿದ 14 ಪಂದ್ಯಗಳಲ್ಲಿ 47.63ರ ಸರಾಸರಿಯಲ್ಲಿ 381 ರನ್‌ಗಳಿಸಿದ್ದಾರೆ ಮಾರ್ಕ್ರಮ್. 140ರಷ್ಟು ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಮಾರ್ಕ್ರಮ್
27ರ ಹರೆಯದ ಈ ಯುವ ದಾಂಡಿಗ ಅದ್ಭುತವಾಗಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಒಮ್ಮೆ ಲಯಕ್ಕೆ ಬಂದರೆ ಎಂಥಾ ಅದ್ಭುತ ಬೌಲಿಂಗ್ ವಿಭಾಗವನ್ನಾದರೂ ಪುಡಿಗಟ್ಟುವ ಸಾಮರ್ಥ್ಯ ಈ ಆಟಗಾರನಿಗಿದೆ. ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಕೂಡ ಮಾರ್ಕ್ರಮ್ ದೊಡ್ಡ ಹೊಡೆತ ಬಾರಿಸುವ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದರು.

ವೇಗಿ ಕಗಿಸೋ ರಬಾಡ
ದಕ್ಷಿಣ ಆಫ್ರಿಕಾದ ಸ್ಟಾರ್ ವೇಗದ ಬೌಲರ್ ಕಗಿಸೋ ರಬಾಡ ಈ ಬಾರಿಯ ಐಪಿಎಲ್‌ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಆಡಿದ 13 ಪಂದ್ಯಗಳಲ್ಲಿ ರಬಾಡ 23 ವಿಕೆಟ್ ಸಂಪಾದಿಸಿದರು. 12.52ರ ಸ್ಟ್ರೈಕ್‌ರೆಟ್‌ನಲ್ಲಿ ಅವು ದಾಳಿ ನಡೆಸಿದ್ದರು. ಕಗಿಸೋ ರಬಡಾ ಭಾರತದ ವಿರುದ್ಧ ಯಾವಾಗಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು ಈ ಬಾರಿಯೂ ಭಾರತದ ವಿರುದ್ಧ ಮಿಂಚುಹರಿಸುವ ಸಾಧ್ಯತೆಯಿದೆ. ಪರಿಣಾಮಕಾರಿ ಯಾರ್ಕರ್‌ಗಳು ಟೀಮ್ ಇಂಡಿಯಾ ದಾಂಡಿಗರಿಗೆ ಕಂಗೆಡಿಸುವ ಸಾಧ್ಯತೆಯಿದೆ. ಇನ್ನು ಭಾರತ ಕಳೆದ ಕೆಲ ತಿಂಗಳ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ 20 ವಿಕೆಟ್ ಸಂಪಾದಿಸಿದ್ದರು. ಈ ಎಲ್ಲವು ಕೂಡ ದಕ್ಷಿಣ ಆಫ್ರಿಕಾ ವೇಗಿಯ ಆತ್ಮಸ್ಥೈರ್ಯವನ್ನು ಸಹಜವಾಗಿಯೇ ಹೆಚ್ಚು ಮಾಡಲಿದೆ.

ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ ಇತ್ತೀಚಿನ ದಿನಗಳಲ್ಲಿ ಮಂಕಾದಂತೆ ಕಂಡುಬಂದಿದ್ದರು. ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಮೇಲೆ ಕೂಡ ಕರಿ ನೆರಳು ಆವರಿಸಿತ್ತು. ಆದರೆ ಇತ್ತೀಚೆಗಷ್ಟೇ ಅಂತ್ಯವಾದ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾದ ಈ ಸ್ಪೋಟಕ ಆಟಗಾರ ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಪರವಾಗಿ ಕೆಲ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಮಿಲ್ಲರ್ ತಂಡ ಚಾಂಪಿಯನ್ ಆಗಯವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆಡಿದ 16 ಪಂದ್ಯಗಳಲ್ಲಿ 481 ರನ್‌ಗಳಿಸಿರುವ ಡೇವಿಡ್ ಮಿಲ್ಲರ್ 68.71ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೆ ಆಡಲು ಸಜ್ಜಾಗಿರುವ ಮಿಲ್ಲರ್ ಐಪಿಎಲ್‌ನ ಫಾರ್ಮ್ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಡೇವಿಡ್ ಮಿಲ್ಲರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇದ್ದಷ್ಟು ಕಾಲ ಭಾರತ ತಂಡಕ್ಕೆ ಅಪಾಯ ತಪ್ಪಿದ್ದಲ್ಲ.


Click it and Unblock the Notifications












