ಇದೆಲ್ಲಾ ನಿನಗೆ ಬೇಕಿತ್ತಾ?: ಸುಮ್ಮನಿರಲಾರದೇ ಎಡವಟ್ಟು ಮಾಡಿಕೊಂಡು ಅವಮಾನಕ್ಕೊಳಗಾದ ಸಿರಾಜ್!

ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಮೊದಲಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಈಗಾಗಲೇ ಇತ್ತಂಡಗಳ ನಡುವೆ ಕಳೆದ ಡಿಸೆಂಬರ್ 26ರ ಬಾಕ್ಸಿಂಗ್ ಡೇನಂದು ಆರಂಭವಾಗಿದ್ದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದ್ದು ಐತಿಹಾಸಿಕ ದಾಖಲೆ ಬರೆದಿದೆ.
ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದಿದ್ದು ಈ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್‌ಗಳ ಅಮೋಘ ಜಯವನ್ನು ಸಾಧಿಸಿ ಇದೇ ಮೊದಲ ಬಾರಿಗೆ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಹೌದು, ಇದುವರೆಗೂ ಒಟ್ಟು 2 ಟೆಸ್ಟ್ ಪಂದ್ಯಗಳನ್ನು ಸೆಂಚೂರಿಯನ್ ಕ್ರೀಡಾಂಗಣದಲ್ಲಿ ಆಡಿದ್ದ ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲಿಯೂ ಕೂಡ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿರಲಿಲ್ಲ ಆದರೆ ಇದೀಗ ಮೂರನೇ ಬಾರಿಗೆ ಕಣಕ್ಕಿಳಿದು ಜಯ ಸಾಧಿಸುವುದರ ಮೂಲಕ ಮಹತ್ವದ ಸಾಧನೆ ಮಾಡಿದೆ. ವರ್ಷದ ಆರಂಭದಲ್ಲಿ ಗಬ್ಬಾ ಮತ್ತು ಮಧ್ಯಂತರದಲ್ಲಿ ಓವೆಲ್ ಹಾಗೂ ವರ್ಷಾಂತ್ಯದಲ್ಲಿ ಸೆಂಚುರಿಯನ್ ಕ್ರೀಡಾಂಗಣಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಟೀಮ್ ಇಂಡಿಯಾ ದೊಡ್ಡ ಸದ್ದು ಮಾಡುತ್ತಿದೆ.
ಇನ್ನು ಈ ಪಂದ್ಯದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 174 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 305 ರನ್‌ಗಳ ಗುರಿಯನ್ನು ನೀಡಿದೆ. ಹೀಗೆ ಟೀಮ್ ಇಂಡಿಯಾ ನೀಡಿದ ಗುರಿಯನ್ನು ಬೆನ್ನೆಟ್ಟಿರುವ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿತ್ತು. ಐದನೇ ದಿನದಾಟದಂದು ಆಟವನ್ನು ಮುಂದುವರಿಸಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಟೆಂಬಾ ಬವುಮಾಗೆ ಮೊಹಮ್ಮದ್ ಸಿರಾಜ್ ಅನಾವಶ್ಯಕವಾಗಿ ಚೆಂಡನ್ನು ಬೀಸಿ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು, 62ನೇ ಓವರ್ ಬೌಲಿಂಗ್ ವೇಳೆ ಮೊಹಮ್ಮದ್ ಸಿರಾಜ್ ಎಸೆದ ಎಸೆತವನ್ನು ಡಿಫೆಂಡ್ ಮಾಡಿದ ಟೆಂಬಾ ಬವುಮಾ ಚೆಂಡನ್ನು ನೇರವಾಗಿ ಮೊಹಮ್ಮದ್ ಸಿರಾಜ್ ಕೈ ಸೇರಿಸಿದರು. ಈ ಸಮಯದಲ್ಲಿ ಟೆಂಬಾ ಬವುಮಾ ರನ್ ಕದಿಯಲು ಯತ್ನವನ್ನೂ ಮಾಡದೇ ಕ್ರೀಸ್ ಒಳಗಡೆಯೇ ನಿಂತಿದ್ದರು. ಆದರೂ ಸಹ ತಾಳ್ಮೆ ಕಳೆದುಕೊಂಡ ಮೊಹಮ್ಮದ್ ಸಿರಾಜ್ ಚೆಂಡು ಕೈಗೆ ಸಿಗುತ್ತಿದ್ದಂತೆಯೇ ಟೆಂಬಾ ಬವುಮಾಗೆ ಜೋರಾಗಿ ಬೀಸಿದರು, ಪರಿಣಾಮ ಚೆಂಡು ಟೆಂಬಾ ಬವುಮಾ ಕಾಲಿಗೆ ಬಲವಾಗಿ ತಗುಲಿತು. ತಕ್ಷಣವೇ ತನ್ನ ತಪ್ಪಿನ ಅರಿವಾದ ಮೊಹಮ್ಮದ್ ಸಿರಾಜ್ ಟೆಂಬಾ ಬವುಮಾ ಬಳಿ ಬಂದು ಮಾತನಾಡಿದರು. ಆದರೆ ಮೊಹಮ್ಮದ್ ಸಿರಾಜ್ ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದ ತುಂಬಾ ನೆಟ್ಟಿಗರು ಕಿಡಿಕಾರುತ್ತಿದ್ದು ಈ ಕೆಳಕಂಡಂತೆ ಹರಿಹಾಯ್ದಿದ್ದಾರೆ.

ಇದು ಕ್ರಿಕೆಟ್ ಅಲ್ಲವೇ ಅಲ್ಲ!
ಮೊಹಮ್ಮದ್ ಸಿರಾಜ್ ಅವರ ಆಟವನ್ನು ನಾನು ಮೆಚ್ಚಿಕೊಂಡಿದ್ದೆ ಮತ್ತು ಬೌಲಿಂಗ್ ಮಾಡುವ ವೇಳೆ ಆತನಲ್ಲಿ ಇರುತ್ತಿದ್ದ ಉದ್ವೇಗ ನನಗೆ ಇಷ್ಟವಾಗುತ್ತಿತ್ತು. ಆದರೆ ಇದೀಗ ಟೆಂಬಾ ಬವುಮಾ ವಿರುದ್ಧ ಬೇಕಂತಲೇ ಚೆಂಡನ್ನು ಎಸೆದಿರುವ ಮೊಹಮ್ಮದ್ ಸಿರಾಜ್ ಅವರ ನಡೆ ನಿಜಕ್ಕೂ ಬೇಸರ ಮೂಡಿಸಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರನಿಗೆ ಉದ್ದೇಶಪೂರ್ವಕವಾಗಿ ಚೆಂಡನ್ನು ಬೀಸುವುದು ಕ್ರಿಕೆಟ್ ಅಲ್ಲವೇ ಅಲ್ಲ ಎಂದು ನೆಟ್ಟಿಗನೋರ್ವ ಕಿಡಿಕಾರಿದ್ದಾನೆ.

ವಿಕೆಟ್ ಪಡೆಯಲು ಆಗುವುದಿಲ್ಲ ಎಂದು ನೋಯಿಸಲು ಮುಂದಾದ ಸಿರಾಜ್
ಸಿರಾಜ್ ಟೆಂಬಾ ಬವುಮಾ ಅವರನ್ನು ನೋಯಿಸಲು ಪ್ರಯತ್ನಿಸುತ್ತಿದ್ದಾರೆ ಏಕೆಂದರೆ ಆತನಿಗೆ ಟೆಂಬಾ ಬವುಮಾ ಅವರ ವಿಕೆಟ್ ಪಡೆಯಲು ಆಗುವುದಿಲ್ಲ ಎಂಬ ವಿಷಯ ಚೆನ್ನಾಗಿ ಅರಿತಿದೆ ಎಂದು ನೆಟ್ಟಿಗನೋರ್ವ ಮೊಹಮ್ಮದ್ ಸಿರಾಜ್ ವಿರುದ್ಧ ಚಾಟಿ ಬೀಸಿದ್ದಾನೆ.

ಬವುಮಾ ರನ್ ಓಡಲು ಯತ್ನಿಸಿಯೇ ಇಲ್ಲ
ಮತ್ತೋರ್ವ ನೆಟ್ಟಿಗ ಮೊಹಮ್ಮದ್ ಸಿರಾಜ್ ನಡೆಯ ಕುರಿತು ಬೇಸರ ವ್ಯಕ್ತಪಡಿಸಿದ್ದು ಟೆಂಬಾ ಬವುಮಾ ರನ್ ಓಡಲು ಇನ್ನೂ ಕ್ರೀಸ್ ಬಿಟ್ಟೇ ಇರಲಿಲ್ಲ, ಆಗಲೇ ಮೊಹಮ್ಮದ್ ಸಿರಾಜ್ ಕಾರಣವಿಲ್ಲದೆ ಸುಖಾಸುಮ್ಮನೆ ಚೆಂಡನ್ನು ಎಸೆದದ್ದು ತುಂಬಾ ಹೀನವಾದದ್ದು ಎಂದು ಬರೆದುಕೊಂಡಿದ್ದಾರೆ. ಹೀಗೆ ಇನ್ನೂ ಮುಂತಾದ ಹಲವಾರು ನೆಟ್ಟಿಗರು ಮೊಹಮ್ಮದ್ ಸಿರಾಜ್ ವಿರುದ್ಧ ಕಿಡಿಕಾರುತ್ತಿದ್ದು ಸುಮ್ಮನೆ ಇರಲಾರದೇ ಈ ವಿವಾದವೆಲ್ಲಾ ನಿನಗೆ ಬೇಕಿತ್ತಾ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications