Ind vs SL 2nd T20: ಇಂತಹ ಆಟಗಾರರಿಗಾಗಿ ಹುಡುಕುತ್ತಿದ್ದೇವೆ ಎಂದ ರಾಹುಲ್ ದ್ರಾವಿಡ್

ಭಾರತ ತಂಡವು ವೇಗದ ಆಲ್‌ರೌಂಡರ್ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ. ಸಮರ್ಥವಾಗಿ ಬ್ಯಾಟಿಂಗ್ ಮಾಡಬಲ್ಲ ವೇಗಿಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಪುಣೆಯ ಎಂಸಿಎ ಅಂಗಳದಲ್ಲಿ ನಡೆದ ಶ್ರೀಲಂಕಾ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 16 ರನ್‌ಗಳಿಂದ ಸೋಲನುಭವಿಸಿತು. ಟಾಸ್ ಗೆದ್ದು ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 190 ರನ್ ಗಳಿಸುವ ಮೂಲಕ 16 ರನ್‌ಗಳ ಸೋಲನುಭವಿಸಿತು.
ಟೀಂ ಇಂಡಿಯಾ 57 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 65 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 51 ರನ್, ಶಿವಂ ಮಾವಿ 26 ರನ್ ಗಳಿಸುವ ಮೂಲಕ ಹೋರಾಟ ಮಾಡಿದರು.

ವೇಗದ ಬೌಲಿಂಗ್ ಆಲ್‌ರೌಂಡರ್ ಬೇಕು
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಭಾರತಕ್ಕೆ ಹಾರ್ದಿಕ್ ಪಾಂಡ್ಯರಂತ ಆಲ್‌ರೌಂಡರ್‌ಗಳ ಅಗತ್ಯವಿದೆ ಎಂದು ಹೇಳಿದರು. "ವೇಗದ ಬೌಲಿಂಗ್ ಆಲ್‌ರೌಂಡರ್ ವಿಭಾಗದಲ್ಲಿ ಭಾರತ ತಂಡ ಪಾಂಡ್ಯ ಮೇಲೆ ಹೆಚ್ಚಾಗಿ ಅವಲಂಬಿಸಿದೆ. ವೇಗದ ಆಲ್‌ರೌಂಡರ್ ಗಳು ತಂಡಕ್ಕೆ ಅಗತ್ಯವಿದ್ದು, ಹುಡಕಾಟ ಮಾಡುತ್ತಿದ್ದೇವೆ. ಇಂದಿನ ಪಂದ್ಯದಲ್ಲಿ ಶಿವಂ ಮಾವಿ ಬ್ಯಾಟಿಂಗ್ ಮಾಡಿದ್ದು ನೋಡಿ ಸಂತಸವಾಗಿದೆ, ವೇಗದ ಬೌಲರ್ ಒಬ್ಬರು ಹಾಗೆ ಬ್ಯಾಟಿಂಗ್ ಮಾಡಿದಾಗ ಸಹಜವಾಗಿಯೇ ಖುಷಿಯಾಗುತ್ತದೆ" ಎಂದು ಹೇಳಿದರು.
ಮಾಡಬಾರದ ತಪ್ಪು ನಾವು ಮಾಡಿದೆವು!: ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮಾತು

ಬ್ಯಾಟಿಂಗ್ ಬಗ್ಗೆ ದ್ರಾವಿಡ್ ಮೆಚ್ಚುಗೆ
ಭಾರತ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆರನೇ ವಿಕೆಟ್‌ಗೆ ಅಕ್ಷರ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್ 91 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ತಮ್ಮ ಫಾರ್ಮ್ ಕಂಡುಕೊಂಡರೆ, ಅಕ್ಷರ್ ಪಟೇಲ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.
ಅಕ್ಷರ್ ಪಟೇಲ್ ಬ್ಯಾಟಿಂಗ್ ಬಗ್ಗೆ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದರು. "ಆತ ಬ್ಯಾಟಿಂಗ್ ಸುಧಾರಣೆ ಮಾಡಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ. ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಉತ್ತಮವಾಗಿದ್ದಾರೆ. ಬ್ಯಾಟಿಂಗ್ ಸುಧಾರಣೆ ಮಾಡುವ ಬಗ್ಗೆ ಅವರು ಕಷ್ಟಪಡುತ್ತಿದ್ದಾರೆ. ತನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಜಡೇಜಾ ಅನುಪಸ್ಥಿಯಲ್ಲಿ ಆತ ಉತ್ತಮ ಬ್ಯಾಕಪ್" ಎಂದು ಹೇಳಿದರು.
ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 31 ಎಸೆತಗಳಲ್ಲಿ 65 ರನ್ ಗಳಿಸಿದರು. ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಕ್ಷರ್ ಅಜೇಯ 31 ರನ್ ಗಳಿಸಿದ್ದರು.

ಬೌಲಿಂಗ್ ಬಗ್ಗೆ ದ್ರಾವಿಡ್ ಪ್ರತಿಕ್ರಿಯೆ
ಪುಣೆಯ ಪಂದ್ಯದಲ್ಲಿ ಬೌಲರ್ ಗಳ ಕಳಪೆ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಅದರಲ್ಲೂ ಅರ್ಷದೀಪ್ ಸಿಂಗ್ 5 ನೋಬಾಲ್ ಎಸೆದು ಕೆಟ್ಟ ದಾಖಲೆ ಮಾಡಿದರು. ವೇಗಿಗಳು ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಹುಲ್ ದ್ರಾವಿಡ್ ಬೌಲರ್ ಗಳನ್ನು ಸಮರ್ಥಿಸಿಕೊಂಡರು. ಅವರಿನ್ನೂ ಯುವ ಆಟಗಾರರು ತಮ್ಮ ಪ್ರದರ್ಶನ ಸುಧಾರಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆ ಎಂದು ಹೇಳಿದರು.
ಶಿವಂ ಮಾವಿ ಇನ್ನೂ ಎರಡನೇ ಪಂದ್ಯವನ್ನಾಡುತ್ತಿದ್ದಾರೆ. ಅರ್ಷ್‌ದೀಪ್ ಸಿಂಗ್ ಒಂದು ತಿಂಗಳ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಿದ್ದಾರೆ, ಉಮ್ರಾನ್ ಮಲಿಕ್ ಕೂಡ ಬೌಲಿಂಗ್‌ನಲ್ಲಿ ಗಮನಾರ್ಹ ಸುಧಾರಣೆ ಮಾಡಿಕೊಂಡಿದ್ದಾರೆ ಎಂದು ದ್ರಾವಿಡ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications