
ಜನವರಿ 10 ರಂದು ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೂರು ವರ್ಷಗಳ ನಂತರ ಅವರು ತವರಿನಲ್ಲಿ ಶತಕ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮಾಡಿದರು.
ಶ್ರೀಲಂಕಾ ವಿರುದ್ಧ ಅವರು ಅರ್ಧಶತಕ ಗಳಿಸಿದಾಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 12500 ರನ್ ಪೂರೈಸಿದರು. 266 ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ಸಾಧಿಸುವ ಮೂಲಕ ವೇಗವಾಗಿ 12500 ರನ್ ಗಳಿಸಿದ ಕ್ರಿಕೆಟರ್ ಎನಿಸಿಕೊಂಡರು.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 12500 ರನ್ ಗಳಿಸಲು 300 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ, ಕೊಹ್ಲಿ ಈ ಸಾಧನೆ ಮಾಡಲು 266 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಮೂರು ವರ್ಷಗಳಿಂದ ರನ್ ಬರ ಅನುಭವಿಸುತ್ತಿದ್ದ ವಿರಾಟ್ ಕೊಹ್ಲಿ, 2022ರ ಏಷ್ಯಾಕಪ್‌ನಿಂದ ಮತ್ತೆ ಫಾರ್ಮ್ ಕಂಡುಕೊಂಡರು. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಅವರು 71ನೇ ಶತಕವನ್ನು ಪೂರೈಸಿದರು.
ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 2022ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ತಮ್ಮ 72ನೇ ಶತಕವನ್ನು ಸಿಡಿಸಿದ್ದರು.

ಸತತವಾಗಿ ಎರಡು ಶತಕ ಸಿಡಿಸಿದ ಕೊಹ್ಲಿ
ಸತತವಾಗಿ ಎರಡು ಶತಕ ಸಿಡಿಸುವ ಮೂಲಕ ಅವರು ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. 2023ರ ಆರಂಭದಲ್ಲೇ ಕೊಹ್ಲಿ ಫಾರ್ಮ್ ಕಂಡುಕೊಂಡಿರುವುದು ಭಾರತ ತಂಡದ ಆತಂಕವನ್ನು ದೂರ ಮಾಡಿದೆ. 2023ರ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ಕೊಹ್ಲಿ ಫಾರ್ಮ್ ಅಗತ್ಯವಾಗಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು 87 ಎಸೆತಗಳಲ್ಲಿ ತಮ್ಮ 73ನೇ ಶತಕವನ್ನು ಪೂರೈಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸೇರಿದ್ದವು.

ಬೃಹತ್ ಮೊತ್ತ ಕಲೆಹಾಕಿದ ಟೀಂ ಇಂಡಿಯಾ
ಕೊಹ್ಲಿಯ ಶತಕದ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 373 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ರೋಹಿತ್ ಶರ್ಮಾ 67 ಎಸೆತಗಳಲ್ಲಿ 83 ರನ್ ಗಳಿಸಿದರು. ಶುಭಮನ್ ಗಿಲ್ ಕೂಡ 60 ಎಸೆತಗಳಲ್ಲಿ 70 ರನ್ ಗಳಿಸಿ ಭಾರತಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು.