
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ನಂತರ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಜನವರಿ 10 ರಂದು ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಹಲವು ಹಿರಿಯ ಆಟಗಾರರು ಏಕದಿನ ಸರಣಿಗಾಗಿ ತಂಡಕ್ಕೆ ವಾಪಸಾಗಿದ್ದಾರೆ.
ಭಾರತ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆ ಆರಂಭಿಸಲಿದೆ, ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದಲೇ ತಯಾರಿ ಆರಂಭವಾಗಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಲಿದ್ದಾರೆ.
ಗಾಯದ ಕಾರಣದಿಂದ ಬಾಂಗ್ಲಾದೇಶದ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡ ಮೊಹಮ್ಮದ್ ಶಮಿ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಸಿದ್ಧತೆ ಆರಂಭಿಸಿದ್ದಾರೆ. ಬೌಲಿಂಗ್‌ನಲ್ಲಿ ಪ್ರಭಾವಿಯಾಗಿರುವ ಶಮಿ, ಬ್ಯಾಟಿಂಗ್ ಕೂಡ ಅಭ್ಯಾಸ ಮಾಡುತ್ತಿದ್ದಾರೆ.
ನೆಟ್ಸ್‌ನಲ್ಲಿ ಅವರು ಅಭ್ಯಾಸ ಮಾಡುತ್ತಿರುವ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾವು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
2022ರ ಡಿಸೆಂಬರ್ ನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಾಗಿ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಏಕದಿನ ಸರಣಿಗಾಗಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡ ಕಾರಣ ಅವರು ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು.
ಬುಮ್ರಾ-ಶಮಿ ಜೋಡಿಯ ಮೋಡಿ
ಅನುಭವಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಜೊತೆಯಾಗಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್ ಕೂಡ ಕಳೆದುಕೊಂಡಿದ್ದ ಬುಮ್ರಾ ಶ್ರೀಲಂಕಾ ವಿರುದ್ಧ ಸರಣಿಗಾಗಿ ಆಯ್ಕೆಯಾಗಿದ್ದಾರೆ. ಶಮಿ ಮತ್ತು ಬುಮ್ರಾ ಜೋಡಿ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಭಾರತದ ಬೌಲಿಂಗ್ ವಿಭಾಗ ಸಾಕಷ್ಟು ಶಕ್ತಿಯುತವಾಗಿದೆ.
ಏಕದಿನ ಸರಣಿಗೆ ಮೊದಲು ಆಯ್ಕೆಯಾದ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಹೆಸರು ಇರಲಿಲ್ಲ. ಅವರು 100 ಪ್ರತಿಶತ ಫಿಟ್ ಆಗಿರುವುದು ಖಚಿತವಾದ ನಂತರ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಯಿತು. ಇವರಿಬ್ಬರ ಫಿಟ್‌ನೆಸ್ ಮತ್ತು ಫಾರ್ಮ್ ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಯುವ ವೇಗಿಗಳ ಜೊತೆ ಇವರಿಬ್ಬರೂ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯ ಜನವರಿ 10 ರಂದು ಗುವಾಹಟಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಕೋಲ್ಕತ್ತಾದಲ್ಲಿ ಜನವರಿ 12 ರಂದು ನಡೆಯಲಿದ್ದು, ಜನವರಿ 15ರಂದು ಸರಣಿಯ ಕೊನೆಯ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ.

ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್.